ಖರ್ಚು ವೆಚ್ಚಗಳ ಲೆಕ್ಕಪತ್ರ ಸಮರ್ಪಕ ನಿರ್ವಹಣೆ ಮಾಡಿ

ಚಿತ್ರದುರ್ಗ:

    ನಗರ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಮಿತ್ಯ ಮತದಾನ ಮೇ.29 ರಂದು ನಡೆಯಲಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾ ಖರ್ಚು, ವೆಚ್ಚಗಳ ನಿರ್ವಹಣೆಯನ್ನು ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.

     ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2019 ರ ಖರ್ಚು ವೆಚ್ಚಗಳ ನಿರ್ವಹಣೆ ಕುರಿತು ಅಭ್ಯರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ ಮಾಹಿತಿ ನೀಡಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಗರ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರತ್ಯೇಕವಾಗಿ ಮತ್ತು ಸರಿಯಾದ ಲೆಕ್ಕಪತ್ರವನ್ನು ಚುನಾವಣಾ ಫಲಿತಾಂಶ ಘೋಷಣೆಯ ದಿನದವರೆಗೂ ನಿರ್ವಹಿಸಿ, ಚುನಾವಣೆಗಾಗಿ ಮಾಡಲಾದ ಖರ್ಚು ವೆಚ್ಚಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಎರಡು ದಿನಕ್ಕೊಮ್ಮೆ ಸಲ್ಲಿಸಬೇಕು ಎಂದು ಸೂಚಿಸಿದರು

      ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 16ಬಿ ಪ್ರಕಾರ ಚುನಾವಣಾ ಫಲಿತಾಂಶ ಘೋಷಿಸಿದ 30 ದಿನಗಳೊಳಗೆ ಲೆಕ್ಕ ಪತ್ರದ ಪ್ರತಿಯನ್ನು ರಿಟರ್ನಿಂಗ್ ಅಧಿಕಾರಿಗೆ ನೀಡಬೇಕು. ಹಿಂದಿನ ಚುನಾವಣೆಗಳನ್ನು ಅವಲೋಕಿಸಿದಾಗ ಖರ್ಚು, ವೆಚ್ಚಗಳ ಲೆಕ್ಕಪತ್ರ ನಿರ್ವಹಣೆ ಕುರಿತು ಮಾಹಿತಿ ಕೊರತೆಯ ಕಾರಣದಿಂದ ಖರ್ಚು, ವೆಚ್ಚಗಳ ವಿವರವನ್ನು ನಿಯಮಾನುಸಾರ ನೀಡದೆ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಹಲವು ಅಭ್ಯರ್ಥಿಗಳನ್ನು 3 ವರ್ಷಗಳ ಕಾಲ ಅನರ್ಹಗೊಳಿಸಿದ ಉದಾಹರಣೆಗಳು ಇವೆ. ಹೀಗಾಗಿ ಅಭ್ಯರ್ಥಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.

      ಸ್ಥಳೀಯ ಲೆಕ್ಕ ಪರಿಶೋಧಕ ವರ್ತುಲ ಇಲಾಖೆಯ ಉಪನಿರ್ದೇಶಕರು ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ವೆಚ್ಚಗಳ ನೋಡಲ್ ಅಧಿಕಾರಿ ಷಣ್ಮುಖಪ್ಪ ಮಾತನಾಡಿ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ನಗರಸಭೆಗೆ 2 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಗೆ 01 ಲಕ್ಷ ರೂ. ವೆಚ್ಚದ ಮಿತಿ ನಿಗದಿಪಡಿಸಲಾಗಿದೆ. ನಿಗದಿತ ಮೊತ್ತ ಮೀರಿ ಲೆಕ್ಕ ತೋರಿಸಿದರೆ ಕಾನೂನು ರೀತ್ಯಾ ಕ್ರಮಕ್ಕೆ ಒಳಗಾಗುವರು. ಒಂದಕ್ಕಿಂತ ಹೆಚ್ಚು ವಾರ್ಡ್‍ಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತ್ಯೇಕವಾಗಿ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಸಲ್ಲಿಸಬೇಕು. ವೆಚ್ಚದ ಎಲ್ಲ ಪಾವತಿಗಳನ್ನು ಲೆಕ್ಕಪತ್ರಗಳ ಜೊತೆ ಸಲ್ಲಿಸಬೇಕು ಎಂದು ಅವರು ಹೇಳಿದರು.

    ಸಭೆಯಲ್ಲಿ ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯಿತಿಗಳ ವಾರ್ಡ್‍ವಾರು ಸ್ಪರ್ಧಿಸಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link