ಹರಪನಹಳ್ಳಿ:
ತಾಲ್ಲೂಕಿನಲ್ಲಿ ಕಾಲುಬೇನೆ ಹಾಗೂ ದನ್ನಿ ರೋಗ ಕಾಣಿಸಿಕೊಂಡಿದ್ದು, ಈ ರೋಗಳಿಗೆ 10ಕ್ಕೂ ಹೆಚ್ಚೂ ಕುರಿ-ಮೇಕೆಗಳು ಮೃತಪಟ್ಟಿವೆ.
ತಾಲ್ಲೂಕಿನ ಹಾರಕನಾಳು, ಬಾಪೂಜಿನಗರ, ಹಾರಕನಾಳು ತಾಂಡಾ, ಹುಲಿಕಟ್ಟಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲುಬೇನೆ-ದನ್ನಿ ರೋಗ ಜಾನುವಾರುಗಳಲ್ಲಿ ಕಂಡುಬಂದಿದೆ. ಮಂಗಳವಾರ ಬಾಪೂಜಿನಗರದ ಶಂಕರನಾಯ್ಕ, ಭೀಮನಾಯ್ಕ, ರಮೇಶನಾಯ್ಕ ಅವರಿಗೆ ಸೇರಿದ ಮೇಕೆಗಳು ದನ್ನಿರೋಗ (ಪಿತ್ರೂಟ್) ಮೃತಪಟ್ಟಿದ್ದು, ಅವುಗಳನ್ನು ಪಟ್ಟಣದ ಪಶು ಆಸ್ಪತ್ರೆಗೆ ತಂದು, ಸೂಕ್ತ ಚಿಕಿತ್ಸೆ ನೀಡಿತಾದರೂ ಅವು ಮೃತಪಟ್ಟಿವೆ.
ಹಾರಕನಾಳು ಸೇರಿದಂತೆ ಒಟ್ಟು 10 ಗ್ರಾಮಗಳಿಗೆ ಒಬ್ಬರೇ ಪಶು ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಔಷಧಿ ಹಾಗೂ ಚಿಕಿತ್ಸೆ ಸರಿಯಾದ ಸಮಯಕ್ಕೆ ನೀಡಲು ಸಾಧ್ಯವಾಗದೇ ಮೇಕೆಗಳು ರೋಗಗಳಿಂದ ಸಾವನಪ್ಪುತ್ತಿವೆ. ಅಲ್ಲದೇ ಜಾನುವಾರುಗಳಿಗೂ ಸಹ ಕಾಲುಬೇನೆ ರೋಗ ಕಾಣಿಸಿಕೊಂಡು ನರಳುತ್ತಿವೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಅವುಗಳ ಪ್ರಾಣಕ್ಕೆ ಅಪಾಯವಿದೆ ಎಂದು ಎಂದು ಗ್ರಾಮಸ್ಥರು ದೂರಿದ್ದಾರೆ.
ಲಕ್ಷಾಂತಾರ ಹಣ ಕೊಟ್ಟು ಎತ್ತು, ಆಕಳು ಖರೀದಿಸಿ ಕೃಷಿ ಮಾಡುತ್ತಿದ್ದೇವೆ. ಆದರೆ ಇವುಗಳು ಕಾಲುಬೇನೆ ರೋಗಕ್ಕೆ ತುತ್ತಾಗಿವೆ. ಸರಿಯಾದ ಔಷಧಿ ಸಿಗದೇ ಅವುಗಳನ್ನು ನೋಡಿಕೊಳ್ಳುವುದೇ ಕಷ್ಟವಾಗಿದೆ ಎಂದು ಎನ್ನುತ್ತಾರೆ ಶಂಕರನಾಯ್ಕ, ರಮೇಶನಾಯ್ಕ ಅವರು.
`ಗ್ರಾಮಸ್ಥರು ಮೇಕೆಗಳು ಕಾಯಿಲೆಯಿಂದ ಸತ್ತಿವೆ ಎಂದು ತಿಳಿಸಿದ್ದಾರೆ. ಅವುಗಳ ಪೋಸ್ಟ್ ಮಾರ್ಟಮ್ ಮಾಡಲಾಗಿದ್ದು, ವರದಿ ಬಂದ ಬಳಿಕ ಯಾವ ರೋಗವೆಂದು ಗೊತ್ತಾಗಲಿದೆ. ಅಲ್ಲದೇ ಜಾನುವಾರುಗಳಿಗೆ ಕಾಲುಬೇನೆ ರೋಗ ಇರುವ ಬಗ್ಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು’ ಎಂದು ಪಶುಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ ತಿಳಿಸಿದ್ದಾರೆ.
`ರೋಗಗಳಿಗೆ ಸಿಲುಕುವ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲು ಔಷಧಗಳ ಕೊರತೆ ಇದೆ. 10 ಹಳ್ಳಿಗೆ ನಾವು ಒಬ್ಬರೇ ಪಶುವೈದರಿದ್ದೇವೆ. ಹೀಗಾಗಿ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿ ಚಿಕಿತ್ಸೆ ನೀಡುವುದು ಕಷ್ಟವಾಗುತ್ತದೆ. ಆದರೂ ಪಶುಗಳ ಆರೈಕೆಗೆ ಪ್ರಯತ್ನ ಮುಂದುವರಿಸಿದ್ದೇವೆ. ಹೆಚ್ಚಿನ ಪ್ರಮಾಣದ ಔಷಧೋಪಚಾರ ಒದಗಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಹುಲಿಕಟ್ಟಿ ಪಶು ವೈದಾಧಿಕಾರಿ ಹನುಮಂತಪ್ಪ.
`ಈ ಭಾಗದಲ್ಲಿ ಬಡವರೇ ಹೆಚ್ಚು ವಾವಾಸವಾಗಿದ್ದು, ಅವರಿಗೆ ಕುರಿ-ಸಾಕಾಣೆಕೆಯೇ ಮೂಲಾಧಾರವಾಗಿದೆ. ನೂರಾರು ಜಾನುವಾರುಗಳು ಕಾಲುಬೇನೆ ರೋಗದಿಂದ ಬಳಲುತ್ತಿವೆ. ತತ್ಞ ವೈದರ ತಂಡ ಭೇಟಿ ಪರಿಶೀಲಿಸಿ ತುರ್ತು ಪರಿಹಾರಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಆಗ್ರಹಿಸಿದ್ದಾರೆ.