ಗೌರಿಗೆ ಗೌರವಾದರ ಸಲ್ಲಿಸುವ ಪೂಜೆಯೇ ಗೌರಿಪೂಜೆ

      Related image

      ದಾಂಪತ್ಯ, ವಾತ್ಸಲ್ಯ, ಲಾವಣ್ಯಗಳು ಮಾತ್ರವಲ್ಲದೆ ಗಟ್ಟಿತನ, ಗರ್ವ, ಆತ್ಮ ಸಮ್ಮಾನಗಳಿಗೂ ಗೌರೀ ನಮಗೆ ಮಾದರಿಯಾಗುತ್ತಾಳೆ. ಲೀಲೆಯಲ್ಲಿ, ಪಾರಮ್ಯದಲ್ಲಿ, ಜನಪ್ರಿಯತೆಯಲ್ಲಿ ಪತಿರಾಯ ಶಿವನಿಗೆ ಸರಿಸಮನಾಗಿ ನಿಲ್ಲುತ್ತಾಳೆ.

      ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ. ಈಗ ತಾನೆ ಶ್ರಾವಣದ ಕಡೆಯ ಬಿಕ್ಕಳಿಕೆ ಮುಗಿದು ಅಳಿದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕತೆಗೆ ಹಬ್ಬದ ಸಂಭ್ರಮವೂ ಸೇರಿ ಮನೆ-ಮನಗಳು ಮತ್ತಷ್ಟು ಕಳೆಗಟ್ಟುತ್ತವೆ.

      ಅರಿಶಿನ ಗೌರಿ ಪೂಜಿಸುವವರು ಕೆಲವರಾದರೆ ; ಹಸಿ ಮಣ್ಣಿನಿಂದ ಪೂಜಿಸುವ ಪದ್ಧತಿ ಕೆಲವರದು. ಪೂಜೆಯ ನಂತರ ಬಾಗಿನ ಕೊಡುತ್ತಾರೆ. ಜೋಡಿ ಮೊರದಲ್ಲಿ ಆಹಾರ ಪದಾರ್ಥಗಳ ಜತೆಗೆ ಮಂಗಳ ದ್ರವ್ಯಗಳನ್ನು ಇಟ್ಟು ಅರ್ಪಿಸುತ್ತಾರೆ. ಗೌರಿಯನ್ನು ಮನೆಮಗಳೆಂದು ಭಾವಿಸಿ ಪ್ರತಿವರ್ಷವೂ ಆಹ್ವಾನಿಸಿ ಉಡಿತುಂಬುವುದು ಈ ಹಬ್ಬದ ವಿಶೇಷ. ಪ್ರಮುಖವಾಗಿ ಎರಡು ಸಂದರ್ಭಗಳಲ್ಲಿ ಗೌರಿಯನ್ನು ಪೂಜಿಸಲಾಗುತ್ತದೆ. ಶ್ರಾವಣದ ಮಂಗಳ ಗೌರಿ ವ್ರತ ಹಾಗೂ ಭಾದ್ರಪದದ ಸ್ವರ್ಣಗೌರಿ ವ್ರತ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಹಬ್ಬ.

Related image

      ಜನಪದ ಸಾಹಿತ್ಯದಲ್ಲಿ ಗೌರಿ ಮತ್ತು ಗಂಗೆಯ ಸಂಬಂಧವನ್ನು ಮನಮುಟ್ಟುವಂತೆ ಬಣ್ಣಿಸಲಾಗಿದೆ. ಅವರ ದೃಷ್ಟಿಯಲ್ಲಿ ಭೂಲೋಕಕ್ಕೆ ಗೌರಿ ಗಣೇಶರ ಜತೆ ಶಿವನೂ ಬರುತ್ತಾನೆ. ಮಗಳು ಮೊಮ್ಮಗನಿಗೆ ನೀಡುವ ಪ್ರೀತಿ ಆದರಗಳನ್ನು ಅಳಿಯನಿಗೂ ನೀಡುತ್ತಾರೆ ಜನಪದರು. ಮನೆಯ ಮಂದಿಯೆಲ್ಲ ಸಂಭ್ರಮಿಸುವ ಶುಭ ಸಂದರ್ಭದಲ್ಲಿ ಗೌರಿಯ ಸವತಿ ಗಂಗೆಯ ನೆನಪು ಯಾರಿಗೂ ಬರುವುದಿಲ್ಲ. ಗೌರಿಯ ಪರವಾದ ಪ್ರೀತಿಯೇ ಈ ಜಾಣ ಮರೆವಿಗೆ ಕಾರಣವಿರಬಹುದೇನೋ? ಗೌರಿಹಬ್ಬಕ್ಕೆ ಗಂಗೆಯನ್ನು ಕರೆಯದಿದ್ದರೇನಂತೆ, ಗೌರಿಗೆ ಬಾಗಿನ ನೀಡುವುದು ಗಂಗೆಯ ಮೂಲಕವೇ.

