ರಾಣಿಬೆನ್ನೂರು:
ಶಾಂತಿ, ಸಮಾಧಾನ, ಸಮಯ ಪ್ರಜ್ಞೆಯಿಂದ ಮಾತ್ರ ಮನುಷ್ಯನು ಯಾವುದೇ ಕ್ಷೇತ್ರದಲ್ಲಾದರೂ ಸಾಧನೆಗೈಯಲು ಸಾಧ್ಯ. ಕೋಪ, ಅಸೂಯೆ, ದರ್ಪದಿಂದ ಯಾವುದೇ ಕೆಲಸವು ಪೂರಿಪೂರ್ಣವಾಗಲ್ಲ ಎಂದು ಇಲ್ಲಿನ ಉಮಾಶಂಕರ ನಗರದ ವಿಶ್ವವಿಭು ರೇಕಿ ಧ್ಯಾನಪೀಠದ ಆಚಾರ್ಯ ಶ್ರೀಮೌನೇಶ್ವರ ಗುರೂಜಿ ಹೇಳಿದರು.
ಶನಿವಾರ ಇಲ್ಲಿನ ಉಮಾಶಂಕರ ನಗರದ ಶ್ರೀ ವಿಶ್ವವಿಭು ರೇಕಿ ಧ್ಯಾನ ಪೀಠ (ಆಧ್ಯಾತ್ಮಿಕ ಶಕ್ತಿ ಉಪಚಾರ ಕೇಂದ್ರ)ದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಪತಿ ಶ್ಲ್ಯಾಘನೀಯ ಸೇವಾ ಪದಕ ಪುರಸ್ಕಾರ ವಿಜೇತ ನಗರದ ಶಹರ ಎಎಸ್‍ಐ ಕೆ.ಸಿ.ಕೋಮಲಾಚಾರಿ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕೆಲಸದ ಜೊತೆ ಆಧ್ಯಾತ್ಮವನ್ನು ಒಂದು ಭಾಗವಾಗಿಸಿ ಕೊಂಡಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಎಎಸ್‍ಐ ಕೆ.ಸಿ.ಕೋಮಲಾಚಾರ ಅವರು ಉತ್ತಮ ಉದಾಹರಣೆ, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅಷ್ಟು ಸುಲಭದ ಮಾತಲ್ಲ, ತಮ್ಮ ಕುಟುಂಬದ ಜವಾಬ್ದಾರಿಯ ಜೊತೆಗೆ ಜನರ ಸಮಸ್ಯೆಗಳಿಗೆ ತಾಳ್ಮೆಯಿಂದ ಸ್ಪಂದಿಸಿರಿಸುವುದು, ಸಮಯವನ್ನು ಲೆಕ್ಕಿಸದೆ ಅಪಘಾತ ಸ್ಥಳಗಳಿಗೆ, ಗಲಭೆಗಳು ಇದ್ದಲ್ಲಿ ತೆರಳಿ ನಿಯಂತ್ರಿಸುವುದು ಇವರ ಕರ್ತವ್ಯ ನಿಷ್ಠೆ ಎಂದರು.
ಈ ನಿಟ್ಟಿನಲ್ಲಿ ಕೆ.ಸಿ.ಕೋಮಲಾಚಾರಿ ಅವರ ವ್ಯಕ್ತಿತ್ವ ವಿಭಿನ್ನವಾದದ್ದು, ಅವರ ಮೃದು ಸ್ವಭಾವ, ಕಾಳಜಿ, ಕೆಲಸದ ಬಗ್ಗೆ ಶ್ರದ್ಧೆ ಇವುಗಳನ್ನು ನೋಡಿದರೆ ಇವರೊಬ್ಬ ವಿಶೇಷ ವ್ಯಕ್ತಿ ಎಂದೆಸುತ್ತದೆ, ತಮ್ಮ ಕೆಲಸದ ಜೊತೆಗೆ ಗೋವುಗಳ ಸಂರಕ್ಷಣೆ, ಯೋಗಶಿಬಿರಗಳಲ್ಲಿ ಭಾಗವಹಿಸಿ ಯೋಗ ತರಬೇತಿ ನೀಡುವುದು, ಆಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡುವುದು, ಅಂಧ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಮತ್ತು ಸಾಹಿತ್ಯ, ಕಥೆ, ಕವನಗಳನ್ನು ಬರೆಯುವ ಹವ್ಯಾಸ ಹೊಂದಿರುವ ಇವರು ಇತರೆ ಪೋಲಿಸ್ ಅಧಿಕಾರಿಗಳಿಗಿಂತ ವೈಶಿಷ್ಟ್ಯತೆ ಹೊಂದಿದ್ದಾರೆ ಎಂದು ಗುರೂಜಿ ಹೇಳಿದರು.
