ಜಯಂತಿಗಳ ಸರಳ ಆಚರಣೆ

ದಾವಣಗೆರೆ

      ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಮತ್ತು ಮಹಾಯೋಗಿ ವೇಮನ ಜಯಂತಿಗಳನ್ನು ಸರಳವಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ, ಅಂಬಿಗರ ಚೌಡಯ್ಯ ಮತ್ತು ಮಹಾಯೋಗಿ ವೇಮನ ಜಯಂತಿಗಳನ್ನು ಜಿಲ್ಲಾ ಮಟ್ಟದಲ್ಲಿ ಆಚರಿಸುವ ಕುರಿತು ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಸಂಭವಿಸಿದ ಅತೀವೃಷ್ಠಿ ಮತ್ತು ಅನಾವೃಷ್ಠಿಗಳ ಹಿನ್ನೆಲೆಯಲ್ಲಿ ಈ ಜಯಂತಿಗಳ ಆಚರಣೆಗಳಿಗೆ ಬಂದ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

     ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿಗಳು, ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಯಂತಿಗಳನ್ನು ಸರಳವಾಗಿ ಆಚರಿಸಿ, ಜಯಂತಿಯ ಆಚರಣೆಗೆಂದು ಸರ್ಕಾರದಿಂದ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಇದರಂತೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಮತ್ತು ಮಹಾಯೋಗಿ ವೇಮನ ಜಯಂತಿಗಳನ್ನು ಸರಳವಾಗಿ ಆಚರಿಸಲು ಸಮಾಜದ ಮುಖಂಡರು ಸಮ್ಮತಿ ಸೂಚಿಸಿದರೆ ಜಯಂತಿಗಳ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು.

     ಸಭೆಯಲ್ಲಿ ಸಮಾಜದ ಮುಖಂಡರಾದ ಮಾಗಾನಳ್ಳಿ ಮಂಜುನಾಥ್ ಮಾತನಾಡಿ, ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲು ತಮ್ಮ ಮತ್ತು ಸಮಾಜದ ಸಮ್ಮತಿ ಇದೆ. ನಗರದ ಆಶ್ರಯ ಆಸ್ಪತ್ರೆಯ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಬಿಗರ ಚೌಡಯ್ಯ ಹಾಸ್ಟೆಲ್‍ನಲ್ಲಿ ಆಚರಿಸುತ್ತೇವೆ ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಮನವಿ ಮಾಡಿದರು.

     ಭೋವಿ ಸಮಾಜದ ಮುಖಂಡ ಎಚ್. ಜಯಣ್ಣ ಮಾತನಾಡಿ, ಜಿಲ್ಲಾ ಮಟ್ಟದಂತೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಜಯಂತಿಗಳನ್ನು ಸರಳವಾಗಿ ಆಚರಿಸಿ ಜಯಂತಿ ಆಚರಣೆಗೆ ಸರ್ಕಾರದಿಂದ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕು ಸಲಹೆ ನೀಡಿದರು.

    ಮಲೇಬೆನ್ನೂರಿನ ಎಮ್.ಎನ್ ಮಂಜುನಾಥ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಯಾವುದೇ ಇಲಾಖೆ ಮತ್ತು ಕಚೇರಿಗಳಲ್ಲಿ ಜಯಂತಿಗಳನ್ನು ಆಚರಿಸುವುದಿಲ್ಲ. ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಸೂಚನೆ ನೀಡಬೇಕೆಂದು ಮನವಿ ಮಾಡಿದರು.

   ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟ ಸೇರಿದಂತೆ ಎಲ್ಲಾ ವಲಯದಲ್ಲೂ ಜಯಂತಿಗಳನ್ನು ಆಚರಿಸಬೇಕು. ಇದು ಸರ್ಕಾರದ ಆದೇಶವಾಗಿದ್ದು ಇದನ್ನು ಪ್ರತಿಯೊಂದು ಇಲಾಖೆಯು ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಜ.14 ರಂದು ಬೆಳಗ್ಗೆ 10 ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಜ.19 ರಂದು ಬೆಳಿಗ್ಗೆ 11.30 ಕ್ಕೆ ಮಹಾಯೋಗಿ ವೇಮನ ಜಯಂತಿಯನ್ನು ನಗರದ ಹೇಮರೆಡ್ಡಿ ಮಲ್ಲಮ್ಮ ಹಾಸ್ಟೆಲ್‍ನಲ್ಲಿ ಹಾಗೂ ಜ.21 ರಂದು ಬೆಳಿಗ್ಗೆ 12 ಗಂಟೆಗೆ ಅಂಬಿಗರ ಚೌಡಯ್ಯ ಜಯಂತಿಯನ್ನು ನಗರದ ಆಶ್ರಯ ಆಸ್ಪತ್ರೆಯ ಪಕ್ಕದ ಅಂಬಿಗರ ಚೌಡಯ್ಯ ಹಾಸ್ಟೆಲ್‍ನಲ್ಲಿ ಆಚರಿಸಲು ಸಭೆ ತೀರ್ಮಾನಿಸಿತು.

   ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ, ಸಮಾಜದ ಮುಖಂಡರಾದ ಮಹೇಂದ್ರ ಹೆಬ್ಬಾರ್, ಬಿ.ಕೆ. ಕೃóಷ್ಣ ಮೂರ್ತಿ, ಸೋಮ್ಲಪುರ ಜಗದೀಶ್, ಕೋಟ್ರೇಶ್, ಹೆಚ್.ಸಿದ್ದರಾಮಪ್ಪ, ವೈ.ಬಸವರಾಜ್, ರವಿ, ಮಹಾಂತಪ್ಪ ಕೆ ಹರಿಹರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap