ಖಾತೆ ಹಂಚಿಕೆಗೆ ಆ.15ರವರೆಗೆ ಕಾಲಾವಕಾಶ ಬಿಜೆಪಿಗೆ ತಿರುಗೇಟು | ಅಸಮಾಧಾನದ ವರದಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ವಿಳಂಬದ ಕುರಿತ ಟೀಕೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದು, “ಖಾತೆ ಹಂಚಿಕೆಗೆ ಆಗಸ್ಟ್ 15ರ ವರೆಗೂ ಕಾಲಾವಕಾಶವಿದೆ” ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ವಿಧಾನಪರಿಷತ್ ನೂತನ ಸದಸ್ಯೆ ಗಾಯತ್ರಿ ಶಾಂತೇಗೌಡರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಿಮಿತ್ತ ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಳಂಬವಿಲ್ಲ, ಶೀಘ್ರದಲ್ಲೇ ಖಾತೆ ಹಂಚಿಕೆ : ಖಾತೆ ಹಂಚಿಕೆ ವಿಳಂಬದ ಕುರಿತು ಮಾತನಾಡಿದ ಅವರು, ಆಗಸ್ಟ್ 13ರಂದು ಸಂತಾಪ ಸೂಚನೆ ಹಾಗೂ 14ರಂದು ನೂತನ ಶಾಸಕರ ಪರಿಚಯ ಕಾರ್ಯಕ್ರಮವಿರಲಿದೆ. ಆ.15ರವರೆಗೂ ನಮಗೆ ಸಮಯವಿದೆ, ಶೀಘ್ರದಲ್ಲೇ ಖಾತೆ ಹಂಚಿಕೆಯಾಗಲಿದೆ ಎಂದು ಸೂಚ್ಯವಾಗಿ ನುಡಿದರು. ಇದೇ ವೇಳೆ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಸಿಎಂ, ಬಿ.ಎಸ್. ಯಡಿಯೂರಪ್ಪನವರು ಎಷ್ಟು ದಿನ ಒಂಟಿಯಾಗಿ ಮುಖ್ಯಮಂತ್ರಿಯಾಗಿದ್ದರು? ಅವರು ಎಷ್ಟು ದಿನ ದೆಹಲಿಯಲ್ಲಿ ಕಾಯಲಿಲ್ಲ? ಎಂದು ಪ್ರಶ್ನಿಸಿದರು.

ಅವಿಶ್ವಾಸ ನಿರ್ಣಯದ ಪ್ರಶ್ನೆಯೇ ಇಲ್ಲ : ಸಭಾಪತಿ ಬಸವರಾಜ ಹೊರಟ್ಟಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಅವರ ಸಮ್ಮುಖದಲ್ಲೇ ಸಿಎಂ ಈ ವಿಚಾರವನ್ನು ಸ್ಪಷ್ಟಪಡಿಸಿದರು. ಅವರು ಒಪ್ಪಿದರೆ ಅವರನ್ನೇ ಪ್ರೋಟೆಮ್ ಸಭಾಪತಿಯನ್ನಾಗಿ ಮಾಡುತ್ತೇವೆ. ಇದು ನಮ್ಮ ‘ಮನೆ ವಿಚಾರ’. ಸದಸ್ಯರು ಅವರಿಗೆ ಗೌರವಯುತವಾಗಿ ಕೃತಜ್ಞತೆ ಸಲ್ಲಿಸಲಿದ್ದಾರೆ ಎಂದು ಹೇಳುವ ಮೂಲಕ ಅವಿಶ್ವಾಸ ನಿರ್ಣಯದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿ, ಈ ಕುರಿತ ಬಿಜೆಪಿ ಆಕ್ಷೇಪವನ್ನು ತಳ್ಳಿಹಾಕಿದರು.

ಯಾರಿಗೂ ಅಸಮಾಧಾನವಿಲ್ಲ : ಎಂ. ಕೃಷ್ಣಪ್ಪ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ವಿಚಾರದಲ್ಲಿ ತಪ್ಪೇನಿಲ್ಲ ಎಂದ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿದರು. ಹಿರಿಯರಿಗೆ ಸೂಕ್ತ ಜವಾಬ್ದಾರಿ ನೀಡಲಾಗುವುದು ಎಂದು ಭರವಸೆ ನೀಡಿದರು. ಸಂಪುಟದಲ್ಲಿ ಮಹಿಳಾ ಮಂತ್ರಿಗಳ ಸೇರ್ಪಡೆ ಕುರಿತು ಮಾಧ್ಯಮಗಳಿಗೆ ಮುಂಚಿತವಾಗಿ ಮಾಹಿತಿ ನೀಡಿಯೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇನ್ನು, ಸಚಿವ ಬಿ. ನಾಗೇಂದ್ರ ಸೇರ್ಪಡೆ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ, ಅವರು ಹೋರಾಟ ಮಾಡಲಿ ಬಿಡಿ ಎಂದು ಲಘುವಾಗಿ ಪ್ರತಿಕ್ರಿಯಿಸಿದರು.

 

ಸಿಎಸ್‌ಆರ್ ನಿಧಿ ಮೇಲೆ ಪ್ರತ್ಯೇಕ ನಿಗಾ
ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಿ

ಸಿ.ಎಸ್.ಆರ್. ಸಮಾವೇಶ-2026 ರಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಸ್‌ಆರ್ ನಿಧಿಯನ್ನು ಸಂಸ್ಥೆಗಳು ಹೇಗೆ ಮತ್ತು ಎಲ್ಲಿ ಬಳಸುತ್ತಿವೆ ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಪ್ರತಿ ಸಂಸ್ಥೆಯ ಸಿಎಸ್‌ಆರ್ ಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ವಹಿಸಲಿದೆ. ಹಣವನ್ನು ಸರ್ಕಾರದ ಮೂಲಕ ಪಡೆದು ಮತ್ತೆ ಬೇರೆ ಸಂಸ್ಥೆಗಳಿಗೆ ವರ್ಗಾಯಿಸುವ ವ್ಯವಸ್ಥೆ ಬೇಡ. ಸಂಸ್ಥೆಗಳೇ ನೇರವಾಗಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ದೊಡ್ಡ ದೊಡ್ಡ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಕನಿಷ್ಠ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಶಾಲೆಗಳು ಸಮಾಜದ ಜವಾಬ್ದಾರಿಯ ಭಾಗವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ, ಕಂಪ್ಯೂಟರ್, ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು ಎಂದರು.

Recent Articles

spot_img

Related Stories

Share via
Copy link