ಜಾತಿ ಚೌಕಟ್ಟು ಮೀರಿ ಮಠ ಕಟ್ಟಿದ ಲಿಂ|| ಜಗದ್ಗುರು

ದಾವಣಗೆರೆ:

      ಜಾತಿಯ ಚೌಕಟ್ಟು ಮೀರಿ ಮಠ ಕಟ್ಟುವಲ್ಲಿ ಸಿರಿಗೆರೆಯ ಲಿಂಗೈಕ್ಯ ಜಗದ್ಗುರು ಶಿವಕುಮಾರ ಮಹಾಸ್ವಾಮಿಗಳ ಶ್ರಮ ಅಪಾರವಾಗಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳ 26ನೇ ಶ್ರದ್ಧಾಂಜಲಿ ದಾಸೋಹಕ್ಕೆ ಅಕ್ಕಿ ಸಮರ್ಪಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ದೇಶಕ್ಕೆ ಸಂವಿಧಾನ ಬರುವ ಮೊದಲೇ ಜಾತ್ಯಾತೀತ ನೆಲೆಗಟ್ಟಿನಲ್ಲಿ, ಜಾತಿಯ ಚೌಕಟ್ಟು ಮೀರಿ ಮಠವನ್ನು ಕಟ್ಟುವಲ್ಲಿ ಶಿವಕುಮಾರ ಮಹಾಸ್ವಾಮಿಗಳ ಶ್ರಮ ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಮೂಡಿಸಿದ ಲಿಂ.ಶ್ರೀಗಳ ಆಶಯದಂತೆ ಈಗಲೂ ಎಲ್ಲಾ ಜಾತಿ ಜನರ ಅಭ್ಯುದಯಕ್ಕಾಗಿ ಶ್ರೀಮಠ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

      ನಮ್ಮ ದೇಶದ ಸಂವಿಧಾನದಲ್ಲಿ ಜಾತ್ಯಾತೀತ ಶಬ್ದ ಉಲ್ಲೇಖವಾಗುವ ಮುನ್ನವೇ, ಮಠದ ಪರಂಪರೆಯಲ್ಲಿ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡಿದ್ದ ಸಿರಿಗೆರೆಯ ಲಿಂಗೈಕ್ಯ ಜಗದ್ಗುರು ಶಿವಕುಮಾರ ಸ್ವಾಮೀಜಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದವರಾಗಿದ್ದು, ಊಹೆಗೂ ನಿಲುಕದಂತೆ ನಾಡಿನಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಎಲ್ಲ ವರ್ಗದ ವಿದ್ಯಾರ್ಥಿಗಳೀಗೆ ಮಠದಲ್ಲಿ ಶಿಕ್ಷಣ ನೀಡಿ, ಅವರಿಗೊಂದು ಭವಿಷ್ಯ ರೂಪಿಸಿಕೊಟ್ಟಿದ್ದಾರೆ ಎಂದರು.

      ಆರ್ಥಿಕವಾಗಿ ಸುಭದ್ರವಲ್ಲದ ಮಠವನ್ನು ಮಾತ್ರವಲ್ಲದೆ, ಮಠದ ಭಕ್ತರನ್ನು ನಾನಾ ಕ್ಷೇತ್ರಗಳಲ್ಲಿ ಬೆಳೆಸಿದ ಶಿವಕುಮಾರ ಸ್ವಾಮಿಗಳು. ಅವರವರ ಸಾಮಥ್ರ್ಯಕ್ಕೆ ತಕ್ಕಂತಹ ಕ್ಷೇತ್ರಗಳಲ್ಲಿ ಎಲ್ಲರನ್ನೂ ತೊಡಗಿಸಿದರು. ಕಾಸು ಮತ್ತು ಕಾಲಕ್ಕೆ ಮಹತ್ವ ನೀಡುವ ಮೂಲಕ ಸಮಾಜವನ್ನು ಕಟ್ಟಿದ ಅದ್ಭುತ ಶಕ್ತಿಯುಳ್ಳ ಶಿವಕುಮಾರ ಸ್ವಾಮಿಗಳನ್ನು ನೋಡಿದ್ದವರೇ ಪುಣ್ಯವಂತರಾಗಿದ್ದಾರೆ ಎಂದು ನುಡಿದರು.

