ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ

ಚಿತ್ರದುರ್ಗ:

      ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ನಡೆಯುವ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಾಲ್ಮೀಕಿ ಜನಾಂಗದವರು ತಮ್ಮ ಕುಟುಂಬ ಸಮೇತ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮಿ ವಾಲ್ಮೀಕಿ ಜನಾಂಗಕ್ಕೆ ಕರೆ ಕೊಟ್ಟರು.

        ಕೋಟೆ ಮುಂಭಾಗವಿರುವ ಮಹಾರಾಣಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತಾಲೂಕು ವಾಲ್ಮೀಕಿ ಜನಾಂಗದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಪ್ರಸನ್ನಾನಂದನಾಥಸ್ವಾಮಿ ಶರಣ ಸಂಸ್ಕತಿ ಉತ್ಸವ, ತರಳಬಾಳು ಹುಣ್ಣಿಮೆ ಮಹೋತ್ಸವ ಮಾಡುವ ಮೂಲಕ ಮುಂದುವರೆದ ಮಠಗಳು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಐವತ್ತರಿಂದ ಅರವತ್ತು ಲಕ್ಷ ಜನಸಂಖ್ಯೆಯಿರುವ ವಾಲ್ಮೀಕಿ/ನಾಯಕ ಜನಾಂಗ ಇನ್ನು ಸಂಘಟನೆಯಾಗಬೇಕಿದೆ.

      ಬೇರೆ ಬೇರೆ ಕಡೆಯಲ್ಲೂ ನಮ್ಮ ಸಮುದಾಯದವರಿದ್ದಾರೆ. ಮಾಜಿ ಸಚಿವ ತಿಪ್ಪೇಸ್ವಾಮಿ ನಾಡಿನಾದ್ಯಂತ ಸಂಚರಿಸಿ ವಾಲ್ಮೀಕಿ ಜನಾಂಗವನ್ನು ಸಂಘಟಿಸದಿದ್ದರೆ ಇನ್ನು ಕಷ್ಟವಾಗುತ್ತಿತ್ತು. ಹತ್ತು ವರ್ಷಗಳ ಕಾಲ ರಾಜ್ಯವನ್ನು ಸುತ್ತಾಡಿ ವಾಲ್ಮೀಕಿ ಜನಾಂಗದವರನ್ನು ಸಂಪರ್ಕಿಸಿದ್ದೇನೆ. ಹೋದ ಕಡೆಗೆಲ್ಲಾ ಮಠದಿಂದ ಬೃಹತ್ ಕಾರ್ಯಕ್ರಮ ಮಾಡೋಣ ಎನ್ನುವ ಸಲಹೆಗಳು ಬಂದವು. ಸಾಮಾಜಿಕವಾಗಿ ವಾಲ್ಮೀಕಿ ಸಮುದಾಯದವರು ಈಗ ಸಂಘಟಿತರಾಗುತ್ತಿದ್ದಾರೆ.

         ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಇನ್ನು ಸಂಘಟಿತರಾಗಿಲ್ಲ. ರಾಜ್ಯದ ನಾಲ್ಕನೆ ಅತಿ ದೊಡ್ಡ ಸಮಾಜ ನಮ್ಮದಾಗಿರುವುದರಿಂದ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಎರಡು ದಿನಗಳ ಕಾಲ ನಡೆಸಿ ವಾಲ್ಮೀಕಿ ಸಮುದಾಯವನ್ನು ಜಾಗೃತರನ್ನಾಗಿ ಮಾಡಬೇಕಾಗಿರುವುದರಿಂದ ತಾಲೂಕಿ ವಾಲ್ಮೀಕಿ ಸಮಾಜದ ಮುಖಂಡರುಗಳು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ವಾಲ್ಮೀಕಿ ಜನಾಂಗದ ಪುರುಷರು, ಮಹಿಳೆಯರು, ಬೆಡಗು ಹೀಗೆ ಮಾಹಿತಿಯನ್ನು ಪುಸ್ತಕದಲ್ಲಿ ಸಂಗ್ರಹಿಸಿ. ಅಷ್ಟೆ ಅಲ್ಲದೆ ಜಾತ್ರಾ ಮಹೋತ್ಸವಕ್ಕೆ ಹಣ ಇಲ್ಲವೇ ವಸ್ತು ರೂಪದಲ್ಲಿ ನೀಡುವವರ ಹೆಸರನ್ನು ನಮೂದಿಸಿ ಫೆ.1 ರಂದು ಜಾತ್ರಾ ಸಮಿತಿ ಅಧ್ಯಕ್ಷರಿಗೆ ಒಪ್ಪಿಸಬೇಕು. ವಾಲ್ಮೀಕಿ ಜನಾಂಗದ ಸಂಪೂರ್ಣ ಮಾಹಿತಿಯನ್ನು ವಾಲ್ಮೀಕಿ ಜಾತ್ರಾ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗುವುದು ಎಂದು ತಾಲೂಕು ವಾಲ್ಮೀಕಿ ನಾಯಕ ಮುಖಂಡರುಗಳಿಗೆ ಸೂಚಿಸಿದರು.

