ಶಿರಾ
ಪ್ರಸಕ್ತ ರಾಜಕೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹಕ್ಕುಗಳನ್ನು ನಮ್ಮ ಜನಪ್ರತಿನಿಧಿಗಳೇ ಗಾಳಿಗೆ ತೂರಿಕೊಂಡು ಹರಾಜು ಮಾಡಿಕೊಳ್ಳುತ್ತಿದ್ದು, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಕೋಟಿ ಕೋಟಿ ರೂ.ಗಳಿಗೆ ಶಾಸಕರು ತಮ್ಮನ್ನೇ ತಾವು ಮಾರಾಟಕೊಳ್ಳುತ್ತಿರುವುದು ದೇಶದ ದೊಡ್ಡ ದುರಂತವಾಗಿದ್ದು, ದೇವೇಗೌಡರ ಸಾಕು ಮಗನಂತಿರುವ ನಾನು ಯಾವುದೇ ಕಾರಣಕ್ಕೂ ಮಾರಾಟವಾಗಲಾರೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ಹೇಳಿದರು.
ಶಿರಾ ನಗರದಲ್ಲಿ ಬಿ.ಎಸ್. ಅಭಿಮಾನಿ ಬಳಗ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕೈಗೊಂಡಿದ್ದ ಅವರ 67ನೇ ಜನ್ಮ ದಿನಾಚರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕೀಯವಾಗಿ ನನಗೆ ಶಕ್ತಿ ನೀಡಿದ್ದು ಈ ಕ್ಷೇತ್ರದ ಜನರೇ ಆಗಿದ್ದು, ನನ್ನ ರಾಜಕೀಯ ಭವಿಷ್ಯದಲ್ಲಿ ಇದೇ ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಗೆಲ್ಲಿಸಿ, ನಾಲ್ಕು ಬಾರಿ ಸೋಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನನ್ನ ಜೇಬಿನಿಂದ ಒಂದಿಷ್ಟು ಹಣ ಖರ್ಚು ಮಾಡಿದ್ದನ್ನು ಬಿಟ್ಟರೆ ಈ ಹಿಂದಿನ ಯಾವುದೇ ಚುನಾವಣೆಯಲ್ಲಿ ನನ್ನ ಹಣದಿಂದ ಚುನಾವಣೆ ಎದುರಿಸಿಯೇ ಇಲ್ಲ. ಪಕ್ಷದ ಕಾರ್ಯಕರ್ತರೇ ಹಣ ಖರ್ಚು ಮಾಡಿ ನನ್ನನ್ನು ಉಳಿಸಿಕೊಂಡಿದ್ದಾರೆ ಎಂದರು.
ಈ ಸೋಲು-ಗೆಲುವಿನ ನಡುವೆಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ. ನೂತನ ಸರ್ಕಾರಿ ಪ್ರೌಢಶಾಲೆಗಳ ಮಂಜೂರು, ಶಿರಾ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದ್ದು, ಸಾರಿಗೆ ಡಿಪೋ ಮಂಜೂರು ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಈಗಲೂ ಜೀವಂತವಾಗಿವೆ ಎಂದರು.
ಚಿತ್ರದುರ್ಗ ವಿಭಾಗಕ್ಕೆ ಸೇರ್ಪಡೆಗೊಂಡಿದ್ದ ಶಿರಾ ಸಾರಿಗೆ ಡಿಪೋವನ್ನು ತುಮಕೂರಿಗೆ ಪುನಃ ವರ್ಗಾವಣೆ ಮಾಡಿಸಲಾಗಿದೆ. ಜಿಲ್ಲಾ ಕೇಂದ್ರದಿಂದ ಮಧುಗಿರಿಗೆ ವರ್ಗಾವಣೆಗೊಂಡಿದ್ದ ಪ್ರಾದೇಶಿಕ ಸಾರಿಗೆ ಕಚೆರಿಯನ್ನು ಪುನಃ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕ ಸತ್ಯನಾರಾಯಣ್ ಹೇಳಿದರು.
ಶಿರಾ ಜಿಲ್ಲೆಗೆ ಒತ್ತು:
ಶಿರಾ ನಗರವು ದಿನ ದಿನಕ್ಕೂ ಬೆಳೆಯುತ್ತಿದ್ದು ಅಭಿವೃದ್ಧಿಯನ್ನೂ ಕಾಣುತ್ತಿದೆಯಾದ್ದರಿಂದ ಶಿರಾ ತಾಲ್ಲೂಕನ್ನು ಜಿಲ್ಲೆಯನ್ನಾಗಿಸುವುದು ನನ್ನ ಮೊದಲ ಗುರಿಯಾಗಿದೆ. ಇದಕ್ಕಾಗಿ ಎಂತಹ ಹೋರಾಟಕ್ಕೂ ನಾನು ಸಿದ್ದನಿದ್ದೇನೆ. ಶಿರಾ ಸರ್ಕಾರಿ ಆಸ್ಪತ್ರೆಯ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇದೊಂದು ಜಿಲ್ಲಾಸ್ಪತ್ರೆಯಾಗಿ ಪರಿಣಮಿಸಬೇಕಿದ್ದು ಇದಕ್ಕಾಗಿ ಶ್ರಮಿಸುತ್ತೇನೆ ಎಂದು ಶಾಸಕರು ತಿಳಿಸಿದರು.
