ಹುಳಿಯಾರು:
ಬೀಳುವ ಹಂತದಲ್ಲಿ ಕೊಠಡಿಗಳು, ಜೀವ ಭಯದಲ್ಲಿ ವಿದ್ಯಾರ್ಥಿಗಳು
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಸರ್ಕಾರಿ ಶಾಲಾ ಕಟ್ಟಡಗಳ ದುಸ್ಥಿತಿಯನ್ನು ಹೇಳ ತೀರದಾಗಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಸರ್ಕಾರಿ ಶಾಲೆಗಳು ದುರಸ್ಥಿಗೆ ಕಾಯುತ್ತಿವೆ. ಅದರಲ್ಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ಗೊಲ್ಲರಹಟ್ಟಿಯ ಶಾಲೆ ದುರಸ್ತಿ ಮಾಡಲಾಗದಂತಹ ಸ್ಥಿತಿಗೆ ತಲುಪಿದೆ. ಆದರೂ ಶಿಕ್ಷಣ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ.
ಹೌದು, ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಹಳ್ಳಿಹಳ್ಳಿಗೂ ಶಾಲೆಗಳನ್ನು ನೀಡಿದಂತೆ ಕೆಂಕೆರೆ ಗೊಲ್ಲರಹಟ್ಟಿಗೂ ಪ್ರಾಥಮಿಕ ಶಾಲೆ ನೀಡಿದೆ. ಆದರೆ ಶಾಲೆ ಆರಂಭಿಸಿ ಹೋದ ಅಧಿಕಾರಿಗಳು, ಜನಪ್ರತಿನಿಧಿಗಳು ಪುನಃ ಅತ್ತ ತಿರುಗಿಯೂ ಸಹ ನೋಡಿಲ್ಲ. ಪರಿಣಾಮ ಶಾಲೆಗಳ ಕೊಠಡಿಗಳು ದನ-ಕುರಿಗಳನ್ನೂ ಕಟ್ಟಲೂ ಆಗದಂತಹ ದುಸ್ಥಿತಿಗೆ ತಲುಪಿವೆ. ಯಾವ ಕ್ಷಣದಲ್ಲಿಯಾದರೂ ಬೀಳುವ ಹಂತದಲ್ಲಿರುವ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಹೆದರುತ್ತಿದ್ದು ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಶಿಕ್ಷಣ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.
ಎರಡೇ ತರಗತಿ ಕೊಠಡಿ :
ಸದರಿ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ 32 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಗೊಲ್ಲಹಟ್ಟಿ ಸೇರಿದಂತೆ ಅಕ್ಕಪಕ್ಕದ ತೋಟದ ಮನೆಗಳ ಮಕ್ಕಳೂ ಸಹ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 1 ರಿಂದ 5 ನೇ ತರಗತಿವರೆಗೆ ಎರಡು ಕೊಠಡಿಗಳು ಮಾತ್ರವಿದ್ದು, ಅವೂ ಸಹ ಶಿಥಿಲಾವಸ್ಥೆಗೆ ತಲುಪಿವೆ. ಪರಿಣಾಮ ಗ್ರಂಥಾಲಯ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದರಾದರೂ ಅದೂ ಸಹ ಬಿದ್ದು ಹೋಗುವ ಹಂತದಲ್ಲಿದೆ.
ಉದುರಿ ಬೀಳುತ್ತಿರುವ ಮೇಲ್ಛಾವಣಿ :
ಅಷ್ಟೇ ಅಲ್ಲ, ಬಿಸಿಯೂಟದ ಅಡಿಗೆ ಕೋಣೆ ಸಹ ಶಿಥಿಲವಾಗಿದ್ದು, ಸಣ್ಣ ಮಳೆಯಾದರೂ ಸಾಕು ಸೋರುತ್ತದೆ. ಚಾವಣಿ ಒಳಮೈ ಉದುರಿ ಬೀಳುತ್ತಿದೆ. ಕೊಠಡಿಗಳ ಕಿಟಕಿಗಳು ಮುರಿದು ಹೋಗಿವೆ. ಹೆಂಚುಗಳು ಮುಕ್ಕಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯಾರ್ಥಿಗಳು, ಅಡುಗೆಯವರು, ಶಿಕ್ಷಕರು ಕಟ್ಟಡ ಕುಸಿಯುವ ಭೀತಿ ಎದುರಿಸುತ್ತಿದ್ದಾರೆ. ಶೌಚಾಲಯದ ಸ್ಥಿತಿಯಂತೂ ಹೇಳಲಾರದ ಸ್ಥಿತಿ ತಲುಪಿದೆ.
