ಹುಳಿಯಾರು
ಹೋಬಳಿ ಕೇಂದ್ರವಾದರೂ ಕೊಬ್ಬರಿ ವ್ಯಾಪಾರದಲ್ಲಿ ತಿಪಟೂರು, ಅರಸೀಕೆರೆಯ ನಂತರದ ಸ್ಥಾನ ಹುಳಿಯಾರು ಮಾರಕಟ್ಟೆ ಪಡೆದಿತ್ತು. ಬಯಲು ಸೀಮೆ ಬೆಳೆಯಾದ್ದರಿಂದ ಹುಳಿಯಾರು ಕೊಬ್ಬರಿಗೆ ಹೊರ ರಾಜ್ಯಗಳಲ್ಲಿ ಭಾರಿ ಬೇಡಿಕೆಯಿತ್ತು. ಹಾಗಾಗಿಯೇ ವರ್ತಕರು ನಾಮುಂದು ತಾಮುಂದು ಎಂದು ರೈತರಿಗೆ ಮುಂಗಡ ಹಣ ಕೊಟ್ಟು ಕೊಬ್ಬರಿ ಕಾದಿರಿಸುತ್ತಿದ್ದರು. ಒಂದರ್ಥದಲ್ಲಿ ಮಾರುಕಟ್ಟೆಯನ್ನೇ ಕೊಬ್ಬರಿ ಆಕ್ರಮಿಸಿ ಕೇಕೇ ಹಾಕುತ್ತಿತ್ತು. ಆದರೆ ಈಗ ಕೊಬ್ಬರಿ ವಹಿವಾಟಿಗೆ ಗ್ರಹಣ ಬಡಿದಿದ್ದು ವರ್ತಕರನ್ನು ಚಿಂತೆಗೀಡು ಮಾಡಿದೆ.
ಹೌದು ಹುಳಿಯಾರು ಮಾರುಕಟ್ಟೆಗೆ ಕಾಲಿಟ್ಟರೆ ಸಾಕು ಕೊಬ್ಬರಿಯ ಗಮಲು ಮೂಗಿಗೆ ರಾಚುತಿತ್ತು. ಮಾರುಕಟ್ಟೆಯಲ್ಲಿ ಎತ್ತ ನೋಡಿದರೂ ಕೊಬ್ಬರಿ ಮೂಟೆಗಳ ಲಾರಿ, ಟ್ರ್ಯಾಕ್ಟರ್, ಎತ್ತಿನಗಾಡಿಗಳು ನಿಂತಿರುತ್ತಿತ್ತು. ಆದರೆ ಈಗ ಈ ಚಿತ್ರಣ ಕಾಣಸಿಗದಾಗಿದ್ದು ಕೊಬ್ಬರಿ ವಹಿವಾಟು ಸಂಪೂರ್ಣ ನೆಲಕಚ್ಚಿದೆ. ಗಾತ್ರ ಕಡಿಮೆ, ಎಣ್ಣೆ ಅಂಶವಿಲ್ಲ ಎಂಬ ಕಾರಣಕ್ಕೆ ರಾಜ್ಯದ ಕೊಬ್ಬರಿಗೆ ಹೊರರಾಜ್ಯದಲ್ಲಿ ಬೇಡಿಕೆ ಇಲ್ಲದಂತಾಗಿರುವುದು ಒಂದೆಡೆಯಾದರೆ ಇಳುವರಿ ಸಹ ಕುಂಟಿತವಾಗಿರುವುದು ಕೊಬ್ಬರಿ ವ್ಯಾಪಾರ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ಪ್ರಸ್ತುತ ರೈತರು ತರುತ್ತಿರುವ ಕೊಬ್ಬರಿಯಲ್ಲಿ 100 ಕೇಜಿಗೆ 70 ಕೇಜಿ ಸಣ್ಣ ಗಾತ್ರದ ಕೊಬ್ಬರಿ ಬರುತ್ತಿವೆ. ಇದರ ಜೊತೆಗೆ ಬಿಸಿಲ ಝಳ ಹೆಚ್ಚಿದ್ದು ರೈತರು ಮಾರುಕಟ್ಟೆಗೆ ಕೊಬ್ಬರಿ ತರುವಷ್ಟರಲ್ಲಿ ಕಪ್ಪಾಗಿರುತ್ತದೆ. ಅಲ್ಲದೆ ಹಬ್ಬಕ್ಕೆ ಹಣ ಬೇಕೆಂದು ಹಸಿ ಕೊಬ್ಬರಿಯನ್ನೇ ಮಾರುಕಟ್ಟೆಗೆ ತರುತ್ತಿದ್ದಾರೆ. ಸಣ್ಣಗಾತ್ರ, ಕಪ್ಪು ಬಣ್ಣ, ಹಸಿ ಕೊಬ್ಬರಿ ಎನ್ನುವ ಕಾರಣದಿಂದ ಹೊರರಾಜ್ಯದವರು ಕೊಬ್ಬರಿ ಬೇಡವೆನ್ನುತ್ತಿದ್ದಾರೆ.
