ಬೆಂಗಳೂರು:
ಮುಂಬರುವ ವಿಧಾನಸಭೆ ಚುನಾವಣೆಗೆ ಕೈ ಅರ್ಭರ್ಥಿಗಳನ್ನು ಅಂತಿಮ ಗೊಳಿಸುವ ಉನ್ನತಮಟ್ಟದ ಕಾಂಗ್ರೆಸ್ ನಾಯಕರ ಆಯ್ಕೆ ಸಮಿತಿ ಸಭೆ ಗುರುವಾರ ದೇವನಹಳ್ಳಿ ಹೊರವಲಯದ ಖಾಸಗಿ ಹೊಟೆಲ್‌ನಲ್ಲಿ ನಡೆಯಿತು.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಸೇರಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಹಾಗೂ ಚುನಾವಣಾ ವೀಕ್ಷಕರ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಅಭ್ಯರ್ಥಿ ಆಯ್ಕೆ ವಿಚಾರವಾಗಿ ವಿಸ್ತೃತ ಚರ್ಚೆ ನಡೆಸಿದರು.
ಸಭೆಯಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳ ಆಯ್ಕೆಗೆ ಇರಬಹುದಾದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು, ಗೆಲುವಿನ ಸಾಧ್ಯತೆ, ಸವಾಲುಗಳ ಬಗ್ಗೆ ಚರ್ಚೆ ನಡೆಯಿತು. ವೀಕ್ಷಕರು ತಮ್ಮ ಕ್ಷೇತ್ರವಾರು ಭೇಟಿಯ ವಿವರಗಳನ್ನು ಸಭೆಯ ಮುಂದಿಟ್ಟು ಶಿಫಾರಸ್ಸಾದ ಅಭ್ಯರ್ಥಿ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲು ಸಲಹೆ ನೀಡಿದರು ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಮುಂದಿನ ವಿಧಾನ ಸಭಾ ಚುನಾವಣೆ ಸಂಬAಧ ಪ್ರತಿ ಕ್ಷೇತ್ರದಲ್ಲಿಯೂ ಆಕಾಂಕ್ಷಿಗಳೊAದಿಗೆ ಚರ್ಚಿಸಿ ಹೆಸರು ಶಿಫಾರಸ್ಸು ಮಾಡಲು ಪಕ್ಷದ ಮುಖಂಡರಿಗೆ ಸೂಚಿಸಲಾಗಿತ್ತು’ ಎಂದರು.
‘ಅಭ್ಯರ್ಥಿಗಳ ಹೆಸರು ಸೂಚಿಸಲು ಪಕ್ಷದ ಕಾರ್ಯದರ್ಶಿಗಳು, ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರ ಶಿಫಾರಸ್ಸು ಸಲ್ಲಿಕೆಯಾಗಿದೆ.ದೆಹಲಿಯಿಂದ ಬಂದಿದ್ದ ರಾಷ್ಟç ಮುಖಂಡರು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸಹ ಸಮೀಕ್ಷೆ ನಡೆಸಿದೆ. ಇವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅಂತಿಮ ಅಭ್ಯರ್ಥಿಗಳನ್ನು ಸ್ಕೀನಿಂಗ್ ಕಮಿಟಿ ತೀರ್ಮಾನ ಮಾಡಲಿದೆ’ ಎಂದು ತಿಳಿಸಿದರು.
ಮೊದಲ ಪಟ್ಟಿ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ, ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಒಂದು ಹಂತಕ್ಕೆ ಬರಲಿದೆ. ನಂತರ ಕೇಂದ್ರ ಚುನಾವಣಾ ಸಮಿತಿಯು ಪರಿಶೀಲಿಸಿ ಪ್ರಕಟಿಸಲಿದೆ ಎಂದು ತಿಳಿಸಿದರು.ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದೇ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷದ ಎಲ್ಲಾ ಶಾಸಕರು ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಬಿಜೆಪಿ ಸಹಕಾರ ನೀಡದಿದ್ದರೂ ನಮ್ಮ ಶಾಸಕರು ಜನರಮಧ್ಯೆ ನಿಂತು ಕೆಲಸ ಮಾಡಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಜನಾರ್ದನ ರೆಡ್ಡಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾತ್ರೆ ಮಾಡುತ್ತಿರುವುದರ ಬಗ್ಗೆ ಕೇಳಿದಾಗ, ಅವರವರ ಪಕ್ಷದ ವಿಚಾರವಾಗಿ ಯಾರು ಏನಾದರೂ ಮಾಡಿಕೊಳ್ಳಲಿ. ಅವರ ಸಿದ್ಧಾಂತ ಬೇರೆ, ನಮ್ಮ ಸಿದ್ಧಾಂತ ಬೇರೆ. ನಮ್ಮ ನಾಯಕತ್ವ ಬೇರೆ, ಅವರ ನಾಯಕತ್ವ ಬೇರೆ. ಯಾರು ಏನೆಲ್ಲಾ ಶ್ರಮ ಹಾಕುತ್ತಾರೋ ಹಾಕಲಿ, ಎಲ್ಲರಿಗೂ ಒಳ್ಳೆಯದಾಗಲಿ. ನಮ್ಮದು ಇತಿಹಾಸವಿರುವ, ಜನರ ಮಧ್ಯೆ ಇದ್ದು, ಅವರ ಸೇವೆ ಮಾಡಿ, ಅವರ ಜೀವನದಲ್ಲಿ ಬದಲಾವಣೆ ತರುವ ಪಕ್ಷ. ಅದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಶುಕ್ರವಾರದಿಂದ ಪ್ರತ್ಯೇಕ ಯಾತ್ರೆ ನಡೆಸುತ್ತಿರುವುದರ ಬಗ್ಗೆ ಕೇಳಿದಾಗ, ಇದು ಪ್ರತ್ಯೇಕ ಯಾತ್ರೆಯಲ್ಲ. ಜಿಲ್ಲಾ ಹಂತದಲ್ಲಿ ನಾವು ಯಾತ್ರೆ ಮುಗಿಸಿದ್ದು, ಈಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತಿತರ ನಾಯಕರು ಭಾಗವಹಿಸಿದ್ದರು.








