ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಸುಭೋದ್ ಯಾದವ್

ಬಳ್ಳಾರಿ

        ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಎಲ್ಲರು ತಂಡವಾಗಿ ಕೆಲಸ ಮಾಡಬೇಕು ಮತ್ತು ಚುನಾವಣಾ ಆಯೋಗ ನೀಡಲಾಗಿರುವ ಸ್ಪಷ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರೀತಿಯ ಲೋಪಗಳಾಗದಂತೆ ಎಚ್ಚರವಹಿಸಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಪ್ರಾದೇಶಿಕ ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

       ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಚುನಾವಣಾಧಿಕಾರಿಗಳು,ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಹಾಯಕ ಚುನಾವಣಾಧಿಕಾರಿಗಳು ಮತ್ತು ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾದ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳಿಗೆ ಅವರ ಸಮಿತಿಯ ಕಾರ್ಯವೈಖರಿ ಅರಿವಿದ್ದರೇ ಸಾಲದು; ಆ ಸಮಿತಿಯಲ್ಲಿನ ಎಲ್ಲ ಸದಸ್ಯರಿಗೆ ಸಮಿತಿಯ ಹೊಣೆಗಾರಿಕೆ ಮತ್ತು ತಮ್ಮ ಜವಾಬ್ದಾರಿಗಳ ಕುರಿತು ಸಂಪೂರ್ಣ ಅರಿವಿರಬೇಕು. ಅಂದಾಗಲೇ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅವರನ್ನು ಸಜ್ಜುಗೊಳಿಸಿ ಎಂದರು.

        ಚುನಾವಣೆ ಎಂಬುದು ಒಂದು ಗಂಭೀರ ಪ್ರಕ್ರಿಯೆ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಪ್ರಾದೇಶಿಕ ಚುನಾವಣಾಧಿಕಾರಿ ಸುಬೋದ್ ಯಾದವ್ ಅವರು ಈ ವಿಷಯದಲ್ಲಿ ತಾವು ಸ್ಪಷ್ಟವಾಗಿರಿ; ಯಾವುದೇ ರೀತಿಯ ಗೊಂದಲ,ವಿವಾದಗಳಿಗೆ ಅಸ್ಪದ ಕೊಡಬೇಡಿ. ಸಣ್ಣ ದೂರು ಬಂದರೂ ಕೂಡ ಅದನ್ನು ವಿಚಾರಣೆ ಮಾಡಿ ಲಿಖಿತ ರೂಪದಲ್ಲಿ ಆಯೋಗದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.

ಮದ್ಯದ ವಹಿವಾಟಿನ ಮೇಲಿರಲಿ ನಿಗಾ

        ಮದ್ಯದ ವಹಿವಾಟಿನ ಮೇಲೆ ತೀವ್ರ ನಿಗಾವಹಿಸುವಂತೆ ಸೂಚಿಸಿದ ಪ್ರಾದೇಶಿಕ ಚುನಾವಣಾಧಿಕಾರಿಗಳು, ಹೋಲ್‍ಸೆಲ್ ಮತ್ತು ರಿಟೇಲ್ ಮದ್ಯ ಮಾರಾಟ ಪ್ರತಿನಿತ್ಯ ಮಾನಿಟರ್ ಮಾಡಿ, ಮದ್ಯ ಅಕ್ರಮ ಸಾಗಾಣೆ ಮತ್ತು ಬಳಕೆ ಕಂಡುಬಂದಲ್ಲಿ ಸೀಜ್ ಮಾಡಿ ಪ್ರಕರಣ ದಾಖಲಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.ಚುನಾವಣೆಯಲ್ಲಿ ಮದ್ಯ ಮತ್ತು ಕಾಂಚಾಣದ ಪಾತ್ರವೇ ಪ್ರಧಾನ ಎನ್ನಲಾಗುತ್ತದೆ; ತಾವು ಯಾವುದೇ ಕಾರಣಕ್ಕೂ ಅದಕ್ಕೆ ಅಸ್ಪದ ಮಾಡಿಕೊಡಬೇಡಿ ಎಂದರು.

