ತುರುವೇಕೆರೆ :
ರಾಜ್ಯದ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನಿರಾಶ್ರಿತ ಜನರಿಗೆ ಆಹಾರ ಮತ್ತು ಇನ್ನಿತರ ಮೂಲಭೂತ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಶಾಸಕ ಮಸಾಲಾ ಜಯರಾಂ ಹಾಗು ಸ್ಥಳೀಯ ಸಂಸ್ಥೆಗಳ ಮುಖಂಡರೊಂದಿಗೆ ಶನಿವಾರ ಕೊಡಗಿಗೆ ತೆರಳಿ ಅಲ್ಲಿನ ಸಂತ್ರಸ್ತರ ಮನೆಗಳಿಗೆ ಖುದ್ದು ಭೇಟಿ ನೀಡಿ ಹಣ ಹಾಗೂ ಇತರೆ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿದರು.
ಶಾಸಕ ಮಸಾಲಾ ಜಯರಾಂ ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಯೋಗದೊಂದಿಗೆ ಪರಿಹಾರ ನಿಧಿ ಹಣ ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಅನೇಕ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಕ್ಷಭೇದ ಮರೆತು ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಪರಿಹಾರ ಸಂಗ್ರಹಿಸುವ ಕಾರ್ಯಕ್ಕೆ ಕೈಜೋಡಿಸಿದ್ದರು. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತಮ್ಮ ಕೈಲಾದ ದೇಣಿಗೆ ನೀಡಿ ಸಹಕರಿಸಿದ್ದರು.
ಅಂದು ಸಾರ್ವಜನಿಕರಿಂದ ಒಟ್ಟು 1,93,294 ರೂ. ನಗದು ಹಾಗೂ ಅಪಾರ ಪ್ರಮಾಣದ ಅಕ್ಕಿ, ದವಸಧಾನ್ಯ, ಹೊದಿಕೆ, ಚಾಪೆ, ಔಷಧಿ, ಬಟ್ಟೆಗಳು ಸಂಗ್ರಹ ಮಾಡಲಾಗಿತ್ತು. ಇದರ ಜೊತೆಗೆ ಶಾಸಕರ ದೇಣಿಗೆಯೂ ಸೇರಿದಂತೆ 3 ಲಕ್ಷ ರೂ.ಗೂ ಅಧಿಕ ಹಣ, ಬಟ್ಟೆ, ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳೊಂದಿಗೆ ತಾವೇ ಸ್ವತಃ ನಿರಾಶ್ರಿತರ ಸ್ಥಳಗಳಿಗೆ ಖುದ್ದು ಭೇಟಿ ನೀಟಿ ವಿತರಿಸುವ ಸಲುವಾಗಿ ತಾಲ್ಲೂಕಿನ ಅನೇಕ ಮುಖಂಡರುಗಳೊಂದಿಗೆ ಶನಿವಾರ ಕೊಡಗಿಗೆ ತೆರಳಿದರು. ಅಲ್ಲಿನ ಶಾಸಕರ ಮಾರ್ಗದರ್ಶನದಲ್ಲಿ ಸ್ಥಳೀಯ ಮುಖಂಡರುಗಳೊಂದಿಗೆ ಚರ್ಚಿಸಿ, ಸಂತ್ರಸ್ತರ ಪಟ್ಟಿಯೊಂದಿಗೆ ಅಲ್ಲಿನ ಮುಖಂಡರೊಡಗೂಡಿ ಕಾಲೂರು, ಮಣ್ಣೆಂಗೇರಿ 2, ಮಕ್ಕಂದೂರು, ದೇವಸ್ಥಲೂರು, ಮುಕ್ಕೊಡ್ಲು, ಕನ್ಯಾಲ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರ ದುಸ್ಥಿತಿ ಸ್ವತಃ ಕಣ್ಣಾರೆ ಕಂಡ ಶಾಸಕರು ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ದೇಣಿಗೆ ಹಾಗೂ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಉಳಿದ ಬಟ್ಟೆ, ಹೊದಿಕೆ, ಆಹಾರ ಪದಾರ್ಥಗಳು, ತೇಜು ಮಸಾಲ ಕಿಟ್‍ಗಳು ಸೇರಿದಂತೆ ಮಿಕ್ಕೆಲ್ಲಾ ಪದಾರ್ಥಗಳನ್ನು ಮೈತ್ರಿಹಾಲ್ ಗಂಜಿಕೇಂದ್ರಕ್ಕೆ ನೀಡಲಾಯಿತು.
ಸಂತ್ರಸ್ತರ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಸಂತ್ರಸ್ತರು ಗುಂಪುಗೂಡಿ ತಮ್ಮ ದುಸ್ಥಿತಿಯ ಬಗ್ಗೆ ಹಾಗೂ ತಾವೇ ಕಣ್ಣಾರೆ ನೋಡಿ ಚಿತ್ರಿಸಿಕೊಂಡಿದ್ದ ವಿಡಿಯೋ ತುಣುಕುಗಳನ್ನು ಮೊಬೈಲ್ ಮುಖಾಂತರ ತೋರಿಸಿ ಆ ಸಂದರ್ಭವನ್ನು ಮನವರಿಕೆ ಮಾಡಿಕೊಡುತ್ತಿದ್ದ ಅವರ ಮನಃಸ್ಥಿತಿ ಕಂಡು ಶಾಸಕರಾದಿಯಾಗಿ ನಾವೆಲ್ಲಾ ಮಮ್ಮಲ ಮರುಗಿದೆವು. ಯಾವ ಶತ್ರುವಿಗೂ ಇಂತಹ ದುಸ್ಥಿತಿ ಬಾರದಿರಲಿ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಾರೇಣುಕಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ನವೀನ್ ಬಾಬು, ಸೋಮಣ್ಣ, ರಾಜೇಶ್, ಪಂಚಾಯಿತಿ ಕಾವಲು ಸಮಿತಿ ಅಧ್ಯಕ್ಷ ವೆಂಕಟೇಶ್, ಸಿದ್ದಲಿಂಗಪ್ಪ, ಅಶೋಕ್, ರಾಜು ಸೇರಿದಂತೆ ಅನೇಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







