ತುರುವೇಕೆರೆ
ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಒತ್ತಾಯಿಸಿ ಶಾಸಕ ಮಸಾಲ ಜಯರಾಮ್ ಹಮ್ಮಿಕೊಂಡಿದ್ದ ಉಪವಾಸಕ್ಕೆ ಮಣಿದ ಜಿಲ್ಲಾಡಳಿತ ಶನಿವಾರ ಚಾನಲ್ಗಳಿಗೆ ನೀರು ಹರಿಸಿದೆ.
ಜಿಲ್ಲಾ ಸಚಿವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮ ತಾಲ್ಲೂಕಿಗೆ ಹರಿಯುವ ಹೇಮಾವತಿ ನೀರನ್ನು ಅನ್ಯಾಯ ಮಾಡಿ ಬೇರೆ ತಾಲ್ಲೂಕಿಗೆ ಹರಿಸುತ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಿ, ನಮ್ಮ ಚಾನಲ್ನಲ್ಲಿ ನೀರು ಬಿಡಬೇಕು ಹಾಗೂ ವೇಳಾ ಪಟ್ಟಿಯನ್ನು ನೀಡಬೇಕು ಎಂದು ಶಾಸಕರು ಪಟ್ಟು ಹಿಡಿದರು. ಶುಕ್ರವಾರ ನೂರಾರು ರೈತರೊಡಗೂಡಿ ತಾಲ್ಲೂಕಿನ ಚಾಕುವಳ್ಳಿ ಪಾಳ್ಯ ಡಿ 10 ತೂಬಿನ ಬಳಿ ಪ್ರತಿಭಟನೆ ನಡೆಸಿ ಉಪವಾಸ ಕೈಗೊಂಡಿದ್ದರು. ಶುಕ್ರವಾರ ರಾತ್ರಿ ಸಹ ಚಾನಲ್ ಮೇಲೆ ಮಲಗಿ ಉಪವಾಸ ಮುಂದುವರೆಸಿದ್ದರು. ಶನಿವಾರ ಬೆಳಗ್ಗೆ ಶಾಸಕರ ಆರೋಗ್ಯದಲ್ಲಿ ಏರುಪೇರು ಉಚಿಟಾಯಿತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ತಿರುಪತಯ್ಯ ಆರೋಗ್ಯ ತಪಾಸಣೆ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು, ತಾಲ್ಲೂಕಿಗೆ ಮೀಸಲಿರುವ ನೀರನ್ನು ಹರಿಸಬೇಕು. ನೀರು ಹರಿಸುವ ವೇಳಾ ಪಟ್ಟಿ ನೀಡುವವರೆÀಗೂ ಉಪವಾಸ ಮುಂದುವರೆಸಲಾಗುವುದು ಎಂದು ಪಟ್ಟು ಹಿಡಿದಿದ್ದರು.
ಹೇಮಾವತಿ ಇಲಾಖೆ ಸಿ.ಇ ರಾಮಕೃಷ್ಣಪ್ಪ, ತಿಪಟೂರು ಉಪವಿಭಾಗಾಧಿಕಾರಿ ಉಮೇಶ್ ಚಂದ್ರ ಶನಿವಾರ ಮಧ್ಯಾಹ್ನ ಶಾಸಕರ ಜೊತೆ ಮಾತನಾಡಿ ಕೂಡಲೇ ಚಾನಲ್ಗಳಲ್ಲಿ ನೀರು ಹರಿಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ತಾಲ್ಲೂಕಿಗೆ ನೀರು ಹರಿಸುವ ವೇಳಾ ಪಟ್ಟಿ ನೀಡಲಾಗುವುದು ಎಂದು ಭರವಸೆ ನೀಡಿದರು. ಉಪವಿಭಾಗಾಧಿಕಾರಿ ಉಮೇಶ್ ಚಂದ್ರ ಶಾಸಕ ಮಸಾಲಜಯರಾಮ್ರವರಿಗೆ ಎಳೆನೀರು ಕುಡಿಸುವ ಮೂಲಕ ಉಪವಾಸ ಅಂತ್ಯ ಗೊಳಿಸಲಾಯಿತು.
ರೈತರು ಹಾಗೂ ಕಾರ್ಯಕರ್ತರ ಹರ್ಷೋದ್ಗಾರ: ಕೆರೆಗಳಿಗೆ ನೀರು ಹರಿಸುವಂತೆ ಶುಕ್ರವಾರದಿಂದ ಶಾಸಕರ ಜೊತೆ ಪ್ರತಿಭಟಿಸುತ್ತಿದ್ದ ರೈತರು ಹಾಗೂ ಕಾರ್ಯಕರ್ತರರಲ್ಲಿ ಹರ್ಷೋದ್ಗಾರ ಮನೆ ಮಾಡಿತ್ತು. ನೆರದಿದ್ದ ನೂರಾರು ರೈತರು ಶಾಸಕರಿಗೆ ಜೈಕಾರ ಹಾಕಿದರು.
ಶಾಸಕ ಮಸಾಲ ಜಯರಾಮ್ ಮಾತನಾಡಿ, ಶುಕ್ರವಾರದಿಂದ ಕೈಗೊಂಡಿದ್ದ ಉಪವಾಸ ನಿರಶನದಲ್ಲಿ ನನ್ನೊಂದಿಗೆ ಪಾಲ್ಗೊಂಡ ತಾಲ್ಲೂಕಿನ ನೂರಾರು ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ತಾಲ್ಲೂಕಿನ ರೈತರಿಗೆ ಯಾವುದೇ ಅನ್ಯಾಯವಾದರೆ ರೈತರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.