      ಬೇರೆಲ್ಲಾ ಹಬ್ಬಗಳಿಗಿಂತ ಗೌರಿ ಹಬ್ಬ ಆಪ್ತವೆನಿಸುವುದಕ್ಕೆ ಹಲವು ಕಾರಣಗಳಿವೆ. ಇದು ದೇವತಾರಾಧನೆಯ ಹಬ್ಬವಾದರೂ ಇದರ ಮೂಲ ತತ್ವ ಸಾಂಸ್ಕøತಿಕ ಹಿನ್ನೆಲೆಯಿಂದ ಕೂಡಿದೆ. ಲಕ್ಷ್ಮೀ-ಸರಸ್ವತಿಯರಿಗಿಂತ ಮಾನವ ಗುಣ ಸ್ವಭಾವಕ್ಕೆ ಹೆಚ್ಚು ಹತ್ತಿರವೆನಿಸುವ, ನಮ್ಮೆಲ್ಲರಂತೆ ಸಂಸಾರದ ಒಳ-ಹೊರಗೆ ಒಡನಾಡುವ ಪಾರ್ವತಿಯ ಹಬ್ಬ ಇದು. ಪರ್ವತರಾಜನ ಮಗಳಾದರೂ ಬೂದಿ ಬಡುಕ ಬೋಲಾ ಶಂಕರನನ್ನು ಮದುವೆಯಾಗುತ್ತಾಳೆ ಗೌರಿ. ಇದಕ್ಕೂ ಮೊದಲಾದರೂ ಅಷ್ಟೇ. ತನ್ನ ತಂದೆ ದಕ್ಷ ಪ್ರಜಾಪತಿಯ ಅಪಮಾನ ಸಹಿಸಲಾರದೆ ಚಿತೆಗೆ ಹಾರಿ ಪುನರ್ಜನ್ಮದಲ್ಲಿ ಪಾರ್ವತಿಯಾಗುತ್ತಾಳೆ.

Image result for gauri festival 2018

      ಶುಂಭ-ನಿಶುಂಭರೆಂಬ ರಾಕ್ಷಸರು ದೇವತೆಗಳಿಗೆ ಹಾಗೂ ಲೋಕಕ್ಕೆ ಕಂಟಕಪ್ರಾಯರಾಗಿ ಪರಿಣಮಿಸಿರುತ್ತಾರೆ. ಆಗ ದೇವತೆಗಳೆಲ್ಲರೂ ಸೇರಿ ದೇವಿಯನ್ನು ಸ್ತುತಿಸುತ್ತಾರೆ. ಆಗ ಗಂಗಾ ಸ್ನಾನಕ್ಕಾಗಿ ಬಂದ ಪಾರ್ವತಿಯ ಶರೀರದಿಂದ ದಿವ್ಯ ಸೌಂದರ್ಯದ ಸ್ತ್ರೀ ಹೊರಬರುತ್ತಾಳೆ. ಶರೀರ ಕೋಶದಿಂದ ಹೊರಬಂದವಳಾದ್ದರಿಂದ ಆಗ ಕಪ್ಪಾಗಿ ಕಾಣುತ್ತಾಳೆ. ಈಶ್ವರನು ಆಕೆಯನ್ನು ಕಾಳಿ (ಕಾಲಿ) ಎಂದು ಕರೆಯುತ್ತಾನೆ. ಆಗ, ಆ ಕಾಳಿಯು ಪುನಃ ತಪಸ್ಸುಗೈದು ಅದರ ಪ್ರಭಾವದಿಂದ ಗೌರವರ್ಣವನ್ನು ಪಡೆಯುತ್ತಾಳೆ. ಅವಳೇ ಗೌರಿ ಎಂದು ಮತ್ಸ್ಯಪುರಾಣ ಸಾರುತ್ತದೆ.

