ರಸ್ತೆ ಅಪಘಾತಕ್ಕೀಡಾದವರನ್ನು ರಕ್ಷಿಸಲು ಮುಂದಾಗಬೇಕು: ಟಿ ಜೆ ಉದೇಶ್

ದಾವಣಗೆರೆ 

      ರಸ್ತೆಗಳಲ್ಲಿ ಅಪಘಾತ ಸಂಭವಿಸಿದಾಗ ಮೊದಲು ಅಪಘಾತಕ್ಕೆ ಒಳಗಾದ ವ್ಯಕ್ತಿಯ ಜೀವ ಉಳಿಸುವುದಕ್ಕೆ ಸಹಾಯ ಮಾಡಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಟಿ.ಜೆ ಉದೇಶ್ ಹೇಳಿದರು.

       ಇಂದು ಲೋಕಿಕೆರೆ ಗ್ರಾಮದಲ್ಲಿ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019ರ ಅಂಗವಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರದಲ್ಲಿ ಅವರು ಮಾತನಾಡಿ, ಆಸ್ಪತ್ರೆ ಅಥವಾ ಅಂಬುಲೆನ್ಸ್ ಗೆ ಕರೆ ಮಾಡಿ ಚಿಕಿತ್ಸೆಗೆ ಒಳಪಡಿಸಬೇಕು. ಪೊಲೀಸರು ರಕ್ಷಣೆ ಮಾಡಿದವರನ್ನು ಸಾಕ್ಷಿ ಮಾಡುತ್ತಾರೆಂಬ ಭಯ ಬೇಡ. ಸುಪ್ರೀಂ ಕೋರ್ಟೇ ಅಪಘಾತಕ್ಕಿಡಾದವರ ರಕ್ಷಣೆಗೆ ಮುಂದಾದವರನ್ನು ಸಾಕ್ಷಿಯನ್ನಾಗಿಸಬಾರದೆಂದು ನಿರ್ದೇಶನ ನೀಡಿದೆ ಎಂದರು.

      ಅಪಘಾತವಾದ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಅಪಘಾತಕ್ಕೀಡಾದವರ ಸಹಾಯಕ್ಕೆ ಧಾವಿಸಿದರೆ ಜೀವ ರಕ್ಷಣೆ ಸಾಧ್ಯ. ರಸ್ತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸದೇ ದೇಶದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಬಹುತೇಕ ಅಪಘಾತಗಳು ಬೆಳಗಿನ ಜಾವವೇ ಸಂಭವಿಸುತ್ತಿವೆ. ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿ ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೆ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.

      ಹಳ್ಳಿಯಲ್ಲಿ ಹೆಚ್ಚು ಜನ ಹೆಲ್ಮೆಟ್ ಬಳಸದೆ ವಾಹನ ಚಲಾಯಿಸುತ್ತಾರೆ. ಹೆಲ್ಮೆಟ್ ಬಳಸದೆ ವಾಹನ ಚಾಲನೆ ಮಾಡುವುದು ಅತ್ಯಂತ ಅಪಾಯಕಾರಿ. ಮಾರ್ಕೆಟ್‍ನಲ್ಲಿ ಪ್ರಸ್ತುತ 500 ರಿಂದ 600 ರೂಗಳಲ್ಲಿ ಉತ್ತಮವಾದ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್‍ಗಳು ಲಭ್ಯಯಿವೆ ಅವುಗಳನ್ನು ಬಳಸಿ ತಮ್ಮ ಪ್ರಾಣ ರಕ್ಷಿಸಿಕೊಳ್ಳುವಂತೆ ಹಾಗೂ ಅರ್ಧ ಹೆಲ್ಮೆಟ್‍ನ್ನು ಬಳಸಬಾರದೆಂದು ಸಲಹೆ ನೀಡಿದರು.
ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ಗ್ರಾಮೀಣ ಭಾಗಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್‍ನಿಂದ ಹೆಚ್ಚು ಅಪಘಾತಗಳು ನಡೆದ ಪ್ರಕರಣ ದಾಖಲಾಗುತ್ತಿವೆ. ಕುಡಿದು ವಾಹನ ಚಲಾವಣೆ ಮಾಡುವುದು ಅಪರಾಧವೆಂದರು.