ಹೊರರಾಜ್ಯದಲ್ಲಿ ಹುಳಿಯಾರು ಕೊಬ್ಬರಿ ರಿಜೆಕ್ಟ್ ಆಗುತ್ತಿರುವ ಕಾರಣದಿಂದ ಹುಳಿಯಾರು ಮಾರುಕಟ್ಟೆಗೆ ಅರಸೀಕೆರೆಯಿಂದ ಆಗಮಿಸುತ್ತಿದ್ದ ಕೊಬ್ಬರಿ ರವಾನೆದಾರರು ಕಳೆದ ಒಂದು ವಾರದಿಂದ ಬಾರದಾಗಿದ್ದಾರೆ. ಮಳೆ ಬಂದು ಗುಣಮಟ್ಟದ ಕೊಬ್ಬರಿ ಬರುವವರೆವಿಗೂ ಹುಳಿಯಾರು ಕಡೆ ತಲೆಯಾಕುವುದಿಲ್ಲ ಎನ್ನುತ್ತಿದ್ದಾರೆ. ಇದು ಕೊಬ್ಬರಿ ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದ್ದು ವರ್ತಕರನ್ನು ಚಿಂತಿಗೀಡು ಮಾಡಿದೆ.
ಹುಳಿಯಾರು ಮಾರುಕಟ್ಟೆಯಲ್ಲಿ ಕಳೆದ ವರ್ಷ 37048 ಚೀಲಗಳಷ್ಟು ವಹಿವಾಟು ನಡೆದಿದ್ದು 93 ಲಕ್ಷ ರೂ. ಮಾರುಕಟ್ಟೆ ಶುಲ್ಕ ಕೊಬ್ಬರಿಯೊಂದರಿಂದಲೇ ಸಂಗ್ರಹವಾಗಿತ್ತು. ಆದರೆ ಈ ವರ್ಷ 23869 ಚೀಲಗಳಷ್ಟು ವಹಿವಾಟು ನಡೆದಿದ್ದು 57 ಲಕ್ಷ ರೂ. ಮಾತ್ರ ಸಂಗ್ರಹವಾಗಿರುವುದು ಕೊಬ್ಬರಿ ವ್ಯಾಪಾರ ಕುಸಿತ ಕಂಡಿರುವುದಕ್ಕೆ ನಿದರ್ಶನವಾಗಿದೆ. ಈ ವರ್ಷವೂ ಮಳೆ ಕೈಕೊಟ್ಟರೆ ಮುಂದಿನ ವರ್ಷ ಇನ್ನೂ ಕುಸಿತ ಕಾಣುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಗೋಪಾಲರೆಡ್ಡಿ.
ಕಳೆದ ವರ್ಷ ಉತ್ತಮ ಮತ್ತು ಗುಣಮಟ್ಟದ ಇಳುವರಿ ಬಂದಿದ್ದು ಮಾರುಕಟ್ಟೆ ಬೆಲೆ ಕುಸಿದು ರೈತರನ್ನು ಚಿಂತಿಗೀಡು ಮಾಡಿತ್ತು. ಹಾಗಾಗಿಯೇ ಅಹೋರಾತ್ರಿ ಧರಣಿ ಮಾಡಿ ಸರ್ಕಾರದ ಗಮನ ಸೆಳೆದು ಬೆಂಬಲ ಬೆಲೆ ಹೆಚ್ಚಳ ಮಾಡಿಸಿದ ಪರಿಣಾಮ ಇಂದು ಮಾರುಕಟ್ಟೆ ಬೆಲೆ 16 ಸಾವಿರ ದಾಟಿದೆ. ಆದರೆ ಮಳೆ ಕೈಕೊಟ್ಟು ಇಳುವರಿ ಕುಂಟಿತವಾಗಿ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ ಎಂದು ರೈತ ಮುಖಂಡ ಕೆಂಕೆರೆ ಸತೀಶ್ ತಿಳಿಸುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