        ಈಗಾಗಲೆ ರಾಜ್ಯದ 106 ತಾಲೂಕುಗಳಲ್ಲಿ ಪ್ರವಾಸ ಮುಗಿಸಿ ಈಗ ಚಿತ್ರದುರ್ಗದಲ್ಲಿ ಸಭೆ ನಡೆಸುತ್ತಿರುವುದು 107 ನೇ ತಾಲೂಕು. ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಅಂದಾಜು ಎರಡರಿಂದ ಮೂರು ಲಕ್ಷದಷ್ಟು ವಾಲ್ಮೀಕಿ ಜನಾಂಗದವರು ಭಾಗವಹಿಸಲಿದ್ದಾರೆ. ಎಲ್ಲಾ ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರದ ಮಂತ್ರಿಗಳನ್ನು ಕರೆಸಿ ಉದ್ಯೋಗ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳವಾಗಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ನೌಕರರಿಗೆ ಮುಂಬಡ್ತಿ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವಂತೆ ಬೇಡಿಕೆ ಇಡಲಾಗುವುದು. ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಸತೀಶ್‍ಜಾರಕಿಹೊಳಿ, ಉಪಾಧ್ಯಕ್ಷರಾಗಿ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು, ಜನಾಂಗದ ಹದಿಮೂರು ಶಾಸಕರು, ಇಬ್ಬರು ಮಂತ್ರಿಗಳಿಗೆ ಜಾತ್ರೆಯ ಜವಾಬ್ದಾರಿ ವಹಿಸಲಾಗಿದೆ. ಸಮಾಜ, ಮಠದ ವಿಚಾರ ಬಂದಾಗ ಸಣ್ಣಪುಟ್ಟ ವೈಮನಸ್ಸುಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕೆಂದು ವಾಲ್ಮೀಕಿ ಜನಾಂಗದವರಿಗೆ ತಿಳಿಸಿದರು.

       ರಾಜ್ಯದ ಬೇರೆ ಬೇರೆ ಕಡೆ ಜಾತ್ರೆಗೆ ಸಂಬಂಧಿಸಿದಂತೆ ಹತ್ತು ಸಾವಿರ ಪುಸ್ತಕಗಳನ್ನು ಹಂಚಲಾಗಿದೆ. ಪ್ರತಿ ಹಳ್ಳಿಗೆ ಐದರಿಂದ ಹತ್ತು ವಾಲ್‍ಪೋಸ್ಟ್, ನಗರದಲ್ಲಿ 200 ವಾಲ್‍ಪೋಸ್ಟ್‍ರ್‍ಗಳನ್ನು ಅಂಟಿಸಿ ವಾಲ್ಮೀಕಿ ಜಾತ್ರೆ ಕುರಿತು ಪ್ರಚಾರ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿಯೂ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರನ್ನು ನೇಮಿಸಿ ಜವಾಬ್ದಾರಿಯನ್ನು ವಹಿಸಲಾಗುವುದು. ಚಿತ್ರದುರ್ಗ ತಾಲೂಕು ಜಾತ್ರಾ ಸಮಿತಿ ಅಧ್ಯಕ್ಷರಾಗಿ ಬಿ.ಕಾಂತರಾಜ್‍ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

       ಸಮಸ್ತ ವಾಲ್ಮೀಕಿ ಜನಾಂಗದವರು ತನು, ಮನ, ಧನವನ್ನು ನೀಡಿ ರಾಜ್ಯ ಮಟ್ಟದ ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಪ್ರಸನ್ನಾನಂದ ಮನವಿ ಮಾಡಿದರು.ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ನಾಯಕ ಸಮಾಜದ ಮುಖಂಡರುಗಳಾದ ಹರ್ತಿಕೋಟೆ ವೀರೇಂದ್ರಸಿಂಹ, ಗುರುಸಿದ್ದಣ್ಣ, ತಿಪ್ಪೇಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ, ಡಾ.ಹೆಚ್. ಗುಡ್ಡದೇಶ್ವರಪ್ಪ, ಸದಾಶಿವು, ಯುವ ನ್ಯಾಯವಾದಿ ಅಶೋಕ್‍ಬೆಳಗಟ್ಟ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಸರ್ವೆ ಬೋರಣ್ಣ, ಪ್ರಸಾದ್ ಸೇರಿದಂತೆ ವಾಲ್ಮೀಕಿ ಜನಾಂಗದ ಅನೇಕ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link