        ಸಭೆಯಲ್ಲಿ ಉಪಸ್ಥಿತರಿದ್ದ ಅಬಕಾರಿ ಅಧಿಕಾರಿ ಮಾತನಾಡಿ, ಮಾ.6ರಿಂದ ಪ್ರತಿನಿತ್ಯ ಮಾರಾಟವಾಗುತ್ತಿರುವುದನ್ನು ವರದಿ ತೆಗೆದುಕೊಳ್ಳುತ್ತಿದ್ದೇವೆ. 3 ತಿಂಗಳ ಸರಾಸರಿ ಪರಿಶೀಲಿಸಿ ಹೆಚ್ಚಿನ ಮದ್ಯ ನೀಡದಂತೆ ಕೆಎಸ್‍ಟಿಡಿಎಲ್‍ಗೆ ಸೂಚಿಸಲಾಗಿದ್ದು,ಅಲ್ಲಿಯೂ ಸಿಸಿಟಿವಿ ಅಳವಡಿಸಿ ಪರಿಶೀಲಿಸಲಾಗಿದೆ. ಕಂಟ್ರೋಲ್ ರೂಂ ಕೂಡ ಸ್ಥಾಪಿಸಲಾಗಿದೆ ಎಂದರು.

ಹಣದ ಮೇಲೆ ನಿಗಾ ವಹಿಸಿ

          ಬ್ಯಾಂಕ್‍ಗಳಲ್ಲಿ ಹಣ ಡ್ರಾ, ವರ್ಗಾವಣೆ ಹಾಗೂ ಸಾಗಾಟದಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು ಎಂದು ಸುಬೋದ್ ಯಾದವ್ ಅವರು ಸೂಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು,1ಲಕ್ಷಕ್ಕಿಂತ ಹೆಚ್ಚಿನ ಹಣ ವರ್ಗಾವಣೆ,ಹಿಂತೆಗೆತ ಮಾಹಿತಿ ನೀಡುವಂತೆ ಬ್ಯಾಂಕ್ ಮ್ಯಾನೇಜರ್‍ಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ಹಣ ವರ್ಗಾವಣೆಯ ಸಂದೇಹಾಸ್ಪದ ಬ್ಯಾಂಕ್ ಖಾತೆಗಳಿದ್ದಲ್ಲಿ ಅವುಗಳ ಕುರಿತು ಕೂಡ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಮಾಹಿತಿ ಪ್ರತಿನಿತ್ಯ ಪಡೆದುಕೊಳ್ಳಲಾಗುತ್ತಿದೆ ಎಂದರು.

ಚುನಾವಣೆ ಸುಸೂತ್ರ

        ಪೊಲೀಸ್ ಪಡೆ ಸನ್ನದ್ಧ: ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಸೂಸುತ್ರವಾಗಿ ಮತ್ತು ಅತ್ಯಂತ ಶಾಂತಿಯುತವಾಗಿ ಜರುಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಅವರು ಪ್ರಾದೇಶಿಕ ಚುನಾವಣಾಧಿಕಾರಿಗಳಿಗೆ ಮಾಹಿತಿ ಒದಗಿಸಿದರು.