       ಗ್ರಾಮೀಣ ಭಾಗಗಳಲ್ಲಿ ಟ್ರಾಕ್ಟರ್ ಮಾಲೀಕರು ಟ್ರಾಲಿಯ (ಟ್ರೈಲರ್) ಹಿಂಭಾಗ ರೇಡಿಯಂ ಸ್ಟಿಕರ್ಸ್ ಹಾಕಿಸಬೇಕು. ಇದು ನಿಮ್ಮ ವಾಹನದ ಹಿಂದೆ ಚಲಿಸುವವರಿಗೆ ಅನುಕೂಲವಾಗಲಿದೆ ಮತ್ತು ನಿಮ್ಮ ಜೀವಕ್ಕೂ ರಕ್ಷಣೆ ನೀಡಲಿದೆ ಎಂದರು. ಈ ಕಾರ್ಯಕ್ರಮದ ಮೂಲ ಉದ್ದೇಶ ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದಾಗಿದ್ದು, ಪ್ರತಿಯೊಬ್ಬರು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಿ ತಮ್ಮ ಜೀವ ರಕ್ಷಿಸಿಕೊಳ್ಳಿ ಎಂದರು.

        ಡಿವೈಎಸ್‍ಪಿ ಡಾ.ದೇವರಾಜ್ ಮಾತನಾಡಿ, ಅಪಘಾತಗಳು ಸಂಭವಿಸಿದಾಗ ಸುಮ್ಮನೆ ನೋಡಿ ಹೋಗುವುದಕ್ಕಿಂತ ಅಪಗಾತಕ್ಕೆ ಒಳಗಾದ ವ್ಯಕ್ತಿಗಳು ವಾಹನಗಳಲ್ಲಿ ಸಿಕ್ಕಿಕೊಂಡಾಗ ಅವರನ್ನು ಹೊರಗೆ ತೆಗೆಯುವ ಜ್ಞಾನವಿದ್ದರೆ ಮೊದಲು ಹೊರಗೆ ತೆಗೆಯಿರಿ. ಆದಷ್ಟೂ ಬೇಗ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡುಹೋಗಬೇಕು ಇದು ಕೇವಲ ಪೊಲೀಸ್ ಅಥವಾ ವೈದ್ಯರ ಜವಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬ ನಾಗರೀಕನ ಜವಬ್ದಾರಿಯಾಗಿರುತ್ತದೆ.

        ಅಪಘಾತದ ತುರ್ತು ಸಂದರ್ಭದಲ್ಲಿ ಯಾವ ರೀತಿಯ ಕ್ರಮ ವಹಿಸಬೇಕು ಎಂಬುದನ್ನು ತಿಳಿಯುವುದು ಅವಶ್ಯ. ಗ್ರಾಮೀಣ ಪ್ರದೇಶದ ಜನರಲ್ಲಿ ರಸ್ತೆ ಸಂಚಾರ ನಿಯಮಗಳ ಅರಿವು ಇರುವುದಿಲ್ಲ. ನಗರದಲ್ಲಿ ಅಲ್ಲಲ್ಲಿ ಟ್ರಾಫಿಕ್ ಸಿಗ್ನಲ್‍ಗಳು, ಹಂಪ್ಸ್‍ಗಳು, ಸ್ಪೀಡ್ ಲಿಮಿಟ್‍ನಂತಹ ನಿಯಮಗಳಿರುವುದರಿಂದ ವಾಹನಗಳನ್ನು ಸ್ಪೀಡ್ ಆಗಿ ಓಡಿಸುವುದು ಕಡಿಮೆ ಹಾಗೂ ಜೀವ ಕಳೆದುಕೊಳ್ಳುವಂತಹ ಅಪಘಾತಗಳು ಸಂಭವಿಸುವುದು ಕಡಿಮೆ. ಆದರೆ ಹಳ್ಳಿಗಳಲ್ಲೆ ಇಂತಹ ನಿಯಮಗಳಿಲ್ಲದ ಕಾರಣದಿಂದಾಗಿ ವಾಹನಗಳನ್ನು ಸ್ಪೀಡಾಗಿ ಓಡಿಸಿ ಅಪಘಾತಕ್ಕೆ ಈಡಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.

