ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ತನ್ನ ಎರಡೂ ಲೋಕಸಭಾ ಸ್ಥಾನಗಳನ್ನು ಮೂರನೇ ಅವಧಿಗೆ ಉಳಿಸಿಕೊಂಡಿದ್ದರೂ, ಅದರ ಮತ ಹಂಚಿಕೆ ಪ್ರಮಾಣ ಶೇ 5 ರಿಂದ 10 ರಷ್ಟು ಕುಸಿದಿದೆ. ಆದರೆ, ಎರಡೂ ಸ್ಥಾನಗಳನ್ನು ಕಳೆದುಕೊಂಡಿದ್ದರೂ ಕಾಂಗ್ರೆಸ್ ಮತ ಬ್ಯಾಂಕ್ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಕಣಿವೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರೂ, ಈ ಬಾರಿ ಒಂದು ಸ್ಥಾನವನ್ನು ಕಳೆದುಕೊಂಡಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಮತ ಹಂಚಿಕೆ ಪ್ರಮಾಣ ಕಡಿಮೆಯಾಗಿದೆ. ಜೈಲು ಪಾಲಾಗಿರುವ ಮಾಜಿ ಶಾಸಕ ಎರ್ ರಶೀದ್ ಅವರು ಬಾರಾಮುಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಅವರ ಮತಗಳಿಕೆ ದ್ವಿಗುಣಗೊಂಡಿದೆ.
ಐದು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು ಜಮ್ಮು ಮತ್ತು ಉಧಮ್‌ಪುರ ಎರಡೂ ಸ್ಥಾನಗಳನ್ನು ಉಳಿಸಿಕೊಂಡರೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಶ್ರೀನಗರ ಮತ್ತು ಅನಂತನಾಗ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಪಕ್ಷದ ಉಪಾಧ್ಯಕ್ಷ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಜೈಲಿನಲ್ಲಿರುವ ಮಾಜಿ ಶಾಸಕ ಎರ್ ರಶೀದ್ ಎದುರು ಸೋಲು ಕಂಡಿದ್ದಾರೆ.
ಸತತ ಮೂರನೇ ಅವಧಿಗೆ ಉಧಂಪುರ ಕ್ಷೇತ್ರವನ್ನು ಉಳಿಸಿಕೊಂಡಿರುವ ಡಾ. ಜಿತೇಂದ್ರ ಸಿಂಗ್ ಅವರು ಶೇ 51.28 ರಷ್ಟು ಮತಗಳನ್ನು ಗಳಿಸುವ ಮೂಲಕ 5,71,076 ಮತಗಳನ್ನು ಗಳಿಸಿದ್ದಾರೆ. ಅವರ ಮತ ಹಂಚಿಕೆ ಶೇ 10ರಷ್ಟು ಕುಸಿದಿದೆ. 2019ರ ಚುನಾವಣೆಯಲ್ಲಿ 7,24,311 ಮತಗಳನ್ನು ಪಡೆದಿದ್ದ ಸಿಂಗ್ ಅವರು ಶೇ 61.24 ರಷ್ಟು ಮತಗಳನ್ನು ಪಡೆದಿದ್ದರು.
ಅವರ ಎದುರಾಳಿ ಕಾಂಗ್ರೆಸ್‌ನ ಲಾಲ್ ಸಿಂಗ್ 4,46,703 ಮತಗಳನ್ನು ಪಡೆದು ಶೇ 40.11 ರಷ್ಟು ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮತಬ್ಯಾಂಕ್ ಸುಮಾರು ಶೇ 10 ರಷ್ಟು ಹೆಚ್ಚಳ ಕಂಡಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ಅವರು ಶೇ 31.04 ರಷ್ಟು ಮತಗಳನ್ನು ಪಡೆದಿದ್ದರು.
ಬಿಜೆಪಿಯ ಜುಗಲ್ ಕಿಶೋರ್ ಮೂರನೇ ಅವಧಿಗೆ ಗೆದ್ದ ಜಮ್ಮು ಕ್ಷೇತ್ರದಲ್ಲಿ, ಪಕ್ಷದ ಮತ ಬ್ಯಾಂಕ್ ಸುಮಾರು ಶೇ 5 ರಷ್ಟು ಕುಸಿದಿದ್ದು, ಈ ಬಾರಿ ಶೇ 52.8 ರಷ್ಟು ಮತ ಪಡೆದಿದ್ದಾರೆ. 2019ರ ಚುನಾವಣೆಯಲ್ಲಿ ಜುಗಲ್ ಶೇ 57.81 ರಷ್ಟು ಮತ ಹಂಚಿಕೆಯನ್ನು ಪಡೆದಿದ್ದರು.