ದಾವಣಗೆರೆ:
ವಿದೇಶಿ ಪರಿಕಲ್ಪನೆಯ ಚಿತ್ರಗಳ ಮೋಡಿಯಿಂದ ಹೊರ ಬಂದು, ಭಾರತದ ವಾಸ್ತವ ಚಿತ್ರಣ ಕಟ್ಟಿಕೊಡುವ ಚಿತ್ರಕಲೆಗೆ ಒತ್ತು ನೀಡಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ.ಪಿ.ಕಣ್ಣನ್ ದೃಶ್ಯಕಲಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ವಿಭಾಗದ ಬಿವಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸಮೂಹ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದೃಶ್ಯಕಲಾ ವಿದ್ಯಾರ್ಥಿಳು ಹೊಟ್ಟೆ ತುಂಬಿದ ವಿದೇಶಿ ಜನರ ಪರಿಕಲ್ಪನೆಯ ಚಿತ್ರಗಳ ಮೋಡಿಯಿಂದ ಹೊರಬಂದು, ಭಾರತದ ವಾಸ್ತವ ಚಿತ್ರಣಗಳನ್ನು ಕಟ್ಟಿಕೊಡಲು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಕಲೆ ಮತ್ತು ಸುಂದರತೆ ಎರಡೂ ಅವಳಿ-ಜವಳಿ ಇದ್ದಂತೆ, ಯಾವ ಕಲೆಗೂ ಕುರೂಪತೆ ಎಂಬುದಿಲ್ಲ. ಕಾಗೆ ಮತ್ತು ಕೋಗಿಲೆ ಎರಡೂ ಹಸಿವಿಗಾಗಿ ಕೂಗುತ್ತವೆ. ಹಾಗಂದ ಮಾತ್ತಕ್ಕೆ ಒಂಪಾಗಿ ಕೂಗುವ ಕೋಗಿಲೆ ಶ್ರೇಷ್ಠ, ಕರ್ಕಷವಾಗಿ ಕೂಗುವ ಕಾಗೆ ಕನಿಷ್ಠ ಎಂಬ ತಪ್ಪು ಕಲ್ಪನೆಯಿಂದ ಹೊರ ಬಂದು, ಈ ಎರಡೂ ಪಕ್ಷಿಗಳ ಹೊಟ್ಟೆಯ ಹಸಿವು ಅರಿಯಲು ಪ್ರಯತ್ನ ಮಾಡಬೇಕು. ಅಲ್ಲದೇ, ಬಿಳಿಯ ಜನರಷ್ಟೆ ಸುಂದರರು, ಕಪ್ಪು ಜನ ಕುರೂಪಿಗಳೆಂಬ ಕಲ್ಪನೆ ಸರಿಯಲ್ಲ. ಹೀಗಾಗಿ ಇಂತಹ ಮನೋಭಾವದಿಂದ ಹೊರ ಬರಬೇಕೆಂದು ಕಿವಿಮಾತು ಹೇಳಿದರು.
ನಿಮ್ಮ ಕೌಶಲದಿಂದಾಗಿ ನಿಜವಾದ ಸುಂದರತೆಯನ್ನು ವಾಸ್ತವತೆಗೆ ತರುವಂತಾಗಬೇಕೆಂದ ಅವರು, ಸಮಾಜಿಕ ಕಳಕಳಿ ಬಿಂಬಿಸುವ ಚಿತ್ರಕಲೆಯು ಎಂದಿಗೂ ಮೌಲ್ಯಯುತವಾಗಿರುತ್ತದೆ. ಕಲ್ಪನೆಯಲ್ಲಿ ಸೃಷ್ಟಿಸಿದ ಚಿತ್ರಕ್ಕೆ ಅಷ್ಟು ಮಹತ್ವ ಇರುವುದಿಲ್ಲ. ಆದರೆ, ಸಮಾಜದಲ್ಲಿ ನೈಜತೆಯನ್ನು ತೋರಿಸುವ ಚಿತ್ರಕಲೆಗೆ ಉನ್ನತ ಸ್ಥಾನವಿದೆ. ಹಾಗೆಯೇ ವಾಸ್ತವತೆಯನ್ನು ಕಲ್ಪನೆ ಮಾಡಿಕೊಂಡು ಚಿತ್ರಿಸಿದ ಕಲೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಕಲೆಗೆ ಹಲವಾರು ಅರ್ಥಗಳಿವೆ. ವಾಸ್ತವತೆಯ ಆಧಾರದ ಮೇಲೆ ಕಲೆಗಳು ಬಿಂಬಿತವಾಗಬೇಕೆ ವಿನಹಃ ಇನ್ಯಾವುದೋ ವ್ಯಾಮೋಹಕ್ಕೆ ಒಳಗಾಗಬಾರದು. ನಮ್ಮಲ್ಲಿನ ಕೌಶಲ್ಯ ಬಳಸಿ ಸುಂದರತೆಗೆ ಒತ್ತು ನೀಡುವ ಮೂಲಕ ಕಲೆಗಳ ಅರ್ಥಗಳನ್ನು ಹೊರಗೆ ತರಬೇಕಾಗಿದೆ. ವಾಸ್ತವವನ್ನೇ ಕಲ್ಪನೆಮಾಡಿ ಕಲೆಯನ್ನಾಗಿಸುವುದೇ ನಿಜವಾದ ಕಲೆಗಾರನ ಕಾಯಕವಾಗಿದೆ ಎಂದು ನುಡಿದರು.
ದಾವಣಗೆರೆ ವಿವಿ ಕಲಾ ನಿಕಾಯದ ಡೀನ್ ಡಾ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಪ್ರತಿಯೊಂದು ಕಲೆಗೂ ತನ್ನದೇಯಾದ ಮೌಲ್ಯವಿದೆ. ಅದನ್ನು ಹಣದಿಂದ ಅಳೆಯುವುದು ಸೂಕ್ತವಲ್ಲ. ಎಲ್ಲಿ ನಮ್ಮ ಕಲೆಯ ಸಂಸ್ಕೃತಿ ಪ್ರತಿಬಿಂಬಿಸುತ್ತದೆಯೋ ಅಲ್ಲಿ ಮಾತ್ರ ಕಲೆಗೆ ನಿಜವಾದ ಅರ್ಥ ಸಿಗುತ್ತದೆ.
ಕಲೆಗಳು ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಾಗಬೇಕೆಂದು ಆಶಿಸಿದರು.ಈ ಸಂದರ್ಭದಲ್ಲಿ ಎನ್.ಅಖಿಲಾ, ಕೆ.ಎಂ.ಅನುಷಾ, ಕೆ.ಚೇತನ್, ಬಿ.ಎಂ.ಚೇತನ್, ಹರಿಜನ್ ದುರ್ಗೇಶ್, ಬಿ.ಮಹಾಂತೇಶ್, ಮಂಟಯ್ಯ ವಿ.ಕಾಟಾಪುರಮಠ್, ಬಿ.ಷಣ್ಮುಖ, ಆರ್.ವಿಕಾಸ್ ಅವರ ಚಿತ್ರ ಕಲಾಕೃತಿಗಳು ಪ್ರದರ್ಶನಗೊಂಡು ಕಲಾರಸಿಕರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ರವೀಂದ್ರ ಎಸ್.ಕಮ್ಮಾರ್, ದತ್ತಾತ್ರೇಯ ಎನ್. ಭಟ್, ಹೇಮಲತಾ, ಮಯೂರಿ, ಶಿವಕುಮಾರ್ ಸುತಾರ್, ಸತೀಶ್ ಹೋಲ್ಲೆಪುರಿ, ಸಂತೋಷ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.