ನವದೆಹಲಿ:
“ಒಂದು ವೇಳೆ ಚೀನ ಜತೆಗೆ ಯುದ್ಧ ನಡೆದರೆ ಗೆಲ್ಲುವುದು ನಾವೇ’ – ಹೀಗೆಂದು ದೃಢ ವಿಶ್ವಾಸದಿಂದ ಹೇಳಿದ್ದು ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ.
ನವದೆಹಲಿಯಲ್ಲಿ ಬುಧವಾರ ಮಾತನಾಡಿದ ಅವರು, ಯುದ್ಧ ಎನ್ನುವುದು ಕೊನೆಯ ಆಯ್ಕೆಯಾಗಿರಲಿದೆ ಎಂದೂ ಹೇಳಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಎದುರಾಗಿರುವ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಾಗುತ್ತದೆ.
ಗಡಿ ಪ್ರದೇಶದಿಂದ ಸೇನೆಯನ್ನು ಆಂಶಿಕವಾಗಿ ವಾಪಸ್ ಪಡೆಯಲಾಗಿದ್ದರೂ, ಆ ದೇಶದಿಂದ ಎದುರಾಗಲಿರುವ ಭೀತಿ ಏನೇನೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
“ಅತ್ಯಂತ ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ಸೇನೆ ಕಾಪಾಡಿಕೊಂಡು ಬರುತ್ತಿದೆ. ಇದರ ಜತೆಗೆ ಚೀನಾ ಸೇನೆಯ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಂಧಾನದ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನಗಳೂ ನಡೆದಿವೆ. ಒಂದು ವೇಳೆ ಚೀನಾ ಜತೆಗೆ ಯುದ್ಧ ಏರ್ಪಟ್ಟರೆ, ಅದರಲ್ಲಿ ನಮ್ಮ ಸೇನೆಯೇ ಗೆಲ್ಲಲಿದೆ’ ಎಂದು ಹೇಳಿದ್ದಾರೆ.
ಚೀನಾ ಜತೆಗಿನ ಗಡಿಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ವೃದ್ಧಿಸುವ ಮತ್ತು ಬಲಪಡಿಸುವ ಕೆಲಸಗಳು ನಡೆದಿವೆ ಎಂದೂ ಸೇನಾ ಮುಖ್ಯಸ್ಥರು ಪ್ರಸ್ತಾಪಿಸಿದ್ದಾರೆ.
ಇದೇ ನಾಗಾಲ್ಯಾಂಡ್‌ನಲ್ಲಿ ಡಿ.14ರಂದು ಉಂಟಾಗಿರುವ ಗುಂಡು ಹಾರಾಟಕ್ಕೆ ಸಂಬಂಧಿಸಿದಂತೆ ಇನ್ನು ಒಂದೆರಡು ದಿನಗಳಲ್ಲಿ ತನಿಖೆ ಮುಕ್ತಾಯಗೊಂಡು ವರದಿ ಸಲ್ಲಿಕೆಯಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಬುಧ ವಾರ ಭಾರತ ಮತ್ತು ಚೀನಾ ನಡುವೆ 14ನೇ ಸುತ್ತಿನ ಮಾತುಕತೆ ಲಡಾಖ್‌ನಲ್ಲಿ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