ರಾಣಿಬೆನ್ನೂರು:
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಂಡನೋರ್ವನು ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆಗೈದ ದುರ್ಘಟನೆ ಶನಿವಾರ ಸ್ಥಳೀಯ ರಾಜೇಶ್ವರಿ ನಗರದಲ್ಲಿ ನಡೆದು ಜನರಲ್ಲಿ ಆತಂಕ ಮೂಡಿಸಿದೆ.
ಮೃತಳನ್ನು ನಗರದ ಶೈಲಜಾ ಕೋಂ ನಾಗರಾಜ (33) ಎಂದು ಗುರುತಿಸಲಾಗಿದೆ. ಆಗಾಗ್ಗೆ ಇರ್ವರ ಮಧ್ಯ ಗಲಾಟೆಯಾಗುತ್ತಿತ್ತು. ಇಂದು ಮದ್ಯಾಹ್ನ ಅದು ವಿಕೋಪಕ್ಕೆ ತಿರುಗಿ ಹೆಂಡತಿಯ ಕುತ್ತಿಗೆಯನ್ನು ಇರಿದು ಗಂಡ ಪರಾರಿಯಾಗಿದ್ದಾನೆ. ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.
ಘಟನಾ ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ, ಹೆಚ್ಚುವರಿ ಎಸ್ಪಿ ಜಗದೀಶ ಬಿ.ಎ, ಸಿಪಿಐ ಮಂಜುನಾಥ ನಲವಾಗಲ, ಪಿಎಸ್‍ಐ ಟಿ.ಮಂಜಣ್ಣ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ಕೌಟುಂಬಿಕ ಕಲಹವೇ ಪ್ರಮುಖ ಕಾರಣವಾಗಿದೆ. ಆತನ ಶೋಧನೆ ನಡೆದಿದೆ ಎಂದು ಎಸ್ಪಿ ತಿಳಿಸಿದರು. ಈ ಕುರಿತು ಶಹರ ಪೊಲೀಸ್ ಠಾಣೆಗೆ ಮೃತಳ ಸಹೋದರ ಮಂಜುನಾಥ ಈರಣ್ಣ ಕನಕಿ ದೂರು ನೀಡಿದ್ದಾನೆ.
ಹಿನ್ನಲೆ:
ಹೊನ್ನಾಳಿ ತಾಲೂಕ ಸುರಹೊನ್ನಿಯ ನಾಗನಾಜ ನೀಲಕಂಠಪ್ಪ ಎಭುಬವನಿಗೆ ಮದುವೆ ಮಾಡಲಾಗಿತ್ತು. 6 ವರ್ಷಗಳ ಕಾಲ ಸ್ವಗ್ರಾಮದಲ್ಲಿ ಇದ್ದರು. ಮನೆಯಲ್ಲಿ ಹೊಂದಾಣಿಕೆಯಾಗದ ಕಾರಣ ಇಬ್ಬರ ನಡುವೆ ಆಗಾಗ ಜಗಳವಾಗುತಿತ್ತು, ಖರ್ಚಿಗೆ ದುಡ್ಡು ಕೊಡು ಎಂದು ಪ್ರತಿದಿನ ಪೀಡಿಸುತ್ತಿದ್ದನು. ಹಿರಿಯರಿಂದ ಬುದ್ದಿ ಹೇಳಲಾಗಿತ್ತು. ಬುದ್ದಿ ಹೇಳಿದ ಮೇಲೆ ಶೈಲಜಾಳನ್ನು ಕರೆದುಕೊಂಡು ಬಂದು ರಾಣಿಬೆನ್ನೂರಿನ ರಾಜರಾಜೇಶ್ವರಿ ನಗರದ 3ನೇ ಮೇನ್ 1ನೇ ಕ್ರಾಸ್‍ನ ಬಾಡಿಗೆ ಮನೆಯಲ್ಲಿ ಕಳೆದ ಎರಡು ತಿಂಗಳಿಂದ ವಾಸಿಸುತ್ತಿದ್ದರು. ಮೃತಳಿಗೆ ಮೂವರು ಪುತ್ರಿಯರು ಇದ್ದಾರೆ. ಮೃತಳು ರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದಳು. ಈಚೆಗೆ ನರ್ಸ್ ಕೆಲಸ ಬಿಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.