ಚಳ್ಳಕೆರೆ
ತಾಲ್ಲೂಕಿನಾದ್ಯಂತ ಸಾರ್ವಜನಿಕರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಾ, ಪ್ರಾಚೀನ ಕಾಲದ ದೇವಸ್ಥಾನಗಳ ಪುನಶ್ಚೇತನಕ್ಕಾಗಿ ಆರ್ಥಿಕ ನೆರವು ನೀಡುತ್ತಾ ಬಂದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನದ ಆಭಿವೃದ್ಧಿಯಲ್ಲಿ ವಿಶೇಷ ಕಾಳಜಿಯನ್ನು ವಹಿಸುವ ಈ ಯೋಜನೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಜಾಜೂರು ಗ್ರಾಮದ ಶ್ರೀಕೊದಂಡರಾಮ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗೋಪಾಲರಾವ್ ತಿಳಿಸಿದ್ದಾರೆ.
ಅವರು, ಶುಕ್ರವಾರ ತಾಲ್ಲೂಕಿನ ಜಾಜೂರು ಗ್ರಾಮದ ಶ್ರೀಕೊದಂಡರಾಮಸ್ವಾಮಿ ದೇವಸ್ಥಾನದ ಆವಣದಲ್ಲಿ ನಿರ್ಮಿಸುತ್ತಿರುವ ಅನ್ನಛತ್ರ ನಿರ್ಮಾಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ಮೌಲ್ಯದ ಡಿಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ವಲಯ ಮೇಲ್ವಿಚಾರಕ ಡಿ.ಸೋಮಶೇಖರ್ ಹಸ್ತಾಂತರಿಸಿದ ಸಂದರ್ಭದಲ್ಲಿ ಡಿಡಿಯನ್ನು ಪಡೆದು ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಜಾಜೂರು ವಲಯ ಮೇಲ್ವಿಚಾರಕ ಡಿ.ಸೋಮಶೇಖರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಜಾಜೂರು ವಲಯ ಆಯ್ದ ಪುರಾತನ ದೇವಸ್ಥಾನಗಳ ಅಭಿವೃದ್ಧಿಗೆ ನಮ್ಮ ಯೋಜನೆ ಉತ್ತಮ ಆರ್ಥಿಕ ನೆರವು ನೀಡುತ್ತಾ ಬಂದಿದೆ. ದೇವಸ್ಥಾನದ ನಿರ್ಮಾಣ ಕಾರ್ಯದ ಕಟ್ಟಡವೂ ಸೇರಿದಂತೆ ಎಲ್ಲಾ ಕಾಮಗಾರಿಗಳು ಅತ್ಯಂತ ಪಾರದರ್ಶಕವಾಗಿ ನಡೆಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಮನೋಜ್‍ಕುಮಾರ್, ಮಂಡಳಿಯ ಸದಸ್ಯ ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್, ನರಸಮ್ಮ, ಸುನಂದಮ್ಮ, ಗ್ರಾಮದ ಮುಖಂಡರಾದ ಸರೋಜಮ್ಮ, ವೀರಮ್ಮ, ಶಾಂತಮ್ಮ ಮುಂತಾದವರು ಉಪಸ್ಥಿತರಿದ್ದರು








