ಚೆಕ್‍ಪೋಸ್ಟ್ ಹಾಗೂ ಅಕ್ರಮಗಳ ಮೇಲೆ ನಿಗಾಕ್ಕೆ ಬಿಗಿ ಕ್ರಮ

ಹಾವೇರಿ

        ಮೊದಲ ಹಂತದ ಚುನಾವಣೆ ರಾಜ್ಯದಲ್ಲಿ ಇದೇ ಎಪ್ರಿಲ್ 18 ರಂದು ಮುಗಿಯಲಿದ್ದು, ಎರಡನೇ ಹಂತದಲ್ಲಿ ನಡೆಯುವ ಕ್ಷೇತ್ರಗಳಲ್ಲಿ ಚುನಾವಣೆಯ ಚಟುವಟಿಕೆಗಳು ಬಿರಿಸುಗೊಳ್ಳುವ ಸಾಧ್ಯತೆ ಇದೆ. ಪ್ರಚಾರ ಸಭೆಗಳು, ಸ್ಟಾರ್ ಕ್ಯಾಂಪನ್ ಓಡಾಟದ ಜೊತೆಗೆ ನೀತಿ ಸಂಹಿತೆ ಉಲ್ಲಂಘನೆ ಚಟುವಟಿಕೆಗಳು ಹೆಚ್ಚಾಗುವ ಸಂಭವ ವಿರುವದರಿಂದ ಇಂತಹ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.

       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಚುನಾವಣಾ ವೀಕ್ಷಕರೊಂದಿಗಿನ ಕಣದಲ್ಲಿರುವ ಅಭ್ಯರ್ಥಿಗಳ ಕುಂದುಕೊರತೆಯ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

      ಸೆಕ್ಟರ್ ಆಫೀಸರ್, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ಟೀಮ್‍ಗಳ ಕಾರ್ಯಗಳನ್ನು ಚುರುಕುಗೊಳಿಸಲು ಸೂಚಿಸಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಹಾಗೂ ಅರೆಮಿಲಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಮೊದಲ ಹಂತದ ಚುನಾವಣೆ ಮುಗಿದ ತಕ್ಷಣ ಹೆಚ್ಚಿನ ಪೊಲೀಸ್ ಹಾಗೂ ಅರೆಮಿಲಟರಿ ಪೋರ್ಸ್ ಜಿಲ್ಲೆಗೆ ಆಗಮಿಸಲಿದೆ ಎಂದು ತಿಳಿಸಿದರು.

       ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಸಭೆ-ಸಮಾರಂಭ, ಧ್ವನಿವರ್ಧಕ ಬಳಕೆ ಅಥವಾ ವಾಹನ ಅನುಮತಿಗೆ ಆಯೋಗದ ಮಾರ್ಗಸೂಚಿಯಂತೆ ಅನುಮತಿ ಪಡೆಯಬೇಕು. ಅನುಮತಿಗೆ ಯಾವುದೇ ತೊಡಕಿದ್ದರೆ ಅಥವಾ ಪಡೆದ ನಂತರ ಕ್ಷೇತ್ರ ಮಟ್ಟದಲ್ಲಿ ಯಾವುದೇ ಸಮಸ್ಯೆಯಾದಲ್ಲಿ ಅಥವಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ತಕರಾರಿದ್ದರೆ ಸಹಾಯವಾಣಿಗೆ ಕರೆಮಾಡಿ ದೂರು ಸಲ್ಲಿಸಬಹುದು ಎಂದು ಹೇಳಿದರು.

        ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಸಭೆ-ಸಮಾರಂಭಗಳನ್ನು ನಡೆಸುವಹಾಗಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಭೋಜನ ವ್ಯವಸ್ಥೆ ಸಹ ಮಾಡುವಹಾಗಿಲ್ಲ. ಈ ಕುರಿತಂತೆ ಯಾವುದೇ ದೂರುಗಳಿದ್ದರೂ ಸಲ್ಲಿಸಬಹುದು ಎಂದು ತಿಳಿಸಿದರು.

