ಶಿರಾ
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಶಿರಾದಡು ಸಮೀಪದ ಚಿನ್ನೇನಹಳ್ಳಿ ಗ್ರಾಮದ ಛಲವಾದಿ ಜಗದ್ಗುರು ಪೀಠದಲ್ಲಿ ಆ.26 ರಂದು ಭಕ್ತಿ ಸಂಗಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಛಲವಾದಿ ಜಗದ್ಗುರು ಪೀಠದ ಅಧ್ಯಕ್ಷ ಶ್ರೀ ಬಸವಲಿಂಗಮೂರ್ತಿ ಶರಣರು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಛಲವಾದಿ ಜಗದ್ಗುರು ಪೀಠದಲ್ಲಿ ನಡೆಯುವ ಭಕ್ತಿ ಸಂಗಮ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟನೆ ಮಾಡುವರು. ಹೊಸದುರ್ಗ ಕುಂಚಿಟಿಗರ ಮಹಾ ಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿಗಳು, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್‍ಸ್ವಾಮೀಜಿ, ಐಮಂಗಲದ ಶ್ರೀ ಹರಳಯ್ಯಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು ಎಂದು ಶ್ರೀ ಬಸವಗುರುಲಿಂಗಮೂರ್ತಿ ಶರಣರು ತಿಳಿಸಿದರು.
ನಿವೃತ್ತ ಐ.ಎ.ಎಸ್. ಅಧಿಕಾರಿ ಕೆ.ಶಿವರಾಂ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಿ.ಸತ್ಯನಾರಾಯಣ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್ ಸೇರಿದಂತೆ ಅನೇಕ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸ್ವಾಮೀಜಿ ತಿಳಿಸಿದರು.
ಛಲವಾದಿ ಜಗದ್ಗುರುಪೀಠವು ಕೇವಲ ಒಂದು ಸಮಾಜಕ್ಕೆ ಸೀಮಿತವಾದುದಲ್ಲ. ಹಿಂದುಳಿದ, ದಲಿತರೂ ಸೇರಿದಂತೆ ಎಲ್ಲಾ ಜಾತಿ ಮತಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶೈಕ್ಷಣಿಕ ಸಂಸ್ಥೆಗಳನ್ನೂ ಆರಂಭಿಸುವುದರೊಂದಿಗೆ ಪ್ರತಿ ಭಾನುವಾರದಂದು ಭಕ್ತಿ ಸಂಗಮ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಛಲವಾದಿ ಮಹಾಸಭಾದ ತಾ.ಅಧ್ಯಕ್ಷ ಆದಲೂರು ಜೈರಾಮ್, ಜಿಲ್ಲಾ ಸಂಚಾಲಕ ದಾಸಪ್ಪ, ತಾ.ಗೌ.ಅಧ್ಯಕ್ಷ ನರಸಪ್ಪ, ಕಾರ್ಯದರ್ಶಿ ಬಂದಕುಂಟೆ ತಿಪ್ಪೇಸ್ವಾಮಿ, ಯಲಪೇನಹಳ್ಳಿ ಜೈರಾಮ್, ಸುರೇಶ್, ರವಿ ಮುಂತಾದವರು ಹಾಜರಿದ್ದರು.