ಇವರ ಸಾಧನೆಯನ್ನು ಗುರುತಿಸಿ ಸರ್ಕಾರವು ಪ್ರಶಸ್ತಿ ನೀಡಿರುವುದು ನಮ್ಮ ಜಿಲ್ಲೆಗೆ ಹೆಸರು ತಂದಿದೆ. ಹಾಗೇ ಪ್ರತಿಯೊಬ್ಬರು ಅಸಾಧ್ಯವಾದುದ್ದನ್ನು ಸಾಧಿಸಬಹುದು, ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಪ್ರತಿಶತ 5 ರಷ್ಟು ತನ್ನ ಮೆದುಳನ್ನು ಬಳಸಿಕೊಳ್ಳುತ್ತಾನೆ. ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಮೆದುಳಿನ ಸಂಪೂರ್ಣ ಸಾಮಥ್ರ್ಯವನ್ನು ಬಳಸಿಕೊಂಡು ಸಾಧನೆ ಮಾಡಬಹುದು ಎಂದು ನುಡಿದರು.
ಶಹರ ಎ.ಎಸ್.ಐ ಮಾತನಾಡಿ, ಅಮಾಯಕರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ರಕ್ಷಣೆಗಾಗಿ ಪೊಲೀಸ್ ಠಾಣೆಗೆ ದಾವಿಸುತ್ತಾರೆ. ಪೊಲೀಸರು ಶಾಂತಿ, ಸಮಾಧಾನದಿಂದ ಅವರ ಕಷ್ಟ, ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು. ಅನೇಕರು ಪೊಲೀಸರನ್ನು ಕಂಡು ಅಂಜುವುದು ಉಂಟು. ಧೈರ್ಯದಿಂದ ಧಾವಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಅವರ ಭಾಷೆ ಒರಟಾಗಿರಬಹುದು, ಆದರೆ ಅವರ ಹೃದಯ ಮೃದು ಅವರಿಗೂ ತಮ್ಮದೆಯಾದ ಸಂಸಾರವಿದ್ದು ಜನರ ಸೇವೆಗೆ ಬಂದಿರುತ್ತಾರೆಯೇ ಹೊರತು ಜನರ ಕಂಡು ದರ್ಪ ತೋರಿಸುವುದಕ್ಕಲ್ಲ ಎಂದರು.
ನನ್ನ ಈ ಯಶಸ್ಸಿಗೆ ಆಧ್ಯಾತ್ಮ ಗುರುಗಳು ಹಾಗೂ ನನ್ನ ಪತ್ನಿಯು ಸಹಕಾರ ಇದ್ದು, ನನ್ನ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮನಗಂಡು ನನ್ನ ವೃತ್ತಿ ಬಾಂಧವರು ನನಗೆ ತೋರಿಸಿದ ಪ್ರೀತಿ, ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ. ನಮ್ಮೆಲ್ಲ ದೌರ್ಬಲ್ಯಗಳನ್ನು ಕಳಚಿ ಸತತ ಶ್ರಮ, ತಾಳ್ಮೆ ಹಾಗೂ ಪರಮಾತ್ಮನ ಮೇಲೆ ನಂಬಿಕೆಯನ್ನು ಇಟ್ಟಿರಬೇಕು ಎಂದು ಕೋಮಲಾಚಾರ ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಸಿ.ಕೋಮಲಾಚಾರಿ ದಂಪತಿಗಳನ್ನು ಶ್ರೀ ಆಚಾರ್ಯ ಮೌನೇಶ್ವರ ಗುರೂಜಿ ಸನ್ಮಾನಿಸಿದರು. ಲಕ್ಷ್ಮೀದೇವಿ, ಗಾಯತ್ರಾ ಕೋಮಲಾಚಾರಿ, ಶುಭಾ ನಿಂಬರಗಿ, ಮಾರ್ತಾಂಡಪ್ಪ ಕಮ್ಮಾರ, ಎಸ್.ಎಂ.ನಿಂಬರಗಿ, ಅರುಣ ಎಸ್, ಕೆ.ಪಿ.ಬಡಿಗೇರ, ರಾಜೇಶ್ವರಿ ಕಮ್ಮಾರ, ಪತ್ರಕರ್ತ ವಿಶ್ವನಾಥ ಕುಂಬಳೂರು ಸೇರಿದಂತೆ ಮತ್ತಿತರರು ಇದ್ದರು. ಕಾವ್ಯಾ ಶಿರಹಟ್ಟಿ ಹಾಗೂ ಪ್ರೇಮಾ ನಿಂಬರಗಿ ಪ್ರಾರ್ಥಿಸಿದರು. ಎಂ.ಟಿ. ಬಡಿಗೇರ ನಿರೂಪಿಸಿ ವಂದಿಸಿದರು.