ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ರೂ.21813ಕೋಟಿ : ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ

 ಬಳ್ಳಾರಿ:

     ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಕರ್ನಾಟಕ ಗಣಿಭಾದಿತ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಕೃಷಿ,ವಸತಿ ಸೌಕರ್ಯ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ರೂ.2181290.11 ಲಕ್ಷಗಳ ಯೋಜನೆ ಅಳವಡಿಸಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ,ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.  

      ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೆರಿಸಿ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ನೀಡಿದ ಸ್ವಾತಂತ್ರ್ಯ ಸಂದೇಶದಲ್ಲಿ ಈ ಪ್ರಮುಖ ಅಂಶ ಸೇರಿದಂತೆ ವಿವಿಧ ಅಂಶಗಳನ್ನು ಪ್ರಕಟಿಸಿದರು.

      ಕುಡಿಯುವ ನೀರಿಗಾಗಿ ರೂ.341339.80ಲಕ್ಷಗಳು, ಆರೋಗ್ಯ ಕ್ಷೇತ್ರಕ್ಕೆ ರೂ.311126.14 ಲಕ್ಷ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗೆ ರೂ.28654.70ಲಕ್ಷಗಳು,ಶಿಕ್ಷಣ ಕ್ಷೇತ್ರಕ್ಕಾಗಿ ರೂ.118832.57 ಲಕ್ಷಗಳು, ಕೌಶಲ್ಯ ಅಭಿವೃದ್ಧಿ ಯೋಜನೆ ರೂ.95006.82 ಲಕ್ಷ, ನೀರಾವರಿ ಯೋಜನೆಗೆ ರೂ.118667.58 ಲಕ್ಷ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಅಭಿವೃದ್ಧಿ ರೂ.171305.81ಲಕ್ಷಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ರೂ.14869.50ಲಕ್ಷಗಳು, ನೈರ್ಮಲ್ಯ ಕ್ಷೇತ್ರಕ್ಕೆ ರೂ.155933.00ಲಕ್ಷಗಳು, ಭೌತಿಕ ಮೂಲ ಸೌಕರ್ಯಕ್ಕಾಗಿ ರೂ.424959.50ಲಕ್ಷಗಳು, ಕೃಷಿ ಚಟುವಟಿಕೆಗಳಿಗಾಗಿ ರೂ.157054.69 ಲಕ್ಷಗಳು, ವಸತಿ ಯೋಜನೆಗಾಗಿ (ನಗರ ಮತ್ತು ಗ್ರಾಮೀಣ ಪ್ರದೇಶ) ರೂ.236540.00ಲಕ್ಷಗಳು ವಿನಿಯೋಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

      ಗಣಿಭಾದಿತ ಪ್ರದೇಶದ ಸುಮಾರು 40 ಸಾವಿರ ಬಡ ಕುಟುಂಬದವರಿಗೆ ಮನೆಯನ್ನು ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಯುವಕರಿಗೆ ಉದ್ಯೋಗ ಕಲ್ಪಿಸಲು ಕೌಶಲ್ಯ ತರಬೇತಿಗಳನ್ನು ಕೆಎಂಇಆರ್‍ಸಿ ಯೋಜನೆಯಡಿ ಏರ್ಪಡಿಸಲಾಗುವುದು ಎಂದರು.

      ಬಳ್ಳಾರಿಯ ವಿಮ್ಸ್ ಆಸ್ಪತ್ರೆಯನ್ನು ಬಲಪಡಿಸಲು ರೂ.200 ಕೋಟಿ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಬಳ್ಳಾರಿ ಹಾಲು ಉತ್ಪಾದನ ಕೇಂದ್ರಕ್ಕೆ ರೂ.225 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಸಂಡೂರಿನಲ್ಲಿ ಮೇಡಿಕಲ್ ಕಾಲೇಜ್ ಮತ್ತು ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‍ಗಳನ್ನು ಪ್ರಾರಂಭಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.

