ಚಿತ್ರದುರ್ಗ:
ಕೇಂದ್ರ ಸರ್ಕಾರದ ಭೂಸ್ವಾಧೀನ, ಸ್ಥಳಾಂತರ ಮತ್ತು ಪುನರ್ ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರದ ಹಕ್ಕು ಅಧಿನಿಯಮ 2013 ಕ್ಕೆ ಕರ್ನಾಟಕ ಸರ್ಕಾರ ಪಾಸ್ ಮಾಡಿರುವ ತಿದ್ದುಪಡಿ ಬಿಲ್ 2019 ಕ್ಕೆ ಅಂಗೀಕಾರ ನೀಡಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರಗತಿಪರ ರೈತ ದಯಾನಂದಮೂರ್ತಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರ ರೈತರನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತ ಶೋಷಣೆ ಮಾಡುತ್ತಿದೆ. ಮಳೆಯಿಲ್ಲದೆ ರೈತನಿಗೆ ಬೆಳೆ ಇಲ್ಲ. ಅಲ್ಪಸ್ವಲ್ಪ ಬೆಳೆ ಕೈಗೆ ಬಂದರೂ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತನನ್ನು ದೇಶದ ಬೆನ್ನಲುಬು ಎಂದು ಬರೀ ಬಾಯಿ ಮಾತಿನಲ್ಲಿ ಹೇಳುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿರುವುದು ದುಃಖದ ಸಂಗತಿ. ಹಾಗಾಗಿ ರೈತರೆಲ್ಲರೂ ಒಗ್ಗಟ್ಟಾಗಿರುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಬೇಕಾಗಿದೆ ಎಂದು ಹೇಳಿದರು.
ರವಿಕುಮಾರ್ ಮಾತನಾಡುತ್ತ ಕೇಂದ್ರದ ಭೂಸ್ವಾಧೀನ ಪ್ರಕ್ರಿಯೇ ಮೊದಲು ನಿಲ್ಲಬೇಕು. ರೈತನಿಗೆ ಸಾಲ ಮನ್ನ ಮಾಡುವುದು ಬೇಕಿಲ್ಲ. ಸಮಯಕ್ಕೆ ಸರಿಯಾಗಿ ವಿದ್ಯುತ್ ನೀರು ಕೊಡಲಿ ಸಾಕು ರೈತ ಸ್ವಾವಲಂಭಿಯಾಗಿ ಬದುಕುತ್ತಾನೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ರೈತರನ್ನುದ್ದೇಶಿಸಿ ಮಾತನಾಡುತ್ತ ಸತತ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆಯಲ್ಲಿ ಬೆಳೆವಿಮೆ ತುಂಬಿರುವ ರೈತರಿಗೆ ಇನ್ನು ಪರಿಹಾರ ಬಂದಿಲ್ಲ. ಕೂಡಲೆ ಪರಿಹಾರದ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಇನ್‍ಪುಟ್ ಸಬ್ಸಿಡಿಯು ಸಹ ರೈತರ ಕೈಗೆ ತಲುಪಿಲ್ಲ. ರಾಜ್ಯ ಸರ್ಕಾರ ಇನ್‍ಪುಟ್ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ನೀರಾವರಿ ಕೆರೆಗಳನ್ನು ಅಳತೆ ಮಾಡಿಸಿ ಹೂಳುತೆಗೆಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಬೇಕು. ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ಗೋಶಾಲೆಯನ್ನು ತೆರೆದು ಮೇವು ನೀರು ಪೂರೈಸುವ ಮೂಲಕ ಗೋವುಗಳನ್ನು ರಕ್ಷಿಸಬೇಕು. ಮುಖ್ಯಮಂತ್ರಿಗಳೇ ಘೋಷಿಸಿರುವಂತೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ವಿಚಾರದಲ್ಲಿ ರೈತರಿಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ ಹೊಸ ಸಾಲವನ್ನು ಪಡೆಯಲು ಆಗುತ್ತಿಲ್ಲ. ಕೂಡಲೆ ಪೂರ್ಣ ಮೊತ್ತವನ್ನು ಬ್ಯಾಂಕುಗಳಿಗೆ ಬಿಡುಗಡೆಗೊಳಿಸಿ ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿಯಾಗಬೇಕಾಗಿರುವ ಭದ್ರಾಮೇಲ್ದಂಡೆ ಯೋಜನೆ ಇನ್ನು ಪೂರ್ಣಗೊಂಡಿಲ್ಲ. ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿದೆ. ಈ ಎರಡು ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ ಜಿಲ್ಲೆಯ ರೈತರ ಬದುಕನ್ನು ಹಸನುಗೊಳಿಸಬೇಕು ಎಂದು ಸರ್ಕಾರವನ್ನು ಕೋರಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಹೊಸ ಆರ್ಥಿಕ ನೀತಿ, ಉದಾರೀಕರಣ ನೀತಿ ಹಾಗೂ ಮುಕ್ತ ಮಾರುಕಟ್ಟ ನೀತಿ ಜಾರಿಗೆ ಬಂದ ಮೇಲೆ ದೇಶಾದ್ಯಂತ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವುದರ ವಿರುದ್ದ ದೇಶಾದ್ಯಂತ ರೈತರು ಮತ್ತು ಜನಪರ ಸಂಘಟನೆಗಳು ಹೋರಾಟ ಮಾಡಿದ ಫಲವಾಗಿ ಬ್ರಿಟೀಷ್ ಸರ್ಕಾರ ರೂಪಿಸಿದ್ದ 1894 ರ ಭೂಸ್ವಾಧೀನ ಕಾಯ್ದೆಯನ್ನು ಡಾ.ಮನಮೋಹನ್‍ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರದ್ದುಪಡಿಸಿ ಹೊಸದಾಗಿ 2013 ರಲ್ಲಿ ಅಧಿನಿಯಮ ಸಂಖ್ಯೆ 30 ರ ರೀತಿ ಹೊಸ ಕಾಯ್ದೆಯನ್ನು ರೂಪಿಸಿ 1-1-2014 ರಿಂದ ಜಾರಿಗೆ ತರಲಾಗಿದೆ.
ಈ ಹೊಸ ಕಾಯ್ದೆಯಿಂದ ಕೈಗಾರೀಕರಣ, ಅತ್ಯವಶ್ಯಕ ಮೂಲ ಸೌರ್ಕಯಗಳ ಅಭಿವೃದ್ದಿ ಮತ್ತು ನಗರೀಕರಣಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು. ಇದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಅನ್ನದಾತ ರೈತನ ಬದುಕು ಸಂಕಷ್ಟಕ್ಕೀಡಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆದ್ದರಿಂದ ಕರ್ನಾಟಕ ಸರ್ಕಾರ ಪಾಸು ಮಾಡಿರುವ ತಿದ್ದುಪಡಿ ಬಿಲ್ 2019 ಕ್ಕೆ ಅಂಗೀಕಾರ ನೀಡಬಾರದು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.ರೈತ ಮುಖಂಡರುಗಳಾದ ಸಿ.ಆರ್.ತಿಮ್ಮಣ್ಣ, ಕೆ.ಸಿ.ಹೊರಕೇರಪ್ಪ, ಕುರುಬರಹಳ್ಳಿ ಅಂಗಡಿ ರುದ್ರಣ್ಣ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಎಂ.ಆರ್.ಪುಟ್ಟಸ್ವಾಮಿ, ಬಿ.ಟಿ.ಹನುಮಂತಪ್ಪ, ಎಸ್.ರೇವಣ್ಣ, ಎಂ.ನಾಗರಾಜ್, ಟಿ.ಹಂಪಣ್ಣ, ಬಿ.ಟಿ.ಹನುಮಂತಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.