         ಜಿಲ್ಲೆಯಲ್ಲಿ 2161 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ಅವುಗಳಲ್ಲಿ 463 ಕ್ರಿಟಿಕಲ್ ಪೋಲಿಂಗ್ ಸ್ಟೇಶನ್‍ಗಳಾಗಿವೆ. ಕ್ರಿಟಿಕಲ್ ಪೋಲಿಂಗ್ ಸ್ಟೇಶನ್‍ಗಳಿಗೆ 463 ಹೆಡ್ ಕಾನ್‍ಸ್ಟೇಬಲ್ ಮತ್ತು 463 ಹೋಮ್ ಗಾಡ್ರ್ಸ, ಉಳಿದ 1698 ಬೂತ್‍ಗಳಿಗೆ 849 ಪೊಲೀಸ್ ಪೇದೆಗಳು ಮತ್ತು 849 ಹೋಮ್ ಗಾಡ್ರ್ಸ್‍ಗಳನ್ನು ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಾಗಿದೆ.ಸೆಕ್ಟರ್ ಮೊಬೈಲ್ಸ್‍ಗೆ 115 ಜನ ಎಎಸ್‍ಐಗಳು, ಸೂಪರ್ ವೈಸರಿ ಮೊಬೈಲ್ಸ್‍ಗೆ 27 ಜನ ಪೊಲೀಸ್ ಇನ್‍ಸ್ಪೇಕ್ಟರ್‍ಗಳು, ಉಪವಿಭಾಗಗಳ ಮೇಲ್ವಿಚಾರಣೆಗೆ 6 ಜನ ಡಿಎಸ್‍ಪಿಗಳು ನಿಯೋಜಿಸುವುದು ಸೇರಿದಂತೆ ಈ ಚುನಾವಣೆ ಕಾರ್ಯಕ್ಕೆ 6 ಜನ ಡಿಎಸ್‍ಪಿಗಳು, 27 ಪೊಲೀಸ್ ಇನ್‍ಸ್ಪೆಕ್ಟರ್‍ಗಳು, 179 ಎಎಸ್‍ಐಗಳು, 499 ಮುಖ್ಯ ಪೊಲೀಸ್ ಪೇದೆಗಳು, 1087 ಪೊಲೀಸ್ ಪೇದೆಗಳು ಹಾಗೂ 1532 ಹೋಮ್‍ಗಾಡ್ರ್ಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಈಗಾಗಲೇ ಎರಡು ವಾರಗಳ ಹಿಂದೆ ತರಬೇತಿ ನೀಡಲಾಗಿದೆ ಎಂದು ಅವರು ವಿವರಿಸಿದರು.
1492 ಶಸ್ತ್ರಾಸ್ತ್ರಗಳಲ್ಲಿ 900 ಶಸ್ತ್ರಾಸ್ತ್ರಗಳನ್ನು ಈಗಾಗಲೇ ಡಿಪಾಸಿಟ್ ಮಾಡಲಾಗಿದೆ. ಉಳಿದವುಗಳನ್ನು ಎರಡ್ಮೂರು ದಿನಗಳಲ್ಲಿ ಡಿಪಾಸಿಟ್ ಮಾಡಲು ಕ್ರಮವಹಿಸಲಾಗುವುದು ಎಂದರು.

         ಡಿಸಿ ರಾಮ್ ಪ್ರಸಾತ್ ಅವರು ಮಾತನಾಡಿ, 94 ವಲ್ಯೂರಬಲ್ ಏರಿಯಾಗಳಲ್ಲಿ(ಭಯಗ್ರಸ್ತ ಪ್ರದೇಶಗಳಲ್ಲಿರುವ ಮತಗಟ್ಟೆಗಳು) ಈ ಸ್ಥಿತಿಗೆ ಕಾರಣರಾಗುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕಳೆದ ಬಾರಿ ಶಾಂತಿ ಕದಡುವ ಗೂಂಡಾಗಳಿಂದ ಆಸ್ತಿ ಬಾಂಡ್ ಬರೆಸಿಕೊಳ್ಳಲಾಗಿತ್ತು. ಈ ಬಾರಿಯೂ ಅದೇ ರೀತಿ ಬರೆಯಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

        ಕಡಿಮೆ ಮತದಾನವಾಗಿರುವ ಅಂದರೇ ಶೇ.10 ಅಥವಾ ಶೇ.15ರಷ್ಟು ಮತದಾನವಾಗಿರುವ ಕಡೆ ಪರಿಶೀಲಿಸಿ;ನೈಜ ಸತ್ಯ ಕಂಡುಹಿಡಿದು ಕ್ರಮವಹಿಸಿ ಎಂದು ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಅವರು ಹೇಳಿದರು. 

         ಅನುಮತಿ ನೀಡುವಲ್ಲಿ ಸತಾಯಿಸದಿರಿ: ಚುನಾವಣಾ ಸಂದರ್ಭದಲ್ಲಿ ಪ್ರತಿಯೊಂದಕ್ಕು ಅನುಮತಿ ಪಡೆದುಕೊಂಡೇ ಪಕ್ಷಗಳ ಪ್ರತಿನಿಧಿಗಳು ಮುಂದುವರಿಯಬೇಕು. ಆದ ಕಾರಣ ತಮ್ಮೆದುರು ಅನುಮತಿ ಕೋರಿ ಬರುವ ಅರ್ಜಿಗಳನ್ನು ನಿಗದಿಪಡಿಸಿದ ಕಾಲವಧಿಯಲ್ಲಿ ವಿಲೇವಾರಿ ಮಾಡಿ; ಅನಗತ್ಯ ಸತಾಯಿಸದಿರಿ ಎಂದು ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಹೇಳಿದರು.

        ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಸುವಿಧಾದಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದ್ದು, ಯಾವುದೇ ರೀತಿಯ ತಡವಾಗದಂತೆ ಶೀಘ್ರದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಹೇಳಿದರು.
ಕಂಪ್ಲೀಟ್ ಮಾನಿಟರ್ ಸೆಲ್ 24 ಗಂಟೆಗಳ ಕಾಲ ನಿರಂತರವಾಗಿರಲಿ ಮತ್ತು ಸಿ-ವಿಜಲ್ ಆ್ಯಪ್ ಕುರಿತು ಹೆಚ್ಚಿನ ಪ್ರಚಾರ ವಹಿಸಿ ಎಂದರು.
ಮತಗಟ್ಟೆಗಳಿಗೆ ಅಗತ್ಯ ಮೂಲಸೌಕರ್ಯ : ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿರಗುಪ್ಪ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 2161 ಮತಗಟ್ಟೆಗಳಿಗೆ ಕುಡಿಯುವ ನೀರು, ಶೌಚಾಲಯ, ಎಲೆಕ್ಟ್ರೀಕಲ್,ರ್ಯಾಂಪ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕೂಡಲೇ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಡಾ.ವಿ.ರಾಮ್ ಪ್ರಸಾತ್ ಹೇಳಿದರು.

           10373 ಜನರನ್ನು ಮತದಾನ ಪ್ರಕ್ರಿಯೆ ದಿನ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.ವಿಶೇಷ ಚೇತನರಿಗೆ ಮತಗಟ್ಟೆಗೆ ಕರೆತರಲು ವಿಶೇಷ ವಾಹನ: ಜಿಲ್ಲೆಯಾದ್ಯಂತ ಒಟ್ಟಾರೆ 18242 ವಿಶೇಷ ಚೇತನರನ್ನಯ ಗುರುತಿಸಲಾಗಿದ್ದು, ಈ ಪೈಕಿ 17641 ವಿಶೇಷ ಚೇತನರನ್ನು ಮತದಾರರ ಪಟ್ಟಿಯಲ್ಲಿ ಮಾರ್ಕ್ ಮಾಡಲಾಗಿದೆ. ಮತದಾನದ ದಿನ ಮತಗಟ್ಟೆಗೆ ಕರೆದುಕೊಂಡು ಬರಲು 322 ವಿಶೇಷ ವಾಹನದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸ್ವೀಪ್ ಸಮಿತಿ ಹಾಗೂ ಎಂಸಿಸಿ ನೋಡಲ್ ಅಧಿಕಾರಿಗಳಾಗಿರುವ ಜಿಪಂ ಸಿಇಒ ಕೆ.ನಿತೀಶ್ ಅವರು ತಿಳಿಸಿದರು.

           ವಿಶೇಷ ಚೇತನರಿಗೆ ಅನುಕೂಲವಾಗಲು ತ್ರಿಸೈಕಲ್ ವ್ಯವಸ್ಥೆ, ಬೂತಗನ್ನಡಿ, ರ್ಯಾಂಪ್ ಹಾಗೂ ಪ್ರತಿ ಮತಗಟ್ಟೆಗೆ ಒಬ್ಬರು ಸಹಾಯಕರಂತೆ 2151 ಜನ ಸಹಾಯಕರನ್ನು ನೇಮಿಸಲು ಕ್ರಮವಹಿಸಲಾಗಿದೆ ಎಂದು ಅವರು ವಿವರಿಸಿದರು.ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ಕಡಿಮೆ ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಗೆ ಮಾಡುವ ದೃಷ್ಟಿಯಿಂದ ಒಟ್ಟಾರೆ 17 ಪಿಂಕ್/ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಮತಗಟ್ಟೆಗಳನ್ನು ಈಗಾಗಲೇ ಗುರುತಿಸಲಾಗಿದೆ ಎಂದರು.

            ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು 223 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ದಿನ 91 ಇವಿಎಂ ಮತ್ತು ವಿವಿಪ್ಯಾಟ್‍ಗಳ ಮೂಲಕ ಜಿಲ್ಲಾ,ತಾಲೂಕು ಹಾಗೂ ಮತಗಟ್ಟೆ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾ.15ರೊಳೆ ಎಲ್ಲ ಮತಗಟ್ಟೆ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.ಐಜಿಪಿ ನಂಜುಂಡಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಸೇರಿದಂತೆ ಎಆರ್‍ಒಗಳು, ವಿವಿಧ ಸಮಿತಿ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link