ಹಿರಿಯೂರು:
ರಾಜ್ಯದ ರೈತರು ಹಲವಾರು ಸಮಸ್ಯೆಗಳಿಂದ ಸರಣಿ ಆತ್ಮಹತ್ಯೆ ಜಾಡು ಹಿಡಿದಿರುವ ಈ ಸಮಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಕೃಷಿ ಕ್ಷೇತ್ರದ ಹಾಗೂ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಕೂಲಂಕುಷ ಅಧ್ಯಯನ ಮತ್ತು ಗಂಭೀರ ಚಿಂತನೆಯ ಮೂಲಕ ಕೃಷಿ ಕ್ಷೇತ್ರಕ್ಕೆ ಮರು ಚೈತನ್ಯ ನೀಡಬೇಕಾಗಿದೆ ಎಂದು ತೋಟಗಾರಿಕೆ ಕಾಲೇಜಿನ ಕೃಷಿ ವಿಜ್ಞಾನಿ ಡಾ.ಬಿ.ಮಹಂತೇಶ್ ಹೇಳಿದ್ದಾರೆ.
ರಾಜ್ಯದಾದ್ಯಂತ ರೈತರ ಆತ್ಮಹತ್ಯೆ ಮುಂದುವರೆದಿರುವ ಈ ಸಂದರ್ಭದಲ್ಲಿ ಅವರು ಆತ್ಮಹತ್ಯೆ ತಡೆಯಲು ಕೆಲವು ಸಲಹೆಗಳನ್ನು ಹಾಗೂ ರೈತರಿಗೆ ಆತ್ಮಸ್ಥೈರ್ಯ ಸಂದೇಶವನ್ನು ನೀಡಿದ್ದಾರೆ.
ಕೃಷಿ ಕ್ಷೇತ್ರದ ಹಾಗೂ ರೈತರ ಸ್ಥಿತಿ ಬಿಗಡಾಯಿಸಿರುವ ಈಗಿನ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವು ರೈತ ಸಮುದಾಯದಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬಿ, ಮಾನಸಿಕವಾಗಿ ಸದೃಢಗೊಳಿಸಬೇಕಾಗಿದೆ. ಜೊತೆಗೆ ಕೃಷಿಯನ್ನು ಆದ್ಯತೆ ಕ್ಷೇತ್ರವನ್ನಾಗಿ ಪರಿಗಣಿಸಬೇಕು.
ಭದ್ರಾ ಮೇಲ್ದಂಡೆ ಯೋಜನೆಯಂತಹ ಶಾಶ್ವತ ನೀರಾವರಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸಬೇಕು, ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚಿನ ಅನುದಾನ ಮೀಸಲಿಡಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಒಟ್ಟಾರೆ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಚ್ಚಾಶಕ್ತಿಯಿಂದ ಮುಂದಾಗಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮನುಷ್ಯನ ಜೀವ ಅತ್ಯಮೂಲ್ಯ. “ಮಾನವನ ಜೀವನ ದೊಡ್ಡದು, ಕಳೆದುಕೊಳ್ಳಬೇಡ ಎಲೇ ಮಾನವ” ಎಂದು ಹಿರಿಯರು ಹೇಳಿರುವುದನ್ನು ನಾವು ಅರಿಯಬೇಕು. ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಆತ್ಮಹತ್ಯೆಗೆ ಶರಣಾಗುವುದನ್ನು ರೈತರು ನಿಲ್ಲಿಸಬೇಕು. ರೈತ ಸಮುದಾಯವು ಸರ್ಕಾರ ಮತ್ತು ಪ್ರತಿಪಕ್ಷಗಳ ಮಟ್ಟದಲ್ಲಿ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.
ಕೃಷಿ ಎಂದರೆ ಕೇವಲ ವಾಣಿಜ್ಯ ಬೆಳೆಗಳು ಮಾತ್ರವಲ್ಲ. ಕೇವಲ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ಹಣ್ಣು, ಹೂವು, ತರಕಾರಿ ಬೆಳೆಗಳನ್ನು ಬೆಳೆದು ಬದುಕು ಹಸನು ಮಾಡಿಕೊಂಡ ರೈತರ ಯಶೋಗಾಥೆ, ಮತ್ತು ಹಸು, ಎಮ್ಮೆ, ಕೋಳಿ, ಕುರಿ, ಮೊಲ ಇವುಗಳ ಸಾಕಾಣಿಕೆ ಮಾಡುವುದರ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿರುವ ಭೂರಹಿತ ಕೃಷಿ ಕಾರ್ಮಿಕರ ಸಾಧನೆಗಳು ಉಳಿದೆಲ್ಲಾ ರೈತ ಸಮುದಾಯಕ್ಕೆ ದಾರಿದೀಪವಾಗಬೇಕಾಗಿದೆ ಎಂದು ಡಾ. ಬಿ.ಮಹಂತೇಶ್ ಹೇಳಿದ್ದಾರೆ.