      ದಾಂಪತ್ಯ, ವಾತ್ಸಲ್ಯ, ಲಾವಣ್ಯಗಳು ಮಾತ್ರವಲ್ಲದೆ ಗಟ್ಟಿತನ, ಗರ್ವ, ಆತ್ಮಸಮ್ಮಾನಗಳಿಗೂ ಗೌರಿ ನಮಗೆ ಮಾದರಿಯಾಗುತ್ತಾಳೆ. ಲೀಲೆಯಲ್ಲಿ, ಪಾರಮ್ಯದಲ್ಲಿ, ಜನಪ್ರಿಯತೆಯಲ್ಲಿ ಪತಿರಾಯ ಶಿವನಿಗೆ ಸರಿಸಮನಾಗಿ ನಿಲ್ಲುತ್ತಾಳೆ. ಪುರಾಣ ಹಾಗೂ ಜನಪದದಲ್ಲಿ ಚಿತ್ರಿಸಿರುವ ಗೌರಿಯ ಕಥೆ ಭಾರತೀಯ ಹೆಣ್ಣುಮಕ್ಕಳ ಅಂತರಂಗಕ್ಕೆ ಕನ್ನಡಿಯಂತಿದೆ. ಹೆಣ್ಣಿನ ನಿಜವಾದ ಶಕ್ತಿಗಳೇನು ಎನ್ನುವುದು ಗೌರಿಯ ವ್ಯಕ್ತಿತ್ವದಲ್ಲಿ ಅನಾವರಣಗೊಳ್ಳುತ್ತದೆ.

Related image

      ಗೌರಿಯ ಸಂಸಾರ ವಿಲಕ್ಷಣವಾದುದು. ಇವರ ಕುಟುಂಬದಲ್ಲಿ ಗಂಡ ಹೆಂಡತಿ ಸೇರಿ ಕುಣಿಯುತ್ತಾರೆ. ಮಕ್ಕಳೂ ಸೇರಿದಂತೆ ಒಬ್ಬೊಬ್ಬರೂ ಒಂದೊಂದು ಕಡೆ ರಾಕ್ಷಸರನ್ನು ಸಂಹರಿಸಲಿಕ್ಕೋ ಯಾರದೋ ಸಹಾಯಕ್ಕೋ ಯುದ್ಧ ಹೂಡಿ ಹೋರಾಡುತ್ತಾರೆ. ಇವರೆಲ್ಲರ ವಾಹನಗಳಾದ ನಂದಿ, ಸಿಂಹ, ಹಾವು, ನವಿಲು, ಇಲಿಗಳು ಪರಸ್ಪರ ಶತ್ರುಗಳು. ಆದರೂ ಇಲ್ಲಿ ಸೌಹಾರ್ದವಿದೆ. ಕುಟುಂಬದಲ್ಲಿ ಇಂತಹ ಸೌಹಾರ್ದ ತಾಯಿಯಿಂದ ಮಾತ್ರ ಸಾಧ್ಯವಾಗುವಂತಹುದು.

      ಮದುವೆಯಾಗಿ ಕೈಲಾಸದಲ್ಲಿ ಶಿವನೊಡನೆ ನೆಲೆಸುವ ಪಾರ್ವತಿಗೆ ತವರಿನ ಮೋಹವೇನು ಕಡಿಮೆಯದಲ್ಲ. ಪರ್ವತವನ್ನು ಹೊತ್ತ ಭೂಮಿಯೇ ಇವಳ ತವರು ನೆಲ. ವರ್ಷಕ್ಕೊಮ್ಮೆ ಭೂಮಿಗೆ ಬರುವ ಗೌರಿಗೆ ಗೌರವಾದರ ಸಲ್ಲಿಸುವ ಉತ್ಸವವೇ ಗೌರಿಪೂಜೆ. ಈ ಹಬ್ಬವು ನೆಲದಲ್ಲಿ ಹುಟ್ಟಿ ಮಗಿಲ ಪತಿಯನ್ನು ಪಡೆದ ಪಾರ್ವತಿಯ ಬದುಕನ್ನು ಮಾದರಿಯಾಗಿ ನಮ್ಮ ಕಣ್ಣು ಮುಂದೆ ಇಡುತ್ತದೆ. ಭಗವಂತನನ್ನು ಹೊಂದಲು ಪ್ರೇಮವೊಂದು ಹೆದ್ದಾರಿಯಾಗಬಲ್ಲದು ಎಂದು ಸೂಚ್ಯವಾಗಿ ತಿಳಿಸುತ್ತದೆ.

