ಚಿತ್ರದುರ್ಗ;
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆ ವೇಳೆ ಪಕ್ಷದ ವರಿಷ್ಟರು ಕೈಗೊಂಡ ತೀರ್ಮಾನದಂತೆ ಎರಡನೇ ಅವಧಿಗೆ ನನಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಸದಸ್ಯೆ ರಾಧಮ್ಮ ಜಗದೀಶ್ ಅವರು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಒತ್ತಡ ಹೇರಿದ್ದಾರೆ.
ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರ ಹಿಡಿದಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಪಕ್ಷದ ಮುಖಂಡರು ತೀರ್ಮಾನ ಮಾಡಿರುವ ಪ್ರಕಾರ ಎರಡನೇ ಅವಧಿಗೆ ನನಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿತ್ತು. ಒಪ್ಪಂದದ ಪ್ರಕಾರ ಹಾಲಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಮುಂದುವರೆದಿದ್ದು, ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ರಾಧಮ್ಮ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಪಕ್ಷದ ವರಿಷ್ಟ ಮಂಡಳಿ ದಿನಾಂಕ:6-5-2016 ರಂದು ನಿರ್ಧರಿಸಿದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು 15 ತಿಂಗಳಿಗೆ ಒಬ್ಬರಂತೆ ನಾಲ್ಕು ಅವಧಿಗಳಿಗೆ ವಿಂಗಡಿಸಿ ಮೊದಲನೇ ಅವಧಿಯನ್ನು ಆರ್.ಎನ್.ವೇಣುಗೋಪಾಲ್‍ರವರಿಗೆ ನೀಡಿ ಎರಡನೆ ಅವಧಿಯನ್ನು ನನಗೆ ನೀಡಲು ತೀರ್ಮಾನಿಸಲಾಗಿತ್ತು. ಅಧ್ಯಕ್ಷ ವೇಣುಗೋಪಾಲ್‍ರವರ ಅವಧಿ ಹದಿನೈದು ತಿಂಗಳು ಪೂರ್ಣಗೊಂಡು 28 ನೇ ತಿಂಗಳಿಗೆ ಕಾಲಿಟ್ಟಿದೆ. ಆದರೂ ಆರ್.ಎನ್.ವೇಣುಗೋಪಾಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದುವರೆಯುತ್ತಿರುವುದರಿಂದ ಸಾಮಾಜಿಕ ನ್ಯಾಯದಿಂದ ವಂಚಿತಳಾಗಿದ್ದೇನೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗಾಗಿ ದುಡಿಯುತ್ತಿದ್ದೇನೆ. ಆದ ಕಾರಣ ವರಿಷ್ಟರು ತೆಗೆದುಕೊಂಡಿರುವ ನಿರ್ಧಾರದಂತೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನದ ಎರಡನೇ ಅವಧಿಯನ್ನು ನನಗೆ ನೀಡಬೇಕು. ಅದೇ ರೀತಿ ಮೂರು ಮತ್ತು ನಾಲ್ಕನೆ ಅವಧಿಯನ್ನು ಲಿಂಗರಾಜು ಹಾಗೂ ಬೋರಯ್ಯ ಇವರುಗಳಿಗೆ ಸಿಗಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮಠದಕುರುಬರಹಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿ ಎದುರಾಳಿ ವಿರುದ್ದ 3379 ಮತಗಳನ್ನು ಪಡೆದು ಬಿಜೆಪಿ.ಅಭ್ಯರ್ಥಿಯನ್ನು 1933 ಮತಗಳ ಅಂತರದಿಂದ ಪರಾಭವಗೊಳಿಸಿದ್ದೇನೆ. ತಾಲೂಕು ಪಂಚಾಯಿತಿಗೆ ಆಯ್ಕೆಯಾಗಿರುವ 17 ಮಂದಿ ಸದಸ್ಯರುಗಳಲ್ಲಿ ಹನ್ನೆರಡು ಮಹಿಳೆಯರಿದ್ದೇವೆ. ಕೇವಲ ಮೂವರು ಮಾತ್ರ ಪುರುಷರಿದ್ದಾರೆ. ಹಾಗಾಗಿ ನ್ಯಾಯಸಮ್ಮತವಾಗಿ ಎರಡನೇ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ನನಗೆ ಸಿಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಜೆ.ರಾಧಮ್ಮ ಜಗದೀಶ್ ಮನವಿ ಮಾಡಿಕೊಂಡರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ತಾರ, ಮಂಜುಳ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಸೇವಾದಳದ ಜಿಲ್ಲಾಧ್ಯಕ್ಷ ಅಶ್ರಫ್‍ಆಲಿ, ಡಿ.ಎಸ್.ಸೈಯದ್‍ವಲಿಖಾದ್ರಿ, ಮಾಲೇಶ್, ಜೆ.ಮಂಜುನಾಥ್, ಸಚಿವ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
