ದಾವಣಗೆರೆ
ಬಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯ್ಯಮ್ಮ ಬಲ್ಲೂರು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಿ ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಾಳಮ್ಮ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಕುಳಿತಿದ್ದಾಗ ಪಂಚಾಯಿತಿ ಸಭೆ ಹಾಲ್‍ನಲ್ಲಿ ಟೇಬಲ್ ಮಾಡಿಸುವ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾಗ, ಜಯ್ಯಮ್ಮ ಬಲ್ಲೂರು ಇದಕ್ಕಿದ್ದಂತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿ ಏಕಾಏಕಿ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಇವರ ಮಗ ಶರತ್ ಸಹ ಇದಕ್ಕೆ ಸಾಥ್ ನೀಡಿದ್ದಾರೆಂದು ಪಿಡಿಓ ಮಾಳಮ್ಮ ದೂರಿದ್ದಾರೆ.
ನನ್ನ ಕರ್ತವ್ಯಕ್ಕೆ ಅಡ್ದಿಪಡಿಸಿದಲ್ಲದೇ, ದೈಹಿಕ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ್ದು, ಇದರಿಂದ ದೈಹಿಕ ನೋವು ಜೊತೆಗೆ ಮಾನಸಿಕವಾಗಿ ಅಘಾತವುಂಟಾಗಿದೆ. ಈ ಹಿಂದೆಯೂ ಜಯ್ಯಮ್ಮ ಬಲ್ಲೂರು ಹಲವು ಬಾರಿ ಜಗಳವಾಡಿ ಗ್ರಾಮ ಪಂಚಾಯಿತಿ ಕಾರ್ಯಗಳಿಗೆ ಅಡ್ಡಿಪಡಿಸಿದ್ದು, ಯಾವುದೇ ಕಾಮಗಾರಿಗಳ ಕಡತಗಳಿಗೆ ಸಹಿ ಹಾಕದೇ ಹಣ ನೀಡಿದರೆ ಮಾತ್ರ ಸಹಿ ಹಾಕುವುದಾಗಿ ಹೇಳಿ ಆರ್ಥಿಕ ಚಟುವಟಿಕೆ ಹಾಗೂ ಅಭಿವೃದ್ಧಿ ಕಾರ್ಯವಾಗದಂತೆ ಅಡ್ಡಿಪಡಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಜಿಲ್ಲಾ ಪಂಚಾಯತ್ ಸಿಇಓ, ತಾಲ್ಲೂಕು ಪಂಚಾಯತ್ ಇಓ ಅವರಿಗೆ ದೂರು ಸಲ್ಲಿಸಲಾಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಳಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.