ಬೆಂಗಳೂರು
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ಘಟನೆ ಕುರಿತು ಸಚಿವ ಎಚ್ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಧಾರ್ಮಿಕ ಆಚರಣೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುವುದನ್ನು ವಿರೋಧಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೋಮು ಸೌಹಾರ್ದತೆಯನ್ನು ಕಾಪಾಡುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಜೀವನದಲ್ಲಿ ಚೆಲ್ಲಾಟ ಆಡಬಾರದು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ವರ್ತಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಕೋಮು ಭಾವನೆಗಳನ್ನು ಕೆರಳಿಸುವುದು, ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಮತ್ತು ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಈ ರೀತಿಯ ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ಮಾತಿನ ಜವಾಬ್ದಾರಿಯನ್ನು ಅರಿತು ಮಾತನಾಡಬೇಕು. ಧಾರ್ಮಿಕ ತೀವ್ರವಾದ, ಕೋಮು ಪ್ರಚೋದನೆ ಪ್ರವೃತ್ತಿ ಯಾವುದೇ ಧರ್ಮದವರು ಮಾಡಿದರೂ ಖಂಡನೀಯ. ಒಂದು ಧಾರ್ಮಿಕ ಆಚರಣೆಯನ್ನ ಒಂದು ರಾಜಕೀಯ ವಿಷಯ ತಗೊಂಡು ಗೊಂದಲ ಉಂಟುಮಾಡಿದರೆ ಇದು ಸರಿಯಾದ ಕ್ರಮ ಅಲ್ಲ ಎಂದು ಮಹದೇವಪ್ಪ ಹೇಳಿದ್ದಾರೆ.
ಇದಕ್ಕೂ ಮುನ್ನ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದ ಅವರು, 2016 ರಿಂದ 2018 ರ ಅವಧಿಯಲ್ಲಿ ನುಡಿದಂತೆ ನಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲು ಹೂಡಿದ ತಂತ್ರ ಮತ್ತು ಕುತಂತ್ರವೇ, ‘‘ಹಿಂದೂ ವಿರೋಧಿ ಸರ್ಕಾರ’’ ಎಂಬುದು ಎಂದು ಉಲ್ಲೇಖಿಸಿದ್ದರು.
