ಟೋಕಿಯೊ:
ಭಾರತದ ಏಲ್ ಶಟ್ಲ್ ಪಟುಗಳಾದ ಪಿವಿ ಸಿಂಧೂ, ಕಿಡಂಬಿ ಶ್ರೀಕಾಂತ್ ಮತ್ತು ಎಚ್ಎಸ್ ಪ್ರಣೋಯ್, ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಹೋರಾಟದಲ್ಲಿ ಸ್ಥಳೀಯ ಯುವ ಆಟಗಾರ್ತಿ ಸಯಕ ತಕಹಾಶಿ ಅವರಿಂದ ನಿಕಟ ಪೈಪೋಟಿ ಎದುರಿಸಿದ ಸಿಂಧೂ, ಕೊನೆಗೂ 53 ನಿಮಿಷಗಳ ವರೆಗೂ ಸಾಗಿದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 21-17, 7-21, 21-13ರ ಅಂತರದ ಗೆಲುವು ದಾಖಲಿಸಿದರು.ಸಿಂಧೂ ಮುಂದಿನ ಹೋರಾಟದಲ್ಲಿ ಚೀನಾದ ಫಾಂಗ್ಜಿ ಗಾವೊ ಸವಾಲನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು 21-18, 21-17ರ ಅಂತರದಲ್ಲಿ ಮಣಿಸಿದ ಪ್ರಣೋಯ್ ಮುನ್ನಡೆದರು.ಇನ್ನೊಂದೆಡೆ ಕಿಡಂಬಿ ಶ್ರೀಕಾಂತ್ ಅವರು ಚೀನಾದ ಯೂಕ್ಸಿಯಾಂಗ್ ಹ್ಯೂಂಗ್ ವಿರುದ್ಧ 21-13, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಮುಂದಿನ ಸುತ್ತಿನ ಹೋರಾಟದಲ್ಲಿ ಪ್ರಣೋಯ್ ಅವರು ಇಂಡೋನೇಷ್ಯಾದ ಆಂಥನಿ ಸಿನಿಸುಕಾ ಮತ್ತು ಶ್ರೀಕಾಂತ್ ಅವರು ಹಾಂಕಾಂಗ್ನ ವಿನ್ಸೆಂಟ್ ವಾಂಗ್ ವಿಂಗ್ ಕೀ ಸವಾಲನ್ನು ಎದುರಿಸಲಿದ್ದಾರೆ