        ಮತದಾನಕ್ಕೆ ಒಪ್ಪಿಗೆ: ಆಣೂರ ಕೆರೆಗೆ ನೀರು ತುಂಬಿಸದ ಹೊರತು ಮತದಾನ ಮಾಡುವುದಿಲ್ಲ ಎಂಬ ಷರತ್ತನ್ನು ಗ್ರಾಮಸ್ಥರು ಸಡಿಲಿಸಿದ್ದು ಮತದಾನ ಮಾಡುವುದಾಗಿ ಕೇಂದ್ರ ವೀಕ್ಷಕರ ಮನವೊಲಿಗೆ ಸ್ಪಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಕೇಂದ್ರ ಸಾಮಾನ್ಯ ವೀಕ್ಷಕರಾದ ಡಾ.ಅಖ್ತರ್ ರಿಯಾಜ್ ಅವರು ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಸಭೆಯಲ್ಲಿ ಉಪಸ್ಥಿತರಿದ್ದ ಪ್ರತಿನಿಧಿಗಳನ್ನು ಉದ್ದೇಶಿಸಿ ಚುನಾವಣೆಗೆ ಸಂಬಂಧಿಸಿದಂತೆ ನಿಮ್ಮ ಯಾವುದೇ ಕುಂದುಕೊರತೆ ಹಾಗೂ ದೂರುಗಳಿದ್ದರೆ ಸೂಕ್ತ ದಾಖಲೆಗಳೊಂದಿಗೆ ಲಿಖಿತವಾಗಿ ಸಲ್ಲಿಸಿ. ನಮ್ಮ ದೂರವಾಣಿಗಳಿಗೆ ಕರೆಮಾಡಿ ಅಥವಾ ಖುದ್ದಾಗಿ ಭೇಟಿಮಾಡಿ ಸದಾ ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

          ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಮತದಾರರಿಗೆ ಆಮಿಷ, ಚುನಾವಣಾ ಅಕ್ರಮಗಳ ಕುರಿತಂತೆ ಫೋಟೋ, ವಿಡಿಯೋ ಸೇರಿದಂತೆ ಸಾಕ್ಷ್ಯಗಳ ಮೂಲಕ ದೂರು ನೀಡಿದರೆ ತಪ್ಪಿಸ್ತರ ವಿರುದ್ಧ ಸೂಕ್ತಕ್ರಮಕೈಗೊಳ್ಳಲಾಗುದು ಹಾಗೂ ಪ್ರತಿಸ್ಪರ್ಧಿಗಳು ನೀತಿ ಸಂಹಿತೆ ಉಲ್ಲಂಘಿಸಿ ಪ್ರಚಾರ ಕೈಗೊಂಡರೆ ದೂರು ನೀಡಿ. ಆದರೆ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿ ಎಂದು ತಿಳಿಸಿದರು.

         ಈಗಾಗಲೇ ಸಖಿ ಮತಗಟ್ಟೆ, ಮಾದರಿ ಮತಗಟ್ಟೆ, ಕ್ರಿಟಿಕಲ್ ಮತಗಟ್ಟೆ, ವಿಶೇಷಚೇತನರ ಮತಗಟ್ಟೆ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಶೇ.60 ರಷ್ಟು ಮತಗಟ್ಟೆಗಳಿಗೆ ನಾನು ಭೇಟಿ ನೀಡಿರುವೆ. ಮತಗಟ್ಟೆಗಳ ಸಿದ್ಧತೆ ಕುರಿತಂತೆ ತೃಪ್ತಿ ಇದೆ ಎಂದು ತಿಳಿಸಿದರು.
ಪೊಲೀಸ್ ವೀಕ್ಷಕರಾದ ಸಿದ್ಧಾರ್ಥ ನಾರವನೆ ಅವರು ಮಾತನಾಡಿ, ಚುನಾವಣಾ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳ ಪ್ರಚಾರ ವಾಹನಗಳ ಅನುಮತಿ ಹಾಗೂ ಧ್ವನಿವರ್ಧಕಗಳ ಅನುಮತಿ ನೀಡುವಲ್ಲಿ ಹಾಗೂ ಭದ್ರತೆ ಕುರಿತಂತೆ ಯಾವುದೇ ತೊಂದರೆಗಳಿದ್ದರೆ ನೇರವಾಗಿ ನನಗೆ ಸಂಪರ್ಕಿಸಿ ಎಂದು ತಿಳಿಸಿದರು.

        ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರು ಮಾತನಾಡಿ, ಅಂದಂದಿನ ಖರ್ಚು ವೆಚ್ಚಗಳನ್ನು ಆ ದಿನವೇ ಶ್ಯಾಡೋ ರಿಜಿಸ್ಟರ್‍ನಲ್ಲಿ ಬರೆಯಬೇಕು. ಲೆಕ್ಕಪತ್ರ ಸಲ್ಲಿಸಲು ವೀಕ್ಷಕರು ಕರೆದಾಗ ಪಾರದರ್ಶಕವಾಗಿ ವೆಚ್ಚದ ವಿವರಗಳನ್ನು ಹಾಗೂ ವೆಚ್ಚಕ್ಕೆ ಸಂಬಂಧಿಸಿದ ವೋಚರ್‍ಗಳನ್ನು ಹಾಜರಪಡಿಸಬೇಕು. ಯಾವುದೇ ಸಂದರ್ಭದಲ್ಲೂ ಅಂದಾಜು ವೆಚ್ಚವನ್ನು ಹಾಕುವಂತಿಲ್ಲ. ಅಂದಂದಿನ ಲೆಕ್ಕವನ್ನು ವಾಸ್ತವವಾಗಿ ಖರ್ಚಾದ ವಿವರಗಳನ್ನು ನೀಡಬೇಕು.

      ಈ ಕುರಿತಂತೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಪಾಲಿಸಬೇಕು ಎಂದು ಹೇಳಿದರು.ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಪರ ಭಾಗವಹಿಸದ ಪ್ರತಿನಿಧಿಗಳು ಮಾತನಾಡಿ, ಏಕಗವಾಕ್ಷಿ ಪದ್ಧತಿಯಲ್ಲಿ ಕ್ಷೇತ್ರವಾರು ಪ್ರಚಾರಮಾಡಲು ವಾಹನಗಳ ಅನುಮತಿ ನೀಡಬೇಕು. ಪ್ರಚಾರ ವಾಹನಕ್ಕೆ ಅನುಮತಿಪಡೆದಾಗ ಚೆಕ್‍ಪೋಸ್ಟ್‍ನಲ್ಲಿ ಕಾರ್ಯನಿರ್ವಹಿಸುವವರಿಗೆ ಯಾವುದೇ ತಡೆಮಾಡದಂತೆ ವಾಹನ ಚಲಿಸಲು ಅವಕಾಶ ಮಾಡಿಕೊಡಲು ಸೂಚನೆ ನೀಡಬೇಕು.

        ಎಲ್.ಇ.ಡಿ. ಸೇರಿದಂತೆ ಪ್ರಚಾರಕ್ಕಾಗಿ ಬಳಸುವ ವಾಹನ ಹಾಗೂ ಎಲ್.ಇ.ಡಿ. ಪರದೆಗೆ ಪ್ರತಿದಿನ ತಗಲುವ ವೆಚ್ಚ ಮಾತ್ರ ಪರಿಗಣಿಸಿ ವೆಚ್ಚಕ್ಕೆ ದಾಖಲಿಸಬೇಕು ಎಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ವೆಚ್ಚ ಸಹಾಯಕ ವೀಕ್ಷಕರಾದ ಧರಣಿ ಹಾಗೂ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link