ಈಗಿರುವ ನಮ್ಮದೇ ಸರ್ಕಾರ ನಾಳೆ ಏನಾಗುತ್ತೋ ಗೊತ್ತಿಲ್ಲ. ಅಧಿಕಾರ, ಹಣದ ಆಮಿಷದಿಂದ ಶಾಸಕರನ್ನು ಬೀದಿ ಪಾಲು ಮಾಡುತ್ತಿದ್ದಾರೆ. ದನ-ಕರುಗಳಂತೆ ಶಾಸಕರು ಮಾರಾಟಗೊಳ್ಳುತ್ತಿದ್ದಾರೆ. ನಾವು ಸಣ್ಣದೊಂದು ಬೈಸಿಕಲ್ ಇಲ್ಲವೇ ಕಾರಲ್ಲಿ ಓಡಾಡಲು ಕಷ್ಟಪಡುತ್ತಿರುವಾಗ ಶಾಸಕರನ್ನು ಪ್ರತ್ಯೇಕ ವಿಮಾನದಲ್ಲಿ ಟೆಂಡರ್ ಕೂಗಿ ಕರೆದುಕೊಂಡು ಹೋಗಲಾಗುತ್ತಿದೆ. ಮೊನ್ನೆಯಷ್ಟೇ ನನ್ನೊಡನೆ ರೆಸಾರ್ಟ್‍ನಲ್ಲಿ ಕೂತು ಬೋಂಡ ಸವಿದಿದ್ದ ಶಾಸಕ ಶ್ರೀಮಂತ್ ಪಾಟೀಲ್ ಅನಾರೋಗ್ಯದ ನೆಪದಲ್ಲಿ ಬಾಂಬೆಗೆ ಹಾರಿದ್ದಾರೆ ಎಂದು ಲೇವಡಿ ಮಾಡಿದರು.
ಜಗದೀಶ್ ಶೆಟ್ಟರ್‍ರಿಂದ ಆಮಿಷ:
ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್‍ಶೆಟ್ಟರ್ ನನ್ನನ್ನು ಕೊಂಡುಕೊಳ್ಳಲು ಕಳೆದ ಎರಡು ದಿನಗಳಿಂದ ಏನೆಲ್ಲಾ ಕಸರತ್ತು ನಡೆಸಿದ್ದಾರೆ. ಅವರ ಆಪ್ತರಿಂದ ದೂರವಾಣಿ ಕರೆ ಮಾಡಿಸಿ ನಿನಗೆ ಜೆಡಿಎಸ್ ಪುರಸ್ಕರಿಸಿಲ್ಲ. ಆ ಪಕ್ಷದಲ್ಲಿ ನಿನಗೆ ಎಳ್ಳಷ್ಟೂ ಬೆಲೆ ಇಲ್ಲ, ನಿನ್ನನ್ನು ಮಂತ್ರಿ ಮಾಡುತ್ತೇವೆ. ನಿನಗೆ ಇಲ್ಲವಾದರೆ ನಿನ್ನ ಮಗನಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ. ನಮ್ಮೊಂದಿಗೆ ಬಂದು ಬಿಡು ಎಂದು ಆಮಿಷವೊಡ್ಡಿದ್ದರು. ಇಂತಹವರ ಮಾರಾಟ ದಂಧೆಗೆ ನಾನು ಬಲಿಯಾಗಲಾರೆ. ನನ್ನ ಜನ್ಮದಿನವಿದೆ ಎಂದು ಕುಮಾರಣ್ಣನ ಅನುಮತಿಯನ್ನು ಪಡೆದುಕೊಂಡು ಶಿರಾ ನಗರಕ್ಕೆ ಬಂದಿದ್ದೇನೆ. ಅಷ್ಟೇ ಪ್ರಾಮಾಣಿಕನಾಗಿ ರಾಜಧಾನಿಗೆ ಮರಳುತ್ತೇನೆ ಎಂದು ಶಾಸಕ ಸತ್ಯನಾರಾಯಣ್ ಮಾಜಿ ಮುಖ್ಯಮಂತ್ರಿಗಳ ಆಮಿಷವೊಡ್ಡಿದ ಪರಿಯನ್ನು ಲೇವಡಿ ಮಾಡಿದರು.
ತಾ.ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಎಚ್.ಎಸ್. ಮೂಡಲಗಿರಿಯಪ್ಪ, ಮುದಿಮಡು ಮಂಜುನಾಥ್, ಆರ್.ರಾಘವೇಂದ್ರ, ಆರ್.ರಾಮು, ಮುದಿಮಡು ರಂಗಸ್ವಾಮಿ, ಜಿ.ಪಂ. ಸದಸ್ಯ ರಾಮಕೃಷ್ಣ, ಚಂಗಾವರ ಮಾರಣ್ಣ, ಬಿ.ಸತ್ಯಪ್ರಕಾಶ್, ಟಿ.ಡಿ.ಮಲ್ಲೇಶ್, ಶ್ರೀರಂಗಪ್ಪ ಯಾದವ್, ಬಂಡೆ ರಾಮಕೃಷ್ಣ, ಶಿರಾ ರವಿ, ಲಕ್ಕನಹಳ್ಳಿ ಮಂಜುನಾಥ್, ಎಸ್.ಎಲ್.ಗೋವಿಂದರಾಜು, ಉದಯಶಂಕರ್, ಹುಂಜಿನಾಳು ರಾಜಣ್ಣ, ಹೊನ್ನೇನಹಳ್ಳಿ ನಾಗರಾಜು ಸೇರಿದಂತೆ ಬಿ.ಎಸ್.ಅಭಿಮಾನಿ ಬಳಗದ ಪದಾಧಿಕಾರಿಗಳು, ಜೆಡಿಎಸ್‍ಪಕ್ಷದ ಕಾರ್ಯಕರ್ತ-ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