ಜಗಳೂರು :
ನನ್ನ ಅಧಿಕಾರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಗ್ರಾಮ ಪಂಚಾಯ್ತಿಯ ಅನುದಾನ ಬಳಸಿಕೊಂಡು 21.60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು.
ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯ್ತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಮಗಾರಿ ಮುಗಿದು ಇಂದು ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ. ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ ಆಶಯದಂತೆ ಗ್ರಾಮಗಳ ಅಭಿವೃದ್ದಿ ಆದರೆ ದೇಶ ಅಭಿವೃದ್ದಿಯದಂತೆ ಎನ್ನುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಸದ್ಬಳಕೆಮಾಡಿಕೊಂಡು ಗ್ರಾಮಗಳ ಅಭಿವೃದ್ದಿ ಮಾಡಬೇಕಾಗಿದೆ.
ನಮ್ಮ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯ ಬಹುತೇಕ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ, ಸಿಸಿ ರಸ್ತೆ, ಬಾಕ್ಸ್ ಚರಂಡಿ, ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಾಲೇಕಲ್ಲು ಗ್ರಾಮ ಸಾಕಷ್ಟು ಹಿಂದುಳಿದ ಗ್ರಾಮವಾಗಿದೆ. 22 ಕೆರೆ ಏತ ನೀರಾವರಿ ಯೋಜನೆಯಡಿ ತಾಲೂಕಿನ 3 ಗ್ರಾಮಗಳಾದ ಹಾಲೇಕಲ್ಲು, ತುಪ್ಪದಹಳ್ಳಿ, ಬಿಳಿಚೋಡು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶ್ರಮಿಸಲಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ನೀರು ಬರದೇ ಇರುವುದರಿಂದ ಬೇಸರ ತಂದಿದೆ. ಮತ್ತೊಮ್ಮೆ ಶ್ರೀಗಳ ಆಶೀರ್ವಾದದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರು ಹರಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳಿಂದಾಗಿ ಗ್ರಾಮಗಳು ಅಭಿವೃದ್ದಿಯತ್ತ ಸಾಗುತ್ತಿವೆ. ಕೇಂದ್ರ ಸರ್ಕಾರ ನೇರವಾಗಿ ಗ್ರಾಮ ಪಂಚಾಯ್ತಿಗೆ ಅನುದಾನ ನೀಡುವ ಮೂಲಕ ಹಳ್ಳಿಗಳ ಅಭಿವೃದ್ದಿಗೆ ಬದ್ದವಾಗಿದೆ. ಇಲ್ಲಿನ ಸದಸ್ಯರು ಪಕ್ಷಬೇಧ ಮರೆತು ತಮ್ಮ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ದಿಗೆ ಒಗ್ಗಟ್ಟಾಗಿ ಶ್ರಮಿಸಬೇಕು. ಸುವ್ಯವಸ್ಥಿತ ಕಟ್ಟಡ ನಿರ್ಮಾಣವಾಗಿದ್ದು, ಇದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರಶ್ಮೀರಾಜಪ್ಪ, ಸದಸ್ಯೆ ಉಮಾವೆಂಕಟೇಶ್, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಿದ್ದಮ್ಮರಾಜಪ್ಪ, ಉಪಾಧ್ಯಕ್ಷ ಸಂತೋಶ್‍ಕುಮಾರ್, ಕಾರ್ಯನಿರ್ವಾಹಕಾಧಿಕಾರಿ ಜಾನಕಿರಾಮ್, ಭೂಸೇನಾ ನಿಗಮ ಇಂಜಿನೀಯರ್ ಚಂದ್ರಶೇಖರ್, ಪಿಡಿಒ ಲೋಹಿತ್‍ಕುಮಾರ್, ಕಾರ್ಯದರ್ಶಿ ಹನುಮಂತಪ್ಪ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