      ಹಗರಿ ಕೃಷಿ ಕಾಲೇಜು ಉನ್ನತೀಕರಣಕ್ಕೆ ಕ್ರಮ: ಜಿಲ್ಲೆಯಲ್ಲಿರುವ ಹಗರಿ ಕೃಷಿ ಕಾಲೇಜು ಉನ್ನತೀಕರಣಕ್ಕೆ ನಮ್ಮ ಸರಕಾರ ಕಟಿಬದ್ಧವಾಗಿದೆ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ಡಿ.ಕೆ.ಶಿವಕುಮಾರ ಅವರು, ಈ ಕಾಲೇಜು ಉನ್ನತೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

      ಕರ್ನಾಟಕ ಸಕಾಲ ಸೇವೆಗಳ ಯೋಜನೆಯ ಅನುಷ್ಠಾನದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ 2 ನೇ ಸ್ಥಾನ ಪಡೆದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯಕ್ಕೆ 5 ನೇ ಸ್ಥಾನ ಪಡೆದು ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಮ್ಮ ಭಾಷಣದಲ್ಲಿ ಸಂತಸ ಹಂಚಿಕೊಂಡರು.

      ಶಿಕ್ಷಣ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯು ಅಗ್ರ ಸ್ಥಾನವನ್ನು ಹೊಂದಿದೆ. ವಿದ್ಯಾರ್ಥಿ ಬೆಳಕು ಯೋಜನೆಯಡಿ ವಾರ್ಷಿಕ ರೂ.4 ಸಾವಿರ ಶಿಷ್ಯವೇತನವನ್ನು ಒಬ್ಬೊಬ್ಬ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ವಿದ್ಯಾರ್ಥಿ-ಬೆಳಕು ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

      ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದಿದೆ ಎಂದು ಹೇಳಿದ ಅವರು, ಸ್ವಚ್ಛ ಬಳ್ಳಾರಿ ಯೋಜನೆಯಡಿ ಓ.ಡಿ.ಎಫ್ ಯನ್ನು ಅಳವಡಿಸಲಾಗುತ್ತಿದೆ. ಜಿಲ್ಲೆಯಲ್ಲಿ 11 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 6 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿ ಮೂಲಭೂತ ಸೌಲಭ್ಯಗಳನ್ನು ಓದಗಿಸಲಾಗಿದೆ. ಮೊಬೈಲ್ ಸಂಚಾರಿ ಘಟಕವನ್ನು ಸಹ ಪ್ರಾರಂಭಿಸಲಾಗುತ್ತದೆ ಎಂದು ವಿವರಿಸಿದರು.

 ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಬಳ್ಳಾರಿ ಡಿಸಿ ಕಚೇರಿಯಲ್ಲಿ ಪೇಪರ್‍ಲೆಸ್ ಆಫೀಸ್ ಆರಂಭ:

      ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪೇಪರ್‍ಲೆಸ್ ಆಫೀಸ್ ಪ್ರಾರಂಭಿಸಲಾಗುತ್ತದೆ. ಆನ್‍ಲೈನ್ ಮೂಲಕ ಎನ್.ಎ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.

      ಜಿಲ್ಲೆಯ ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ಇಲಾಖೆ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳನ್ನು ಉನ್ನತಿಕರಿಸಲಾಗುತ್ತಿದೆ. ಶಾಲಾ ಕಾಲೇಜು, ಐಟಿಐ, ಡೀಪ್ಲೊಮೊ ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಬಳ್ಳಾರಿ ಸಿಟಿಗೆ ತುಂಗಾಭದ್ರಾ ಜಲಾಶಯದಿಂದ ನೀರು:

      ಬಳ್ಳಾರಿ ನಗರಕ್ಕೆ ತುಂಗಾಭದ್ರ್ರಾ ಡ್ಯಾಂನಿಂದ ನೇರವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆಯನ್ನು ರೂಪಿಸಲಾಗಿದ್ದು, ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ ಅವರು ಹೇಳಿದರು.

      ನೀರಾವರಿ ಕ್ಷೇತ್ರದಲ್ಲಿ ಹೆಚ್.ಎಲ್.ಸಿ ಮತ್ತು ಎಲ್.ಎಲ್.ಸಿ ಕ್ಯಾನಲ್‍ಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

      ಈ ಸಂದರ್ಭದಲ್ಲಿ ಸಂಸದ ಸೈಯದ್ ಯಾಸೀನ್, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಮೇಯರ್ ಆರ್.ಸುಶೀಲಾಬಾಯಿ, ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಪ್ರೋಬೆಷನರಿ ಐಎಎಸ್ ನಂದಿನಿ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link