       ನಗರದಲ್ಲಿ ಅರಿವು ಮೂಡಿಸುವುದಕ್ಕಿಂತ ಹಳ್ಳಿ ಪ್ರದೇಶಗಳಲ್ಲಿ ರಸ್ತೆ ಸುರಕ್ಷತೆಯ ಅರಿವು ಕುರಿತು ಹೆಚ್ಚಿನ ಮಟ್ಟದಲ್ಲಿ ಮೂಡಿಸಬೇಕು. ಇದರಿಂದ ಅಪಘಾತಗಳ ಸಂಖ್ಯೆಗಳಲ್ಲಿ ಇಳಿಮುಖವಾಗಬಹುದೆಂದು ಅಭಿಪ್ರಾಯಪಟ್ಟರು.ಲೋಕಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನು.ಎ.ಎಸ್ ಮಾತನಾಡಿ, ರೋಗ ಬರುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ, ಅಪಘಾತವಾದ ಮೇಲೆ ಪರಿತಪಿಸುವುದಕ್ಕಿಂತ ಮುಂಜಾಗ್ರತೆ ವಹಿಸುವುದು ಒಳಿತು. ಅಪಘಾತದಿಂದ ಕೇವಲ ಒಂದು ಕುಟುಂಬಕ್ಕೆ ನಷ್ಟವಾಗದೇ ಇಡೀ ಸಮಾಜಕ್ಕೆ ನಷ್ಟವಾಗಲಿದೆ ಎಂದರು.

        ವಾಹನ ಚಲಾಯಿಸುವಾಗ ಹೆಲ್ಮೆಟ್ ಬಳಸಿದ್ದಲ್ಲಿ ಶೇ.80 ರಷ್ಟು ಪ್ರಮಾಣ ಜೀವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಅಲ್ಲಿನ ಸ್ಪೀಡ್ ಲಿಮಿಟ್(ವೇಗದ ಮಿತಿ)ನೋಡಿ ವಾಹನ ಚಲಾಯಿಸಿ. ಶೇ. 100 ಅಪಘಾತಗಳಲ್ಲಿ ಶೇ. 90 ರಷ್ಟು ಅಪಘಾತಗಳು ಚಾಲಕರ ಅಜಾಗರೂಕತೆಯಿಂದ ನಡೆಯುತ್ತವೆ. ರಸ್ತೆ ಸಂಚಾರಿ ನಿಯಮಗಳನ್ನು ನಿರ್ಲಕ್ಷಿಸಿದರೆ ಅಪಘಾತದಲ್ಲಿ ಜೀವ ಅಥವಾ ದೇಹದ ಅಂಗಾಂಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

       ಹಳ್ಳಿಗಳಲ್ಲಿ ಕೆಲವು ರಸ್ತೆ ಗುಂಡಿಗಳನ್ನು ತಾವೇ ಮುಚ್ಚುವುದರ ಮೂಲಕ ಬೇರೆ ಅಪಘಾತಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಎಂದರು.ಜಿ.ಪಂ.ಸದಸ್ಯ ಓಬಳೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಡ್ರಿಂಕ್ ಅಂಡ್ ಡ್ರೈವ್‍ನಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅದಕ್ಕಾಗಿ ಈ ಕುರಿತು ಅರಿವು ಮೂಡಿಸಬೇಕಾಗಿರುವುದು ಅಧಿಕಾರಿ ಜನಪ್ರತಿನಿಧಿಗಳು ಮಾತ್ರವಲ್ಲದೆ ಮದ್ಯವನ್ನು ತ್ಯಜಿಸುವಂತೆ ಮಕ್ಕಳು ಪೋಷಕರಿಗೆ ಸಂಬಂಧಿಕರಿಗೆ ಹೇಳಬೇಕು.

