ಚಿತ್ರದುರ್ಗ;
ನಿಯಮಗಳನ್ನು ಉಲ್ಲಂಘನೆ ಮಾಡಿ ಹೆಚ್ಚುವರಿ ಬೊರ್‍ವೆಲ್‍ಗಳನ್ನು ಕೊರೆಸಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ನಿರ್ಣಯ ಕೈಗೊಂಡಿದೆ
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಗಂಭಿರ ಚರ್ಚೆ ನಡೆಯಿತು. ಬಹುತೇಕ ಸದಸ್ಯರುಗಳ ಅಧಿಕಾರಿಗಳ ವರ್ತನೆ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 1666 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಈ ಕುರಿತು ಬಿಲ್ ಪಾವತಿಯಾಗಿಲ್ಲ, ಹೀಗಾಗಿ ನಿಗದಿತ ಏಜೆನ್ಸಿಗಳು ಬೋರ್‍ವೆಲ್ ಕೊರೆಯಲು ಬರುತ್ತಿಲ್ಲ ಎಂದು ಜಿ.ಪಂ. ಸದಸ್ಯರು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯಭಾಮ ಅವರು, ಜಿಲ್ಲೆಯಲ್ಲಿ ಇಲಾಖೆಯಡಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದಿರುವಂತೆ 604 ಬೋರ್‍ವೆಲ್‍ಗಳಿಗೆ ಮಾತ್ರ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಉಳಿದಂತೆ 1062 ಬೋರ್‍ವೆಲ್‍ಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆಯದೇ ಇರುವುದರಿಂದ, ನಿಯಮಾನುಸಾರ ಬಿಲ್ ಪಾವತಿಗೆ ಅವಕಾಶವಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಅವರು, ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದಿದ್ದರಿಂದ ಜನಪ್ರತಿನಿಧಿಗಳ ಕೋರಿಕೆಯಂತೆ ತುರ್ತು ಕ್ರಮವಾಗಿ ಬೋರ್‍ವೆಲ್ ಕೊರೆಯಿಸಲಾಗಿದೆ ಎಂದರು.
ಕ್ರಿಯಾಯೋಜನೆಗೂ ಮೀರಿ ಹೆಚ್ಚುವರಿ ಬೋರ್‍ವೆಲ್‍ಗಳ ಅಗತ್ಯವಿದ್ದಿದ್ದರೆ ಸರ್ಕಾರದ ಗಮನಕ್ಕೆ ತಂದು, ಕೊಳವೆ ಬಾವಿ ಕೊರೆಯಿಸಬೇಕಿತ್ತು. ಈ ಕುರಿತಂತೆ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಕಾರಣಗಳು ಸಮರ್ಥನೀಯವಾಗಿದ್ದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ನಟರಾಜನ್ ಅವರು ಮಾತನಾಡಿ, ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದೆ ಬೊರ್‍ವೆಲ್ ಕೊರೆಯಿಸಿ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದೆ ಎಂದರು.
ಗ್ರಾಮೀಣ ನೀರು & ನೈರ್ಮಲ್ಯ ಸಮಿತಿ :
ನೀರಿನ ಸಮಸ್ಯೆಗಳ ಕುರಿತು ಆಯಾ ಗ್ರಾಮಗಳಿಂದಲೇ ಕ್ರಿಯಾ ಯೋಜನೆ ರೂಪಿಸಿ, ಜಿಲ್ಲಾ ಪಂಚಾಯತ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಗೆ ಸಲ್ಲಿಸಿ, ರಾಜ್ಯ ಮಟ್ಟದ ಸಮಿತಿಗೆ ಅನುಮೋದನೆಗೆ ಕಳುಹಿಸಿಕೊಡಲು ಸರ್ಕಾರ ಮಾರ್ಗಸೂಚಿ ರೂಪಿಸಿದೆ ಎಂದು ಸಿಇಓ ಸತ್ಯಭಾಮ ತಿಳಿಸಿದರ