ಮಳೆ ಬಂದಾಗ ಹೆಚ್ಚು ಹಾನಿ :
ಗೋಡೆ ಮತ್ತು ಮೇಲ್ಛಾವಣಿಯ ಸಿಮೆಂಟ್ ಪದರು ಶಾಲಾವಧಿಯಲ್ಲಿಯೆ ಉದುರಿ ಬೀಳುತ್ತಿದೆ. ಕೆಲವು ಸಲ ಅಡುಗೆ ಸಿಬ್ಬಂದಿ ಮೇಲೆ ಉದುರಿ ಬಿದ್ದ ನಿದರ್ಶನಗಳೂ ಇವೆ. ಮಳೆಗಾಲದಲ್ಲಿ ಸ್ವಲ್ಪ ಮಳೆ ಬಂದರೆ ಸಾಕು ತರಗತಿಯಲ್ಲಿ ನೀರು ಸೋರುತ್ತದೆ. ಮಳೆ ನಿಲ್ಲುವವರೆಗೆ ಅಲ್ಪ-ಸ್ವಲ್ಪ ಸೋರದೆ ಇರುವ ಕೋಣೆಯ ಯಾವುದಾದರೊಂದು ಮೂಲೆಯಲ್ಲಿ ಮಕ್ಕಳು ಪುಸ್ತಕ, ಚೀಲಗಳನ್ನು ಹಿಡಿದು ನಿಲ್ಲಬೇಕಾಗಿದೆ.
ಗಮನ ಹರಿಸದ ಶಿಕ್ಷಣ ಇಲಾಖೆ :
ಶಾಲೆಯ ಎಲ್ಲಾ ಕೋಣೆಗಳು ಸಂಪೂರ್ಣ ಶಿಥಿಲಗೊಂಡು ತರಗತಿ ನಡೆಸಲು ಯೋಗ್ಯವಾಗಿರದಿದ್ದರೂ ಅನಿವಾರ್ಯವಾಗಿ ಭಯದ ವಾತವರಣದಲ್ಲೆ ಮಕ್ಕಳಿಗೆ ಬೋಧನೆ ನಡೆಯುತ್ತಿದೆ. ಪ್ರತಿ ವರ್ಷವು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಗೊಂಡ ಶಾಲಾ ಕಟ್ಟಡ ನೆಲಸಮಗೊಳಿಸಿ ಪ್ರಸ್ತುತ ಇರುವ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಬೇಕಿದೆ. ತಮ್ಮ ಕಾರ್ಯ ವೈಖರಿಯ ಮೂಲಕವೇ ರಾಜ್ಯದಲ್ಲಿ ಹೆಸರಾಗಿರುವ ಶಿಕ್ಷಣ ಸಚಿವರು ನೂತನ ಶಾಲಾ ಕಟ್ಟಡ ನಿರ್ಮಿಸಲು ಮುಂದಾಗುವರೇ ಕಾದು ನೋಡಬೇಕಿದೆ.
