ಕೆಶಿಪ್‍ನಿಂದ ಅಪೂರ್ಣ ಕಾಮಗಾರಿ : ಸಾರ್ವಜನಿಕರಿಗೆ ತೊಂದರೆ

ಪಾವಗಡ

ಪಟ್ಟಣದಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಕೆಶಿಪ್ ನಿಂದ ರಸ್ತೆ ಅಗಲೀಕರಣ ಕಾಮಗಾರಿಯಾಗಿದೆ. ರಸ್ತೆ ಹಾಗೂ ಚರಂಡಿಗಳ ನಿರ್ಮಾಣದಲ್ಲಿ ಭಾರಿ ಅವ್ಯವಹಾರ ಎಸಗಲಾಗಿದೆ ಎಂಬ ಆರೋಪಗಳು ಪದೆಪದೆ ಕೇಳಿಬರುತ್ತಿದೆ. ಈ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕವಾಗಿದೆ ಎಂಬ ಸಾರ್ವಜನಿಕರು ದೂರುಗಳಿಗೆ ಇಂಬು ನೀಡುವಂತಿದೆ. ಇವರು ಅಧರ್ಕ್ಕೆ ಚರಂಡಿ ಕಾಮಗಾರಿ ನಿಲ್ಲಿಸಿದ್ದಾರೆ. ಟೋಲ್‍ಗೇಟ್‍ನಿಂದ ಪೆನುಕೊಂಡ ಮಾರ್ಗದಲ್ಲಿ ಸಂಚರಿಸಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಚರಂಡಿ ನೀರು ಈ ರಸ್ತೆಯ ಮೇಲೆ ಹರಿದು ದುರ್ನಾತ ಬೀರುತ್ತಿದ್ದು, ಇದರಿಂದ ಪಟ್ಟಣದ ಸಾರ್ವಜನಿಕರು ಪುರಸಭೆ ಹಾಗೂ ಕೆ. ಶಿಪ್‍ರ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.

ಚರಂಡಿ ನೀರು ಎಲ್ಲಿಂದ ಹರಿಯುತ್ತಿದೆ?

ಬಳ್ಳಾರಿ ಮಾರ್ಗದಲ್ಲಿ ನ್ಯಾಯಾಲಯದ ಮುಂಭಾಗ ಇರುವ ಲಾಡ್ಜ್ ಮತ್ತಿತರ ಕಟ್ಟಡಗಳ ಬಚ್ಚಲು, ಶೌಚಾಲಯ ಮತ್ತಿತರ ಕೊಳಚೆ ನೀರು ಹರಿಯುತ್ತಿದೆ. ಟೋಲ್ ಗೇಟ್ ಬಳಿ ಇರುವ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗದ ಕಚೇರಿಯ ಮುಂಭಾಗ ಇರುವ ಅಂಗಡಿ ಮಳಿಗೆಗಳ ಕೊನೆಯಲ್ಲಿ ಚರಂಡಿಯನ್ನು ಅವೈಜ್ಞಾನಿವಾಗಿ ನಿರ್ಮಾಣ ಮಾಡಿ, ಅಧರ್ಕ್ಕೆ ಬಿಟ್ಟಿದ್ದಾರೆ.

ಈ ಚರಂಡಿ ನೀರು ಮುಂದೆ ಹರಿಯಲು ಸ್ಥಳವಿಲ್ಲದೆ, ಚರಂಡಿ ತುಂಬಿಹೋಗಿ, ಪೆನುಕೊಂಡ ರಸ್ತೆಗೆಲ್ಲಾ ಹರಿದು, ಲೋಕೋಪಯೋಗಿ ಕಚೇರಿ ಹಾಗೂ ದಿವಂಗತ ಗಾರೆ ಸುಬ್ಬರಾಯಪ್ಪ ನವರ ಮನೆಯ ಮುಂಭಾಗ ಶೇಖರಣೆಯಾಗಿ ದುರ್ನಾತ ಬೀರುತ್ತಿದೆ. ಅಲ್ಲದೆ ಈ ನೀರು ಬಂಡೆ ಶಫಿ ಅಂಗಡಿಯೊಳಗೆ ನುಗ್ಗಿದೆ. ಕಳೆದ 15 ದಿನಗಳಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಈ ಭಾಗದಲ್ಲಿ ವಾಸವಿರುವ ಮನೆಗಳಲ್ಲಿರುವವರು ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳ ಭಯದಲ್ಲಿದ್ದಾರೆ.

ಈ ರಸ್ತೆಯ ಮಾರ್ಗದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು, ಆದರ್ಶವಿದ್ಯಾಲಯದ, ರಾಷ್ಟ್ರಪ್ರಗತಿ, ಜೈಗುರುದೇವ ಶಾಲೆಗಳ ವಿದ್ಯಾರ್ಥಿಗಳು ಬೆಳಗ್ಗೆ, ಸಂಜೆ ಸಂಚರಿಸುತ್ತಿದ್ದು, ಬೆಸ್ಕಾಂ, ತಾ.ಪಂ. ಬಿ.ಆರ್.ಸಿ. ಕಚೇರಿ ಸಿಬ್ಬಂದಿ,

ಶ್ರೀರಾಮಕೃಷ್ಣಸೇವಾಶ್ರಮ, ಶ್ರೀ ರಾಘವೇಂದ್ರ ದೇವಾಲಯ, ಶಾಂತಿ ಬೃಂದಾವನ ದೇವಸ್ಥಾನಗಳು, ಸರ್ವಧರ್ಮ ಆಶ್ರಮಗಳಿದ್ದು, ನಿತ್ಯ ನೂರಾರು ಭಕ್ತರು ಸಂಚರಿಸುತ್ತಾರೆ.À ರೊಪ್ಪಕ್ಕೆ ಹೋಗಲು ಹಾಗೂ ಆಂಧ್ರದ ರೊದ್ದಂ, ಪೆನುಕೊಂಡ ಪಟ್ಟಣ ಹಾಗೂ ಅನಂತಪುರ ಜಿಲ್ಲೆಗೆ ಸರ್ಕಾರಿ ಬಸ್‍ಗಳು ಮತ್ತು ಖಾಸಗಿ ವಾಹನಗಳು ಸಂಚರಿಸುತ್ತಿವೆ. ಕಳೆದ 15 ದಿನಗಳಿಂದ ಚರಂಡಿ ನೀರು ಸಾರ್ವಜನಿಕರ ಮೈ ಮೇಲೆ ಚಿಮ್ಮುತ್ತಿದ್ದು, ಈ ಸ್ಥಳಕ್ಕೆ ಬಂದಾಗ ಚರಂಡಿ ನೀರು ಎಲ್ಲಿ ಸಿಡಿಯುತ್ತದಯೋ ಎಂದು ಓಡಿ ಹೋಗುವ ಸನ್ನಿವೇಶಗಳು ಕಾಣಸಿಗುತ್ತವೆ. ಆದ್ದರಿಂದ ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಪಟ್ಟಣದ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಪುರಸಭಾ ಸದಸ್ಯ ವಸಂತ್ ಕುಮಾರ್ ಪ್ರಗತಿ ಜೊತೆ ಮಾತನಾಡಿ, ಪಟ್ಟಣದಲ್ಲಿ ಕೆಶಿಪ್‍ನಿಂದ ರಸ್ತೆ ಅಗಲೀಕರಣ ಹಾಗೂ ಚರಂಡಿ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ಮಾಡಿದ್ದು, ಬಳ್ಳಾರಿ ರಸ್ತೆಯ ಮಾರ್ಗದ ಎಡ ಭಾಗದಲ್ಲಿ ನಿರ್ಮಾಣ ಮಾಡಿರುವ ಚರಂಡಿ ತುಂಬಿ ಪೆನುಕೊಂಡ ರಸ್ತೆಗೆ ಬಚ್ಚಲು ನೀರು, ಮಲಮೂತ್ರದ ನೀರು ಹರಿಯುತ್ತಿದ್ದು, ಕೆಶಿಪ್ ಈ ಸಮಸ್ಯೆ ಪರಿಹರಿಸಬೇಕು. ಆದರೆ ಪುರಸಭೆಯಿಂದಲೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದಿದ್ದಾರೆ.

ನಮ್ಮ ಹಕ್ಕು ಸಂಸ್ಥೆಯ ತಾ. ಅಧ್ಯಕ್ಷ ಗಿರಿ ಫ್ಯಾಶನ್‍ನ ಗಿರಿ ಮಾತನಾಡಿ, ಚರಂಡಿ ನೀರು ಹರಿಯುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತಿದೆ. ಕಳೆದ 15 ದಿನಗಳಿಂದ ನಾಲ್ಕೈದು ಅಪಘಾತಗಳಾಗಿವೆ. ಎಲ್ಲಿ ಚರಂಡಿ ನೀರು ಮೈಮೇಲೆ ಚಿಮ್ಮುತ್ತದೊ ಎಂಬ ಆತಂಕದಲ್ಲಿ ಸಂಚರಿಸಬೇಕು. ಈಗಲಾದರೂ ಸಂಬಂಧಿಸಿದವರು ಸರಿಪಡಿಸಿ ಈ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಪಾವಗಡ ಪುರಸಭೆಯ ಮುಖ್ಯಾಧಿಕಾರಿ ಜಿ.ನವೀನ್‍ಚಂದ್ರ ಮಾತನಾಡಿ, ಈ ಅವಾಂತರಕ್ಕೆ ಕೆಶಿಪ್ ಎಂಜನಿಯರ್‍ಗಳು ಕಾರಣರಾಗಿದ್ದಾರೆ. ಕಾಮಗಾರಿಯನ್ನು ಸರಿಪಡಿಸಬೇಕು. ಈ ಬಗ್ಗೆ ಕಾರ್ಮಿಕ ಸಚಿವ ವೆಂಕಟರವಣಪ್ಪ ಕೆಶಿಪ್ ಎಂಜಿನಿಯರ್‍ಗಳಿಗೆ ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದಾರೆ. ಆದರೆ ಸಾರ್ವಜನಿಕರ ಹಿತ ದೃಷ್ಟಿಯಿಂದ ಪುರಸಭೆಯಿಂದಲೇ ಈ ಚರಂಡಿ ಹರಿಯುವ ಬಳ್ಳಾರಿ ರಸ್ತೆಯ ಮಾರ್ಗದ ಸರ್ಕಾರಿ ಮಹಿಳಾ ಕಾಲೇಜಿನ ಹಿಂಭಾಗದಲ್ಲಿ ಹಾದು ಹೋಗುವ ಚರಂಡಿಗೆ ಮಾರ್ಗ ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link