         ಹೆಲ್ಮೆಟ್ ಬಳಕೆಯಿಂದ ತಲೆಗೆ ಹೊಡೆತ ಕಡಿಮೆ ಪ್ರಮಾಣದಲ್ಲಿ ಬಿಳುತ್ತದೆ ಇದರಿಂದ ಜೀವಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಲೋಕಿಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾವಣಗೆರೆಗೆ ಪದವಿ ವಿದ್ಯಾಭ್ಯಾಸಕ್ಕಾಗಿ ನಿತ್ಯ ಸಂಚಾರ ಮಾಡಲು ತೊಂದರೆಯಾಗುತ್ತಿದೆ.

       ಇದಕ್ಕೆ ಲೋಕಿಕೆರೆ ಗ್ರಾಮದಲ್ಲಿ ಒಂದು ಪದವಿ ಕಾಲೇಜ್ ಸ್ಥಾಪನೆಗೆ ಮಾಡಬೇಕೆಂದು ಆಗ್ರಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಕಿಕೆರೆ ಗ್ರಾಮದ ಗ್ರಾ.ಪಂ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮುಖ್ಯ. ಇಲ್ಲಿನ ಭಾಗದಲ್ಲಿ ಅಪಘಾತಗಳು ಸಂಭವಿಸಿದಾಗ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಬಾರದೇ ಜೀವ ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ಲೋಕಿಕೆರೆ ಗ್ರಾಮದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಸ್ಥಾಪನೆ ಅಗತ್ಯತೆ ಇದೆ ಇದಕ್ಕಾಗಿ ಜಿಲ್ಲಾಧಿಕಾರಿಗಳು ಸಹಕರಿಸಬೇಕು ಹಾಗೂ ಲೋಕಿಕೆರೆ ಗ್ರಾಮದಲ್ಲಿ 50 ರೌಡಿ ಶೀಟರ್‍ಗಳಿದ್ದಾರೆ. ಆ ರೌಡಿ ಶೀಟರ್‍ಗಳು ಪ್ರಸ್ತುತ ಬದಲಾಗಿದ್ದಾರೆ ಅವರನ್ನು ರೌಡಿ ಶೀಟರ್‍ನಿಂದ ವಿಮುಕ್ತರನ್ನಾಗಿ ಮಾಡಬೇಕು ಎಂದು ವೇದಿಕೆಯಲ್ಲಿ ಟಿ.ಜೆ ಉದೇಶ್ ಅವರಿಗೆ ಮನವಿ ಮಾಡಿದರು.

       ಡಿಎಸ್‍ಎಸ್ ಮುಖಂಡ ಬಲ್ಲೂರು ಹನುಮಂತಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಲೋಕಿಕೆರೆ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಾಶಾಲೆ ಮಕ್ಕಳಿಂದ ರಸ್ತೆ ಸುರಕ್ಷತೆ ಕುರಿತು ಜಾಥಾ ನಡೆಸಲಾಯಿತು ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ ಮಂಜುನಾಥ್ ಕೆ. ಗಂಗಲ್, ಲೋಕಿಕೆರೆ ಗ್ರಾಮದ ಪಿಡಿಓ ಕೆ.ಎಂ ಪ್ರಕಾಶ್, ತಾ.ಪಂ ಸದಸ್ಯರಾದ ಮುರುಗೇಂದ್ರಪ್ಪ, ಗ್ರಾ.ಪಂ ಉಪಾಧ್ಯಕ್ಷೆ ಕಮಲಮ್ಮ, ವೃತ್ತ ನಿರೀಕ್ಷಕರಾದ ಹೆಚ್ ಗುರುಬಸವರಾಜು, ಗ್ರಾಮದ ಮುಖಂಡರುಗಳಾದ ರಾಮಜ್ಜರ ಓಬಳಪ್ಪ, ಭರಮೇಶಪ್ಪ, ಸೇರಿದಂತೆ ಹದಡಿ ಪೊಲೀಸ್‍ಠಾಣೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link