      ಹೊನ್ನಾಳಿಯ ಬಸವನಗೌಡ್ರು ಅಕ್ಕಿ ಸಮರ್ಪಣೆ ಕಾರ್ಯಕ್ರಮಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅಂದಿನಿಂದ ನಡೆದುಕೊಂಡು ಬಂದಿರುವ ಅಕ್ಕಿ ಸಮರ್ಪಣೆಯಲ್ಲಿ ಮಠದ ಭಕ್ತರು ಸ್ವಯಂಪ್ರೇರಿತರಾಗಿ ಧಾನ್ಯ, ದೇಣಿಗೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಎಂದೆಂದಿಗೂ ನಮ್ಮ ಮಠ ಶ್ರೀಮಂತವಾಗಿದ್ದು, ಮಠದ ಶಿಷ್ಯರು ಭಕ್ತಿ, ಶ್ರದ್ಧೆಯಲ್ಲಿ ಬಡತನ ತೋರಿದವರಲ್ಲ. ಬೇರೆ ಮಠಾಧೀಶರು ಅಸೂಯೆ ಪಡುವ ರೀತಿಯಲ್ಲಿ ದಾನ ಕೊಡುವುದರಲ್ಲಿ ನಮ್ಮ ಶಿಷ್ಯರು ಎತ್ತಿದ ಕೈ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಹಿಂದಿನ ವರ್ಷ ಸಿರಿಗೆರೆಯಲ್ಲಿ ನಡೆದ ಶಿವಕುಮಾರ ಸ್ವಾಮಿಗಳ ಶ್ರದ್ಧಾಂಜಲಿ ದಾಸೋಹದಲ್ಲಿ ಸ್ವಲ್ಪ ಗೊಂದಲವಾಗಿತ್ತು. ಈ ಬಾರಿ ಹಾಗಾಗದಂತೆ 42 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಭವನದ ಕೆಳಮಹಡಿಯಲ್ಲಿ ದಾಸೋಹಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸೆ.23ರಂದು ಹಿರಿಯ ವಿದ್ಯಾರ್ಥಿಗಳ ಸಮಾವೇಶ ಏರ್ಪಡಿಸಲಾಗಿದೆ. ಸೆ.24ರಂದು ಹಿರಿಯ ಜಗದ್ಗುರುಗಳ ಶ್ರದ್ಧಾಂಜಲಿ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮದಲ್ಲಿ ಸರ್ವ ಭಕ್ತಾದಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.

ಕನಸಿನ ಗಂಟಾದ ಫಸಲ್ ಬಿಮಾ:

       ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಪ್ರಮುಖ ಯೋಜನೆಗಳಿಗೆ ಚಾಲನೆ ದೊರೆತಿದೆ. ತಲಾ 250 ಕೋಟಿ ರೂ. ವೆಚ್ಚದ ಭರಮಸಾಗರ-ಸಿರಿಗೆರೆ ಏತ ನೀರಾವರಿ ಯೋಜನೆ ಹಾಗೂ ಜಗಳೂರಿನ 46 ಕೆರೆಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಗಳು ಮಂಜೂರಾಗಿವೆ. ಪ್ರಸ್ತುತ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಈ ಬಾರಿ ಮಳೆ ಕೈ ಕೊಟ್ಟಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಬೆಳೆ ನಷ್ಟ ಪರಿಹಾರ ಸಧ್ಯಕ್ಕೆ ಸುಸೂತ್ರವಾಗಿದ್ದು, ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ರೈತರ ಪಾಲಿಗೆ ಕನಸಿನ ಗಂಟಾಗಿ ಮಾರ್ಪಟ್ಟಿದೆ.

       ಈ ಯೋಜನೆಯಿಂದ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದೆಯೇ ಹೊರತು ರೈತರಿಗೆ ಅನುಕೂಲವಾಗುತ್ತಿಲ್ಲ. ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಂದೆಡೆ ಸೇರಿಸಿ, ಯೋಜನೆಯ ಲೋಪದೋಷ ಮನವರಿಕೆ ಮಾಡಿಕೊಡುವ ಉದ್ದೇಶವಿದೆ ಎಂದು ಶ್ರೀಗಳು ಇದೇ ವೇಳೆಯಲ್ಲಿ ಮಾಹಿತಿ ನೀಡಿದರು.

       ಈ ಸಂದರ್ಭದಲ್ಲಿ ತರಳಬಾಳು ಬಡಾವಣೆಯ ಭಕ್ತರು ಶ್ರದ್ಧಾಂಜಲಿ ದಾಸೋಹಕ್ಕೆ ದೇಣಿಗೆಯಾಗಿ 1,09,009 ರೂ.ಗಳನ್ನು ದೇಣಿಗೆಯಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಮರ್ಪಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್.ಪರಮೇಶ್ವರ ಗೌಡ್ರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ.ಸದಾಶಿವಪ್ಪ ಶ್ಯಾಗಲೆ ಮತ್ತಿತರರು ಉಪಸ್ಥಿತರಿದ್ದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap