ಹುಳಿಯಾರು
ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ವೈಚಾರಿಕ ಮನೋಭಾವನೆ ಮೂಡಿಸುವುದೇ ಪವಾಡ ರಹಸ್ಯ ಬಯಲು ಕಾರ್ಯಕ್ರಮದ ಉದ್ದೇಶವಾಗಿದ್ದು ಅದರಲ್ಲೂ ಗ್ರಾಮೀಣ ಭಾಗದ ಜನರಲ್ಲಿನ ಮುಗ್ಧತೆಯನ್ನು ಪವಾಡದ ಹೆಸರಿನಲ್ಲಿ ವಂಚಿಸುವವರನ್ನು ಬಯಲಿಗೆಳೆಯಲು ಹಾಗೂ ಜನರಲ್ಲಿನ ಮೌಢ್ಯತೆಯನ್ನು ತಡೆಗಟ್ಟಲು ಪವಾಡ ರಹಸ್ಯ ಬಯಲು ತುಂಬಾ ಸಹಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕ ಹೆಚ್.ಬಿ.ಸನತ್ ಕುಮಾರ್ ತಿಳಿಸಿದರು.
ಹುಳಿಯಾರು ಪಟ್ಟಣದ ಕೇಶವ ವಿದ್ಯಾಮಂದಿರ ಶಾಲೆಯಲ್ಲಿ ನಡೆದ ಪವಾಡ ರಹಸ್ಯ ಬಯಲು ವೈಜ್ಞಾನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಿಂತಕರು ಹಾಗೂ ಪವಾಡಭಂಜಕರೂ ಆದ ದೊಡ್ಡದಾಳವಟ್ಟಿ ಶಾಲೆಯ ಶಿಕ್ಷಕರಾದ ಸಿ.ಇ.ಶಾಂತಕುಮಾರ್ ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಸಾಹಿತಿಗಳು, ಜಾದೂಗಾರರೂ ಮತ್ತು ರಂಗಭೂಮಿ ಕಲಾವಿದರೂ ಆಗಿದ್ದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯಾಗಿರುವ ಇವರು “ಬರವಣಿಗೆ ಬಾರದವನು”,”ಕುಡುಕ ಕಟ್ಟಿದ ತಾಳಿ” ನಾಟಕ ನಿರ್ದೇಶನದ ಜತೆಯಲ್ಲಿ ಅಭಿನಯಿಸುವ ಮೂಲಕ ಮದ್ಯಪಾನ,ಅನಕ್ಷರತೆ,ಬಾಲ್ಯ ವಿವಾಹ ಅದರ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ, ಪ್ರೇರಣಾ ಶಿಕ್ಷಕ ರತ್ನ ಪ್ರಶಸ್ತಿ ,ಜ್ಞಾನಜ್ಯೋತಿ ಶಿಕ್ಷಕ ಪ್ರಶಸ್ತಿ ವಿಜೇತರು ಆದ ಇವರು ನಿಸ್ವಾರ್ಥವಾಗಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.
ಶಿಕ್ಷಕ ಶ್ರೀನಿವಾಸ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದ್ದರೂ ಮೂಢನಂಬಿಕೆಗಳು ಕೆಲವರಲ್ಲಿ ಹಾಸುಹೊಕ್ಕಾಗಿದ್ದು ಅವರುಗಳ ಮುಗ್ಧತೆಯನ್ನು ಕೆಲವು ಮಹಾನ್ ವ್ಯಕ್ತಿಗಳು ದೈವಿ ಪವಾಡ ಎಂದು ಹೇಳಿಕೊಂಡು ಮುಗ್ಧ ಜನರಿಗೆ ಮಂಕುಬೂದಿ ಎರೆಚಿ ದೊಡ್ಡ ಪ್ರಮಾಣದಲ್ಲಿ ಹಣ ಹಾಗೂ ಚಿನ್ನಾಭರಣಗಳನ್ನು ಗಳಿಸುತ್ತಿದ್ದು ಈ ಬಗ್ಗೆ ಎಲ್ಲರೂ ಅರಿವು ಮೂಢಿಸಿಕೊಳ್ಳಬೇಕೆಂದರು.
ಪವಾಡ ಭಂಜಕ ಸಿ.ಇ.ಶಾಂತ ಕುಮಾರ್ ಮಾತನಾಡಿ ಮೂಢನಂಬಿಕೆಗಳ ಆಚರಣೆಯಲ್ಲಿ ಮೌಢ್ಯರು ದೇವರ ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುವ ಪವಾಡಗಳನ್ನು ಬಯಲು ಮಾಡುವ ವಿಚಾರವನ್ನು ಎಳೆಎಳೆಯಾಗಿ ತಿಳಿಸಿದರು.ವೆಚ್ಚ ರಹಿತ ಮತ್ತು ಕಡಿಮೆ ವೆಚ್ಚದ ಸಾಮಗ್ರಿಗಳನ್ನು ಬಳಸಿಕೊಂಡು ಸರಳ ಪ್ರಯೋಗಗಳನ್ನು ಮಾಡಿ ತರಗತಿ ಕೋಣೆಗಳಲ್ಲಿ ವಿಜ್ಞಾನ ವಿಷಯದ ಪರಿಣಾಮಕಾರಿ ಬೋಧನೆಗೆ ಮಕ್ಕಳನ್ನು ಪ್ರೇರೇಪಿಸುವುದು ಮತ್ತು ಕೈಚಳಕ ಹಾಗೂ ವೈಜ್ಞಾನಿಕ ತತ್ವಗಳ ನೆಲೆಗಟ್ಟಿನ ಮೇಲೆ ನಿಂತಿರುವ ಪವಾಡಗಳನ್ನು ಬಳಸಿಕೊಂಡು ಮುಗ್ಧ ಜನರನ್ನು ಮರಳು ಮಾಡಿ ನಿರ್ಗತಿಕರನ್ನಾಗಿ ಮಾಡುವ ಪವಾಡ ಪುರುಷರ ಮಾಯಾಜಾಲದ ಅರಿವನ್ನು ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮೀಣ ಭಾಗದ ಜನರಲ್ಲಿ ಬಿತ್ತುವ ಕಾರ್ಯವನ್ನು ಪವಾಡ ರಹಸ್ಯ ಬಯಲು ಕಾರ್ಯಕ್ರಮದ ಮೂಲಕ ಮಾಡುತ್ತಿರುವುದಾಗಿ ತಿಳಿಸಿದರು.
ಮಳೆಗಳ ಮೇಲೆ ಮುಳ್ಳಿನ ಮೇಲೆ ದೀರ್ಘಕಾಲದವರೆಗೆ ನಿಲ್ಲುವುದು ಹಾಗೂ ಮಲಗುವುದು,ತಲೆಗೆ ಚಾಕು ಹಾಕುವುದು,ಕುತ್ತಿಗೆಗೆ ಹಗ್ಗದ ಕುಣಿಕೆ ಹಾಕುವುದು,ಖಾಲಿ ಚೀಲದಲ್ಲಿ ವಿವಿಧ ರೀತಿಯ ವಸ್ತುಗಳನ್ನು ಬರಿಸುವುದು,ಕೊಡದಲ್ಲಿ ಪುನಹ ಪುನಹ ನೀರು ,ದೀರ್ಘ ದೃಷ್ಟಿಯಿಂದ ಬೆಂಕಿ ಹತ್ತಿ ಉರಿಯುವುದು, ಕಾಯಿಯಲ್ಲಿ ಚಿನ್ನದ ಸರ ಬರಿಸುವುದು ಹೀಗೆ ಅನೇಕ ಪವಾಡಗಳ ರಹಸ್ಯ ಬಯಲು ವಿಚಾರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಬಳಗದ ಎಂ.ವಿ ರಮೇಶ್ ಮಾತನಾಡಿ ನಂಬಿಕೆ ಇರಬೇಕು ಮೂಢನಂಬಿಕೆ ಇರಬಾರದು.ತಿಳುವಳಿಕೆ ಇರುವ ಕಡೆ ಈ ರೀತಿ ಇರುವುದಿಲ್ಲ ಹಾಗೂ ಗ್ರಾಮೀಣ ಭಾಗಗಳಲ್ಲಿನ ಜನಗಳಲ್ಲಿ ಇರುವ ಮೌಢ್ಯತೆಯನ್ನು ತಡೆಗಟ್ಟಲು ಈ ಒಂದು ಪವಾಡ ರಹಸ್ಯ ಬಯಲು ತುಂಬಾ ಸಹಕಾರಿಯಾಗಿದೆ ಎಂದರು, ಶಿಕ್ಷಕ ಮಧು ಸ್ವಾಗತಿಸಿದರು. ಶಿಕ್ಷಕಿಯರಾದ ಚಂದ್ರಕಲಾ, ಭಾರತಿ, ದಿವ್ಯ, ಯಶಸ್ವಿನಿ, ಪಾವನ, ವೇದಶ್ರೀ, ಸುಗುಣ ಹಾಗೂ ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.