      ಭಾದ್ರಪದ ಮಾಸದಲ್ಲಿ ಬರುವ ಒಂದು ಅತಿ ಮುಖ್ಯವಾದ ಹಬ್ಬ ಗೌರಿಹಬ್ಬ. ವ್ಯವಹಾರದಲ್ಲಿ ‘ಗೌರಿಹಬ್ಬ’ ಎಂದು ಪ್ರಸಿದ್ಧವಾಗಿದ್ದರೂ ಇದರ ಶಾಸ್ತ್ರೀಯವಾದ ಹೆಸರು “ಸ್ವರ್ಣಗೌರೀ ವ್ರತ”, “ಸಂಪದ್ಗೌರೀ”, “ಮಂಗಳಗೌರೀ”, “ಲಾವಣ್ಯಗೌರೀ”, “ತ್ರಿಲೋಚನಾ ಗೌರೀ”, “ಗಜಗೌರೀ” ಮುಂತಾದ ಇತರ ವ್ರತಗಳಿಗಿಂತ ಪ್ರತ್ಯೇಕವಾಗಿ ವಿಶೇಷತೆಯಿಂದ ಕೂಡಿರುವ ಹಬ್ಬ ಇದಾಗಿದೆ. ಇವೆಲ್ಲವೂ ಗೌರೀಹಬ್ಬಗಳೇ ಆಗಿದ್ದರೂ ಸ್ವರ್ಣಗೌರೀ ವ್ರತವು ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದರಿಂದ ಇದನ್ನು ಮಾತ್ರ ಗೌರೀಹಬ್ಬ ಎಂದು ಕರೆಯುವ ರೂಢಿಯು ಬಂದಿದೆ. ಭಾರತ ದೇಶದ ಎಲ್ಲಾ ಭಾಗಗಳಲ್ಲಿಯೂ ಈ ವ್ರತವನ್ನು ಆಚರಿಸುವ ಜನ ಹೇರಳವಾಗಿ ಇದ್ದಾರೆ.

“ಉಪಾಕರ್ಮ” ವನ್ನು ಗಂಡಸರ ಹಬ್ಬ ಎನ್ನುವುದಾದರೆ “ಗೌರೀಹಬ್ಬ”, “ವರಮಹಾಲಕ್ಷ್ಮೀ” ಮುಂತಾದವು ಹೆಂಗಸರ ಹಬ್ಬಗಳು. ಲಲಿತಾದೇವಿ, ಉಮಾ, ಏಕಪರ್ಣಾ, ಅಪರ್ಣಾ, ಶಾಂಕಂಭರೀ, ರಾಜರಾಜೇಶ್ವರೀ, ತ್ರಿಪುರಸುಂದರಿ ಮುಂತಾದವೂ ಈಕೆಯ ಬೇರೆ ಬೇರೆ ವೃತ್ತಿಗಳ ರೂಪಗಳೇ ಆಗಿವೆ.

      ಸರಸ್ವತಿ, ಗೌರೀ, ಲಕ್ಷ್ಮೀ ಇವರು ಮೂವರಿಗೂ ಎಲ್ಲಾ ಪುರುಷಾರ್ಥಗಳನ್ನೂ ದಯಪಾಲಿಸುವ ಶಕ್ತಿ ಉಂಟು. ಏಕೆಂದರೆ ಪರಾಶಕ್ತಿಯ ನಾನಾ ಪ್ರಕಾರಗಳೇ ಇವರಾಗಿದ್ದಾರೆ. ಆದರೆ ಇವರಲ್ಲಿ ಒಬ್ಬೊಬ್ಬರನ್ನೂ ಬೇರೆ ಬೇರೆ ವಿಷಯಗಳ ಫಲ ಲಾಭಕ್ಕಾಗಿ ಪೂಜೆ ಮಾಡುತ್ತಾರೆ. ಅವುಗಳಲ್ಲಿ ಉಮಾಗೌರಿಯನ್ನು ಆರಾಧಿಸುವುದು ವಿಶೇಷವಾಗಿ ಒಳ್ಳೆಯ ದಾಂಪತ್ಯ ಸೌಭಾಗ್ಯಕ್ಕಾಗಿ, ಅನುರೂಪನಾದ ಪತಿಯನ್ನು ಪಡೆಯುವುದಕ್ಕಾಗಿ ಮತ್ತು ಶಾಶ್ವತವಾದ ಪತಿಪ್ರೇಮ, ಸೌಮಂಗಲ್ಯ ಸಿದ್ಧಿಗಾಗಿ ಪೂಜಿಸಲ್ಪಡುತ್ತಾಳೆ ಈ ಸರ್ವಮಂಗಲಾದೇವಿ.

Related image

      ಈಗಲೂ ವಿವಾಹ ಮಂಗಲ ಸಮಾರಂಭದಲ್ಲಿ ತಾಳಿಯ ಭಾಗ್ಯಕ್ಕಾಗಿ ಗೌರೀ ಪೂಜೆಯನ್ನು ಮಾಡುವ ಪದ್ಧತಿಯು ಪ್ರಸಿದ್ಧವಾಗಿದೆ. ಗೌರಿಯನ್ನು ಶಿವನ ಪತ್ನಿ ಎಂದು ಕರೆಯುವಂತೆಯೇ ನಾರಾಯಣನ ತಂಗಿ ಎಂದು ಕರೆಯುವ ಶಾಸ್ತ್ರ ವಾಕ್ಯವೂ ಇದೆ. “ನಾರಾಯಣಾನುಜಿ ದೇವಿ ವೈಷ್ಣವೀ ವಿಜಯಾಂಬಿಕಾ”.

      ಇಷ್ಟಾರ್ಥವನ್ನು ಸಲ್ಲಿಸಬೇಕೆಂದು ದೇವಿಯನ್ನು ಪ್ರಾರ್ಥಿಸಿ ಆಕೆಯ ಅನುಮತಿಯಿಂದ ಪೂಜಿತವಾದ ಹದಿನಾರು ಗಂಟುಗಳುಳ್ಳ ದಾರವನ್ನು ಧರಿಸಬೇಕು. ಹದಿನಾರು ಎಳೆಗಳಿಂದ ಕೂಡಿದ ಪರಮಾತ್ಮಮಯಿಯಾದ ಪ್ರಕೃತಿ ಮಾತೆಯೇ ಗೌರೀದೇವಿ ಎಂಬ ತತ್ತ್ವವು ಇಲ್ಲಿ ಸೂಚಿತವಾಗಿದೆ. “ಶೋಭನಾರ್ಥಂ ಪುನರಾಗಮನಾಯಚ” ಎಂಬ ಬಯಕೆಯಿಂದ ಗೌರಿಯನ್ನು ಕಳುಹಿಸಿಕೊಡುತ್ತಾರೆ. ಪರಶಿವನ ಮಡದಿಯಿಂದ ಪಾರ್ವತಿದೇವಿ ಅಥವಾ ಗೌರಿದೇವಿಯು ತೌರುಮನೆಗೆ ಬರುವ ಹೆಣ್ಣುಮಗಳೋಪಾದಿಯಲ್ಲಿ ಬರುವಳೆಂದೂ ಗಣೇಶನು ತಾಯಿಯನ್ನು ಕರೆದುಕೊಂಡು ಹೋಗಲು ಬರುವನೆಂದೂ ನಂಬಿಕೆ. ಹೀಗಾಗಿ ಹೆಣ್ಣುಮಕ್ಕಳಿಗೆ ಗೌರಿಬಾಗನವೆಂದು ತವರು ಮನೆಯಿಂದ ಉಡುಗೊರೆ ಕೊಡುವ ಪದ್ಧತಿ ಇದೆ. 

– ಬೇ.ನ.ಶ್ರೀನಿವಾಸಮೂರ್ತಿ
ಮೊ : 94803 17440

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link