ಅಲ್ಲದೆ ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ಫ್ಲೋರೈಡ್ ನೀರಿನಿಂದ ಬಳಲುತ್ತಿರುವ ಗ್ರಾಮಗಳು ಹಾಗೂ ಕನಿಷ್ಟ ನೀರು ಪೂರೈಕೆ ಇರುವ ಗ್ರಾಮಗಳಿಗೆ ಮೊದಲ ಆದ್ಯತೆ ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇದರನ್ವಯ ಜಿಲ್ಲೆಯಲ್ಲಿ ಈಗಾಗಲೆ ಗ್ರಾಮ ಸಭೆಗಳಲ್ಲಿ ಜನರಿಂದಲೆ ಮಾಹಿತಿ ಪಡೆದು, ಮಾರ್ಗಸೂಚಿಯನ್ವಯ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ರೂಪಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಜಿ.ಪಂ. ಸದಸ್ಯರು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಸಮಿತಿಯು ಯೋಜನೆ ಹಾಗೂ ಮಾರ್ಗಸೂಚಿ ಜಿ.ಪಂ. ಸದಸ್ಯರ ಗಮನಕ್ಕೆ ತಂದಿಲ್ಲ. ಯಾವ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಜಿ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಅವರು, ಕ್ರಿಯಾ ಯೋಜನೆಯನ್ನು ರಾಜ್ಯ ಮಟ್ಟದ ಸಮಿತಿಗೆ ಶೀಘ್ರವೇ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಅಲ್ಲದೆ ನೀತಿ ಸಂಹಿತೆ ಕೂಡ ಜಾರಿಯಲ್ಲಿದ್ದ ಕಾರಣದಿಂದ ತ್ವರಿತವಾಗಿ ಯೋಜನೆ ಕೈಗೊಳ್ಳಲಾಗಿದೆ. ಮಾರ್ಗಸೂಚಿ ವ್ಯಾಪ್ತಿಯೊಳಗೆ ಬರುವ ಯೋಜನೆಗಳನ್ನು ಜಿ.ಪಂ. ಸದಸ್ಯರು ನೀಡಿದಲ್ಲಿ, ಆದ್ಯತಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಬಹುಗ್ರಾಮ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ. ಶಾಂತಿ ಸಾಗರ ಹಾಗೂ ವಿವಿ. ಸಾಗರದಿಂದ ನೀರು ಪೂರೈಕೆ ಮಾಡುವ ಗ್ರಾಮಗಳ ವ್ಯಾಪ್ತಿಗೆ ಇನ್ನೂ ಹೆಚ್ಚಿನ ಗ್ರಾಮಗಳನ್ನು ಸೇರ್ಪಡೆ ಮಾಡಬೇಕಿದೆ. ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಕ್ಷೇತ್ರವಾರು ಹಾಗೂ ಸದಸ್ಯವಾರು ಹಂಚಿಕೆ ಮಾಡದೆ, ತೀವ್ರ ಸಮಸ್ಯೆ ಇರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಹಂಚಿಕೆಮಾಡಿ, ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದರು
ಜಿಲ್ಲೆಯಲ್ಲಿ ಕಳೆದ ವರ್ಷ ವಿವಿಧ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಒಟ್ಟು 04 ತನಿಖಾ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಈ ಸಮಿತಿಗಳು ಇದುವರೆಗೂ ಯಾವುದೇ ತನಿಖೆ ಕೈಗೊಂಡು ವರದಿ ಸಲ್ಲಿಸಿಲ್ಲ. ಇನ್ನಾದರೂ ಸಮಿತಿಗಳು ಶೀಘ್ರ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿಕಲಚೇತನರಿಗಾಗಿ ಮೀಸಲಾಗಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂದು ಹೇಳಿದರು
ಹೀಗಾಗಿ ಮೂರು ವರ್ಷಗಳಿಂದ ಶೇ. 5 ರ ಅನುದಾನದಲ್ಲಿ ಲಭ್ಯವಾಗಿರುವ ಒಟ್ಟು 42.93 ಲಕ್ಷ ರೂ. ಅನುದಾನ ಖರ್ಚಾಗದೆ ಉಳಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಕಲಚೇತನರಿಗೆ ಸೌಲಭ್ಯ ವಿತರಣೆ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ತೋರಬೇಕಿದೆ ಎಂದರು.ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಸುಶೀಲಮ್ಮ, ಜಿ.ಪಂ. ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನಂತ್, ಮುಂಡರಗಿ ನಾಗರಾಜ್, ಶಿವಮೂರ್ತಿ ಸೇರಿದಂತೆ ಜಿ.ಪಂ. ಸದಸ್ಯರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.