ಪೊಲೀಸರ ನಿರ್ಲಕ್ಷ್ಯವೇಕೆ?
ತುಮಕೂರು:
ಯಾವುದಾದರೂ ಅವಘಡಗಳು ಸಂಭವಿಸಿದಾಗ ಪೊಲೀಸ್ ಇಲಾಖೆ ದಿಢೀರ್ ಎಚ್ಚೆತ್ತುಕೊಳ್ಳುತ್ತದೆ. ಅಪರಾಧ ಪ್ರಕರಣ ನಡೆಯಲು ಇವುಗಳೆ ಕಾರಣ ಎಂದು ಅಂಗಡಿ ಮುಂಗಟ್ಟುಗಳನ್ನು ರಾತ್ರಿ 10 ಗಂಟೆಗೆಲ್ಲಾ ಮುಚ್ಚಿಸಿ ಬಿಡುತ್ತಾರೆ. ಕಿರಾಣಿ ಅಂಗಡಿಗಳಿಗೆ ತೆರಳಿ ಸಾಮಾನು ತರಲೂ ಕೆಲವೊಮ್ಮೆ ಸಂಕಷ್ಟ. ಸಾಮಾನ್ಯ ನಾಗರಿಕರನ್ನು ಹಿಡಿದು ಪ್ರಶ್ನಿಸುವ ಪೊಲೀಸರಿಗೆ ಕಳ್ಳಕಾಕರು ಎಲ್ಲಿರುತ್ತಾರೆ?, ಎಂತಹ ಅಂಗಡಿಗಳನ್ನು ಮುಚ್ಚಿಸಬೇಕು?, ಯಾವ ಸಮಯದಲ್ಲಿ ಅಪರಾಧ ಪ್ರಕರಣಗಳು ಹೇಗೆ ಘಟಿಸುತ್ತವೆ ಎಂಬ ಮಾಹಿತಿ ಇರಬೇಕಲ್ಲವೆ?
ಕಾನೂನು ಪಾಲನೆ ಹೆಸರಿನಲ್ಲಿ ಅಮಾಯಕರನ್ನು ಗೋಳು ಹೊಯ್ದುಕೊಳ್ಳುವ ಪೊಲೀಸರು ಕಳ್ಳಕಾಕರು ಇರುವ ಪ್ರದೇಶಗಳಿಗೆ, ಅಪರಾಧ ಕೃತ್ಯದ ಸ್ಥಳಗಳಿಗೆ ಏಕೆ ಹೋಗುತ್ತಿಲ್ಲ? ತುಮಕೂರು ನಗರವನ್ನೆ ಒಮ್ಮೆ ಸುತ್ತಾಡಿಕೊಂಡು ಬಂದರೆ ಎಲ್ಲೆಲ್ಲಿ ಯುವ ಜನರಿಗೆ ಮಾದಕ ವಸ್ತುಗಳು ಸುಲಭವಾಗಿ ಸಿಗಲಿವೆ ಎಂಬುದರ ಅರಿವು ಇಲ್ಲವೆ? ಕೆಲವು ಅಂಗಡಿಗಳು ರಾತ್ರಿ 10 ರ ನಂತರವೂ ತೆರೆದಿರುತ್ತವೆ.
ಮತ್ತೆ ಕೆಲವು ಹಾಡಹಗಲೆ ದುಶ್ಚಟಗಳನ್ನು ಅಂಟಿಸುವ ಕಾರ್ಯದಲ್ಲಿ ನಿರತವಾಗಿರುತ್ತವೆ. ಒಮ್ಮೆ ಪೊಲೀಸರು ಇಂತಹ ಅಂಗಡಿಗಳ ಕಡೆಗೆ ಬೀಟ್ ಹಾಕಿದರೆ ಸಾಕು ಅದೆಷ್ಟೋ ಸುಧಾರಣೆಯಾಗುತ್ತದೆ. ಟೀ ಅಂಗಡಿಗಳ ಮುಂದೆ ನಿಂತು ಟೀ ಸೇವನೆ ಮಾಡಿಕೊಂಡು ಬಂದರಷ್ಟೆ ಸಾಲದು. ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ಪತ್ತೆ ಮಾಡುವಷ್ಟರ ಮಟ್ಟಿಗೆ ಇಲಾಖೆ ಚುರುಕುಗೊಳ್ಳಬೇಕು.
