ಹಿರಿಯೂರು:
‘ಹುಟ್ಟುವ ಮಗು ಆರೋಗ್ಯವಾಗಿರಲಿ ಎಂಬ ಬೇಡಿಕೆ ಇರಲಿ. ಆದರೆ ಗಂಡು ಮಗುವೇ ಆಗಬೇಕೆಂಬ ಮನೋಭಾವವನ್ನು ಪೋಷಕರು ಬದಲಾಯಿಸಿಕೊಳ್ಳಬೇಕು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.
ನಗರದ ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಸೋಮವಾರ ರಾಜ್ಯ ನಿವೃತ್ತ ನೌಕರರ ಸಂಘದ ಸ್ಥಳೀಯ ಘಟಕದಿಂದ ಹಮ್ಮಿಕೊಂಡಿದ್ದ ಸಂಘದ 17ನೇ ವಾರ್ಷಿಕೋತ್ಸವ, ಸಂಘದ ಹಿರಿಯ ಸದಸ್ಯರಿಗೆ ಹಾಗೂ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಳಿ ವಯಸ್ಸಿನಲ್ಲಿ ಗಂಡು ಮಕ್ಕಳು ಮಾತ್ರ ಆಸರೆಯಾಗಿ ನಿಲ್ಲುತ್ತಾರೆ ಎಂಬುದು ಪೂರ್ಣ ಸತ್ಯವಲ್ಲ. ಮಕ್ಕಳಿಗೆ ಆಸ್ತಿ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಆಸ್ತಿ ಇದ್ದರೆ ಅದಕ್ಕೆ ಜಗಳ, ಮಾಡದೇ ಇದ್ದರೆ ಮಾಡಿಲ್ಲವೆಂದು ನಿತ್ಯ ನಿಂದನೆ. ಹಿಂದೆ ಮತ್ತು ಇಂದು ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಶಿಕ್ಷಕರು ದಂಡಿಸಿದರೆ, ಪೋಷಕರು ಇನ್ನೂ ಸರಿಯಾಗಿ ಬುದ್ದಿ ಕಲಿಸಿ ಎಂದು ಶಿಕ್ಷಕರಿಗೆ ಹೇಳುತ್ತಿದ್ದರು. ಈಗ ನಾವೇ ಹೊಡೆಯೋಲ್ಲ, ನೀವ್ಯಾಕೆ ಹೊಡೀತೀರಿ ಎಂದು ರಂಪ–ರಾಮಾಯಣ ಮಾಡುತ್ತಾರೆ. ಅವಶ್ಯಕತೆ ಇದೆಯೋ ಇಲ್ಲವೋ ಯೋಚಿಸದೆ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುವ, ಅತಿ ಹೆಚ್ಚು ಮುದ್ದು ಮಾಡುವ ಪ್ರವೃತ್ತಿ ಭವಿಷ್ಯದಲ್ಲಿ ಹೆತ್ತವರಿಗೆ ಮಾರಕವಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.
ವೃದ್ಧಾಶ್ರಮ ಸಂಸ್ಕೃತಿ ನಮ್ಮದಲ್ಲ. ಹಿರಿಯರನ್ನು ದೇವರಂತೆ ಕಾಣದಿದ್ದರೂ ಮನುಷ್ಯರಂತೆ ಕಂಡು ಪ್ರೀತಿಸಿದರೂ ಸಾಕು. ಅವಿಭಕ್ತ ಕುಟುಂಬ ಎಂದರೆ ಗಂಡ–ಹೆಂಡತಿ–ಮಕ್ಕಳು ಎಂಬಂತಾಗಿದೆ. ಒಟ್ಟು ಕುಟುಂಬದಲ್ಲಿನ ಭಿನ್ನ ಅಭಿರುಚಿಯ ಬದುಕು ಕಾಣೆಯಾಗಿದೆ ಎಂದ ಅವರು, ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಸಿ.ಎಂ. ಬಳಿ ಚರ್ಚೆಗೆ ಸಮಯಾವಕಾಶ ಕೇಳುತ್ತೇನೆ. ಇಲ್ಲವಾದಲ್ಲಿ ಬರುವ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಎನ್. ಸಂಪತ್ ಮಾತನಾಡಿ, ಆರನೇ ವೇತನ ಆಯೋಗವು ನಿವೃತ್ತ ನೌಕರರ ಬಗ್ಗೆ ಶಿಫಾರಸು ಮಾಡಿರುವ ಪೂರ್ಣ ಪಿಂಚಣಿ ವಯಸ್ಸನ್ನು 33 ವರ್ಷದ ಬದಲು 30 ಕ್ಕೆ, ಪಿಂಚಣಿ ಪಡೆಯುವ ಕನಿಷ್ಟ ಸೇವೆಯನ್ನು 15 ವರ್ಷದ ಬದಲು 10 ಕ್ಕೆಇಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಸ್ಥಳೀಯ ಶಾಖೆ ಅಧ್ಯಕ್ಷ ಸಿ.ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ನಗರಸಭಾಧ್ಯಕ್ಷ ಟಿ.ಚಂದ್ರಶೇಖರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ದ್ಯಾಮಣ್ಣ, ನೌಕರರ ಸಂಘದ ಗೌರವಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಪರಮಶಿವಯ್ಯ, ಆರ್. ರಂಗಪ್ಪರೆಡ್ಡಿ, ನಾಗಪ್ಪ, ರೇವಣಸಿದ್ದಪ್ಪ, ಜಗದೀಶ್ ದರೇದಾರ್ ಮಾತನಾಡಿದರು. ರಾಜನಾಯಕ, ಯಶೋದಮ್ಮ, ಜಿ.ಶ್ರೀನಿವಾಸ್, ದೇವರಾಜ್, ಗಂಗಾಧರಪ್ಪ, ಮಲ್ಲೇಶಪ್ಪ ಉಪಸ್ಥಿತರಿದ್ದರು. ಸಿ.ಆರ್. ಏಕಾಂತಪ್ಪ ಸ್ವಾಗತಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.