ಶಿಥಿಲಗೊಂಡ ಶಾಲೆಯ ಕಟ್ಟಡ, ಜೋರು ಮಳೆ ಬಂದಾಗ ಕೊಠಡಿಯೊಳಗೆ ಜಿನುಗುವ ನೀರು, ಮೇಲ್ಚಾವಣಿಯಿಂದ ಉದುರಿ ಬೀಳುವ ಸಿಮೆಂಟ್ ಇದು ಗೊಲ್ಲರಹಟ್ಟಿಯ ಶಾಲೆಯ ಸ್ಥಿತಿ. ಇಲ್ಲಿ ಜೀವ ಭಯದಿಂದ ಅಡಿಗೆ ಮಾಡುತ್ತಿದ್ದೇವೆ ಅಲ್ಲದೇ ಆತಂಕದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಪಾಠ ಕೇಳಲು ಕಳುಹಿಸುತ್ತಿದ್ದೇವೆ.
-ಚನ್ನಮ್ಮ, ಅಡಿಗೆ ಸಿಬ್ಬಂದಿ,
ಶಾಲೆಯ ದುಸ್ತಿತಿಯ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸಹ, ಅಧಿಕಾರಿಗಳು ನೂತನ ಕೊಠಡಿ ನಿರ್ಮಿಸಲು ಮೀನಾಮೇಷ ನೋಡುತ್ತಿದ್ದಾರೆ. 1963 ರಲ್ಲೇ ಗ್ರಾಮದ ಮುಖಂಡರು ಶಾಲಾ ಕಟ್ಟಡಕ್ಕೆ ಭೂದಾನ ನೀಡಿದ್ದಾರೆ. ಆದರೆ, ಅದು ಸರ್ಕಾರದ ಆಸ್ತಿ ಎಂದು ದಾಖಲೆಗಳಲ್ಲಿ ಇನ್ನು ಸೇರ್ಪಡೆಗೊಂಡಿಲ್ಲ. ಈ ಸಬೂಬು ಹೇಳುತ್ತಾ ಅಧಿಕಾರಿಗಳು ಕಾಲ ದೂಡುತ್ತಿದ್ದಾರೆ.
-ಸತೀಶ್, ಗ್ರಾಪಂ ಸದಸ್ಯ
ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಸರ್ಕಾರ ಬೊಬ್ಬೆಯೊಡೆಯುತ್ತದೆ. ಆದರೆ ಶಾಲೆಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದೆ ಕಡೆಗಣಿಸುತ್ತದೆ. ಖಾಸಗಿ ಶಾಲೆಗೆ ಕಳುಹಿಸುವ ಸಾಮಥ್ರ್ಯವಿದ್ದರೂ ಸರ್ಕಾರಿ ಶಾಲೆಯ ಅಭಿಮಾನದಿಂದ ನನ್ನ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಯಾಕಾದ್ರೂ ಕಳುಹಿಸುತ್ತಿದ್ದೇನೊ ಎನ್ನುವಂತಾಗುತ್ತಿದೆ.
-ಎಂ.ಜಿ.ದೇವರಾಜು, ಎಸ್‍ಡಿಎಂಸಿ ಅಧ್ಯಕ್ಷ
ದುರಸ್ತಿ ಶಾಲೆಗಳ ಪಟ್ಟಿ ಹಾಗೂ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟುವ ಶಾಲೆಗಳ ಪಟ್ಟಿಯನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಕಳುಹಿಸಲಾಗಿದೆ. ಕೆಂಕೆರೆ ಗೊಲ್ಲರಹಟ್ಟಿ ಶಾಲೆಯೂ ಸಹ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣದ ಪಟ್ಟಿಯಲ್ಲಿ ಸೇರಿದೆ. ಆದರೆ ಇದೂವರೆಗೂ ಸರ್ಕಾರದಿಂದ ಅನುದಾನ ಬಂದಿಲ್ಲ. ಈಗ ಪುನಃ ಮಳೆಯ ಅನಾಹುತದ ಪಟ್ಟಿಯಲ್ಲೂ ಈ ಶಾಲೆಯನ್ನು ಸೇರಿಸಲಾಗಿದೆ. ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ.
-ಸಂಗಮೇಶ್, ಪ್ರಭಾರ ಬಿಇಓ, ಚಿಕ್ಕನಾಯಕನಹಳ್ಳಿ