ಇಂದು ಟೀ ಅಂಗಡಿಗಳಲ್ಲಿ ಕುಳಿತು ಹರಟೆ ಹೊಡೆಯುವ ವಿದ್ಯಾರ್ಥಿ ಸಮೂಹ ಮುಂದೆಯೂ ವಿದ್ಯಾರ್ಥಿಗಳಾಗಿಯೇ ಉಳಿಯಬಲ್ಲರು ಎಂಬುದಕ್ಕೆ ಯಾವುದೇ ಖಾತ್ರಿ ಇಲ್ಲ. ಇಂದು ಸಿಗರೇಟು, ನಂತರ ಮತ್ತು ಭರಿಸುವ ಮಾದಕ ದ್ರವ್ಯ, ಆನಂತರ ಬಾರ್, ಪಬ್ ಇತ್ಯಾದಿಗಳ ಆಕರ್ಷಣೆಗೆ ಒಳಗಾಗಿ ಬದುಕಿನ ಮಾರ್ಗವನ್ನೇ ಬದಲಾಯಿಸುವ ಸಂದರ್ಭಗಳೇ ಹೆಚ್ಚು. ಎಲ್ಲೆಲ್ಲಿ ಸಿಗರೇಟು ಸೇದುತ್ತಾ ಹರಟೆ ಹೊಡೆಯುವ ಗುಂಪು ಇರುವುದೋ ಅಲ್ಲೆಲ್ಲಾ ಒಂದಷ್ಟು ಕಾನೂನಿನ ಭಯ ಉಂಟು ಮಾಡುವ ವಾತಾವರಣ ಮೂಡಿಸಬೇಕು.
ಪೋಷಕರಿಂದ ಹಣ ಸಿಗುವವರೆಗೆ, ಸ್ನೇಹಿತರ ಸಹಕಾರ ಇರುವವರೆಗೆ ಇಂತಹ ದುಶ್ಚಟಗಳು ಅನೂಚಾನವಾಗಿ ಮುಂದುವರಿಯುತ್ತವೆ. ಸಮಸ್ಯೆ ಎದುರಾಗುವುದು ಹಣದ ಕೊರತೆ ಉಂಟಾದಾಗ. ಇಂತಹ ಸಂದರ್ಭಗಳು ಮನುಷ್ಯನನ್ನು ಅಡ್ಡದಾರಿ ಹಿಡಿಯಲು ಪ್ರೇರೇಪಿಸುತ್ತವೆ. ಈಗಾಗಲೇ ಮಾದಕ ವಸ್ತುಗಳ ವ್ಯಸನಕ್ಕೆ ಬಿದ್ದಿರುವ ಯುವಕ ಯಾವ ಕಾರಣಕ್ಕೂ ಅದರಿಂದ ದೂರ ಸರಿಯಲಾರನು. ತನ್ನಲ್ಲಿ ಹಣ ಇಲ್ಲದಿದ್ದರೆ ಏನಂತೆ, ಹಣ ಸಿಗುವ ಮಾರ್ಗಗಳನ್ನು ಹುಡುಕಿಕೊಳ್ಳುವತ್ತ ಗಮನ ಹರಿಸುತ್ತಾನೆ. ಇಂತಹವರಿಗೆ ಸಿಗುವ ಮಾರ್ಗಗಳು ಭಯಾನಕವಾಗಿಯೆ ಇರುತ್ತವೆ. ಒಂದೋ ಕಳವು ಕೃತ್ಯಗಳಿಗೆ ಇಳಿಯಬೇಕು. ಇಲ್ಲಾ ಅಪರಾಧ ಚಟುವಟಿಕೆಗಳ ಗುಂಪಿನೊಳಗೆ ಭಾಗಿಯಾಗಬೇಕು.
ಅಲ್ಲಲ್ಲಿ ನಡೆಯುವ ಕಳ್ಳತನ, ದರೋಡೆ, ಹತ್ಯೆ, ಕೊಲೆ ಮತ್ತಿತರ ಪ್ರಕರಣಗಳಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದನ್ನು ಗಮನಿಸಬಹುದು. ಇವರಲ್ಲಿ ಬಹುಪಾಲು ಶಾಲಾ ಕಾಲೇಜುಗಳನ್ನು ತೊರೆದವರು. ಹಣಕಾಸಿನ ಮಾರ್ಗಕ್ಕೆ ಈ ಜಾಡು ಹಿಡಿದವರು. ಹಣಕ್ಕಾಗಿ ಯಾವ ಕೃತ್ಯಕ್ಕಾದರೂ ಇಳಿಯುವ ಇಂತಹ ಗುಂಪು ಕೊಲೆ ಮತ್ತಿತರ ಅಪರಾಧ ಕೃತ್ಯಗಳನ್ನು ಮಾಡುವಲ್ಲಿ ಹಿಂಜರಿಯುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
