ಚಿತ್ರದುರ್ಗ :
ಭೀಕರ ನೆರೆಹಾವಳಿಗೆ ತುತ್ತಾಗಿರುವ ಕೊಡಗಿನ ನೆರೆಸಂತ್ರಸ್ತರ ನೆರವಿಗಾಗಿ ಶ್ರೀಮುರುಘಾಮಠವು ಕೊಡಗಿನ ಮೂರು ಕಡೆಗಳಲ್ಲಿ ಆಶ್ರಯ ಕೇಂದ್ರಗಳನ್ನು ತೆರೆದು, ಊಟ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಂತ್ರಸ್ತರಿಗೆ ವೈದ್ಯಕೀಯ ನೆರವನನು ನೀಡಲು ಬಸವೇಶ್ವರ ವೈದ್ಯಕೀಯ ಕಾಲೇಜಿನ 17ಜನ ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸದಾ ಹಚ್ಚ ಹಸಿರಿಗೆ ಹೆಸರಾದ ಕಾವೇರಿ ಉಗಮ ಸ್ಥಾನ ಕೊಡಗು ಜಿಲ್ಲೆ ಭೀಕರ ಪ್ರವಾಹ ಸಂಭವಿಸಿ ಅನೇಕರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರದೊಂದಿಗೆ ಅನೇಕ ಸಂಘ ಸಂಸ್ಥೆಗಳು, ನೌಕರರು ತಮ್ಮ ಸಹಾಯವನ್ನು ಮಾಡುತ್ತಿರುವುದು ಶ್ಲಾಘನೀಯ. ಈಗಾಗಲೇ ಶ್ರೀಮಠದಿಂದ ಮೂರುಕಡೆ ಆಶ್ರಯ ಕೇಂದ್ರಗಳನ್ನು ತೆರೆದು ಎಲ್ಲ ರೀತಿಯ ಸಹಾಯ ನೀಡಲಾಗುತ್ತಿದೆ. ನಿನ್ನೆ ಬಸವೇಶ್ವರ ಆಸ್ಪತ್ರೆಯಿಂದ 17ಜನ ವೈದ್ಯರ ತಂಡವು ಕೊಡಗಿಗೆ ಹೋಗಿದ್ದು ಕಾರ್ಯಾರಂಭ ಮಾಡಿದೆ. ಅನೇಕ ಮಕ್ಕಳು ಇಂದು ಬೀದಿಗೆ ಬಂದಿದ್ದಾರೆ. ಅಂತಹ ಮಕ್ಕಳಿಗೆ ಶ್ರೀಮಠದ ಪರವಾಗಿ ಊಟ ವಸತಿ ನೀಡಿ ಶಿಕ್ಷಣವನ್ನು ನೀಡಲಾಗುತ್ತಿದೆ. ಮಾದಾಪುರ, ಬೇಳೂರು, ಸೋಮವಾರಪೇಟೆಯಲ್ಲಿರುವ ಸಂಸ್ಥೆಯ ಶಾಲೆಗಳಲ್ಲಿ ಆಶ್ರಯ ಕೇಂದ್ರಗಳನ್ನು ಪ್ರಾರಂಭಿಸಿ. ಕೆಲವೆಡೆ ಅತಿವೃಷ್ಟಿ ಮತ್ತು ಹಲವೆಡೆ ಅನಾವೃಷ್ಟಿ ಉಂಟಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಬಿತ್ತನೆಗೆ ಹಿನ್ನೆಡೆಯಾಗಿದ್ದು, ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಜಿಲ್ಲೆಗೆ ಹೆಚ್ಚಿನ ನೆರವು ನೀಡುವಂತೆ ಈ ಸಂದರ್ಭದಲ್ಲಿ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎಂ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕ ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಇದ್ದರು.
