ಹಾವೇರಿ :
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಡಿವೈಎಫ್‍ಐ, ಸಿಐಟಿಯು ಸಂಘಟನೆಯ ಕಾರ್ಯಕರ್ತರು ನಗರದಲ್ಲಿಂದು ಕೊಡಗು ಮತ್ತು ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿಯನ್ನು ಸಂಗ್ರಹ ಮಾಡಿದರು. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕರ ಬಳಿ ಹಣ ಸಂಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಎಸ್‍ಎಫ್‍ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಬೋವಿ ಮಾತನಾಡಿ, ಕೇರಳದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯು 12 ಜಿಲ್ಲೆಗಳಲ್ಲಿ ಹಿಂದೆಂದೂ ಕಾಣದಂತಹ ಅಪಾರ ಹಾನಿಗಳನ್ನು ಉಂಟು ಮಾಡಿದೆ. ಸಾವಿರಾರು ಮಂದಿ ಮನೆ, ಆಸ್ತಿ ಪಾಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ, ನೂರಾರು ಜನ ಸಾವಿಗೀಡಾಗಿದ್ದಾರೆ. ರಸ್ತೆ, ರೈಲು, ವಿಮಾನ ಮಾರ್ಗಗಳು ಸಂಪೂರ್ಣ ಬಂದ್ ಆಗಿ ಜನರು ಅಪಾರ ಸಂಕಷ್ಟದಲ್ಲಿ ಸಿಲುಕಿರುತ್ತಾರೆ. ರಾಜ್ಯದ ಕೊಡುಗು ಸಹ ನೆರೆ ಹಾವಳಿಗೆ ತುತ್ತಾಗಿದೆ. ಹತ್ತಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಜನರು ಇಂದು ಈ ಪ್ರವಾಹದಿಂದಾಗಿ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಸರ್ಕಾರ ತೆರೆದಿರುವ ಗಂಜಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಸಂಕಷ್ಟದಲ್ಲಿ ಸಿಲುಕಿರುವ ಕೆರಳ ಮತ್ತು ಕೊಡಗು ಜನತೆಯ ಸಹಾಯಕ್ಕಾಗಿ ಹೊದಿಕೆ, ಬಟ್ಟೆ, ಔಷಧಿ – ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳು ಮತ್ತು ನಿಧಿಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉದಾರ ಸಹಾಯ ಮಾಡುತ್ತಿದ್ದಾರೆ, ಕೊಡಗು ಮತ್ತು ಕೇರಳವೆಂಬ ಸುಂದರ ನಗರಗಳನ್ನು ಮತ್ತೆ ಕಟ್ಟಲು ಎಲ್ಲರೂ ಪರಿಶ್ರಮ ಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವಿನಾಯಕ ಕುರುಬರ, ಡಿವೈಎಫ್‍ಐ ಮುಖಂಡರಾದ ಮುಕ್ತಾನಂದ ಹಿರೇಮನಿ, ಎಸ್‍ಎಫ್‍ಐ ಮುಖಂಡರಾದ ಬಸವರಾಜ ಅಳಲಗೇರಿ, ಶ್ರೀಕಾಂತ, ಸೋಮಶೇಖರ ವಾಲ್ಮೀಕಿ, ಬಸವರಾಜ ತಳವಾರ, ವಕೀಲರಾದ ನಾರಾಯಣ ಕಾಳೆ ಹಾಗೂ ಮುಂತಾದವರು ಭಾಗವಹಿಸಿದ್ದರು.