ಜಿಲ್ಲೆಯಲ್ಲಿ ಜೆಡಿಎಸ್ ಹಿಡಿತವೇನೊ ಇದೆ-ಆದರೆ ಜಿಎಸ್‍ಬಿ ಒಳ ಸುಳಿ ಬಲ್ಲವರು..!

ತುಮಕೂರು

      2014 ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೊಮ್ಮೆ ಅವಲೋಕಿಸಿದರೆ ಒಟ್ಟು 15,18,144 ಮತದಾರರ ಪೈಕಿ 11,00,617 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಶೇಕಡಾ 72.49 ರಷ್ಟು ಮತದಾನವಾಗಿತ್ತು. ಶೇಕಡವಾರು ಮತಗಳಿಕೆಯಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಮಧುಗಿರಿ, ಕೊರಟಗೆರೆ, ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳು ಅತಿ ಹೆಚ್ಚಿನ ಲೀಡ್ ತಂದು ಕೊಟ್ಟಿದ್ದವು. ಬಿಜೆಪಿಗೆ ತುಮಕೂರು ನಗರ, ತುಮಕೂರು ಗ್ರಾಮಾಂತರ, ತಿಪಟೂರು ಮತ್ತು ಗುಬ್ಬಿ ಕ್ಷೇತ್ರಗಳು ಮುನ್ನಡೆ ತಂದುಕೊಟ್ಟಿದ್ದವು.

      ಚಲಾವಣೆಯಾದ 11,00,617 ಒಟ್ಟು ಮತಗಳ ಪೈಕಿ ಬಿಜೆಪಿಯ ಜಿ.ಎಸ್.ಬಸವರಾಜು ಶೇಕಡ 23.43 ಮತಗಳಿಸಿದ್ದರು. ಒಟ್ಟು ಮತಗಳಲ್ಲಿ ಮತಗಳಿಕೆಯ ಪ್ರಮಾಣ ಶೇಕಡ 32.32. ಕಾಂಗ್ರೆಸ್‍ನ ಎಸ್.ಪಿ.ಮುದ್ದಹನುಮೇಗೌಡ ಅವರು ಒಟ್ಟು ಮತಗಳ ಪೈಕಿ 28.31ರಷ್ಟು ಮತ ಗಳಿಸಿದರೆ ಚಲಾವಣೆಯಾದ ಮತಗಳ ಪೈಕಿ 39.05ರಷ್ಟು ಮತ ಪಡೆದಿದ್ದರು. ಜೆಡಿಎಸ್‍ನ ಎ.ಕೃಷ್ಣಪ್ಪ ಒಟ್ಟು ಮತಗಳ ಪೈಕಿ 17.03ರಷ್ಟು ಮತಗಳಿಸಿದರೆ ಚಲಾವಣೆಯಾದ ಮತಗಳಲ್ಲಿ 23.50ರಷ್ಟು ಮತ ಪಡೆದಿದ್ದರು.

       ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಡೆದ ಒಟ್ಟು ಶೇಕಡವಾರು ಮತ 45.34. ಚಲಾವಣೆಯಾದ ಮತಗಳ ಪೈಕಿ ಎರಡೂ ಪಕ್ಷಗಳ ಒಟ್ಟು ಮತಗಳಿಕೆ ಶೇಕಡಾ 62.55ರಷ್ಟಾಗಿತ್ತು.

ಮುನ್ನಡೆ

      ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಮುನ್ನಡೆ (ಲೀಡ್) ತಂದುಕೊಟ್ಟಿದ್ದು ಮಧುಗಿರಿ ಕ್ಷೇತ್ರ. ಇಲ್ಲಿ 1,84,737 ಮತದಾರರ ಪೈಕಿ 1,30,400 ಮಂದಿ ಮತ ಚಲಾಯಿಸಿದ್ದರು. ಕಾಂಗ್ರೆಸ್‍ಗೆ ಹೆಚ್ಚುವರಿ 38,536 ಮತಗಳು ಇಲ್ಲಿ ಲಭ್ಯವಾಗಿದ್ದವು. ನಂತರದ ಸ್ಥಾನದಲ್ಲಿ ಕೊರಟಗೆರೆ ಕಂಡುಬಂದಿತ್ತು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ 33,583 ಹೆಚ್ಚುವರಿ ಮತಗಳ ಮುನ್ನಡೆ ಪಡೆದಿದ್ದರು. ತುರುವೇಕೆರೆಯಲ್ಲಿ 18,732 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ 11,999 ಮತಗಳ ಮುನ್ನಡೆಯನ್ನು ಕಾಂಗ್ರೆಸ್ ಪಡೆದಿತ್ತು.

ಬಿಜೆಪಿ:-

      ಬಿಜೆಪಿಯ ಜಿ.ಎಸ್.ಬಸವರಾಜು ಕಳೆದ ಬಾರಿ ತಿಪಟೂರಿನಲ್ಲಿ ಅತಿ ಹೆಚ್ಚಿನ 14,759 ಲೀಡ್ ಪಡೆದಿದ್ದರು. ನಂತರ ತುಮಕೂರಿನಲ್ಲಿ 6,000, ತುಮಕೂರು ಗ್ರಾಮಾಂತರದಲ್ಲಿ 4,000, ಗುಬ್ಬಿಯಲ್ಲಿ 2,700 ಹೆಚ್ಚಿನ ಮುನ್ನಡೆ ಮತಗಳನ್ನು ಪಡೆದುಕೊಂಡಿದ್ದರು.

ಈಗಿನ ಚುನಾವಣೆ

     ಪ್ರಸ್ತುತ ನಡೆಯುತ್ತಿರುವ ಚುನಾವಣೆಯೇ ಒಂದು ವಿಭಿನ್ನ. ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಚುನಾವಣೆ ಎದುರಿಸುತ್ತಿವೆ. ಎರಡು ಪಕ್ಷಗಳು ಒಗ್ಗೂಡಿದರೆ ಬಲಿಷ್ಠ ಎಂದು ಮೇಲ್ನೋಟಕ್ಕೆ ಸುಲಭವಾಗಿ ಹೇಳಬಹುದಾದರೂ ಆಂತರಿಕವಾಗಿ ಅಷ್ಟು ಬಲಿಷ್ಠತೆ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಇದೇ ಪರಿಸ್ಥಿತಿ ಚುನಾವಣೆಯ ದಿನದವರೆಗೂ ಇರುವುದೋ?

       ಬದಲಾವಣೆಯಾಗುವುದೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಕಾಣುತ್ತಿದೆ. ಕಳೆದ ಬಾರಿಯಂತೆ ಈ ಬಾರಿಯೂ ಹಲವು ಕಡೆ ಮೋದಿ ಅಲೆ ಇದೆ. ಯುವಕರು ಹೆಚ್ಚಾಗಿ ಮೋದಿಯ ಮಂತ್ರ ಜಪಿಸುತ್ತಿದ್ದಾರೆ. ಇದು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಮೋದಿಗೆ ಜೈ ಎನ್ನುವ ಯುವಕರು ಎಲ್ಲಾ ಜಾತಿಗಳಲ್ಲೂ ಇದ್ದಾರೆ.

       ಹಿಂದಿನ ಚುನಾವಣೆಗಳಲ್ಲಿ ಸರಳವಾಗಿ ಮತ್ತು ಸುಲಭವಾಗಿ ಪರಿಗಣಿಸಿದಂತೆ ಸಾಂಪ್ರದಾಯಿಕ ಮತಗಳ ಸಂಖ್ಯೆ ಎಷ್ಟೆಂಬುದನ್ನು ಈಗ ಅಳೆಯಲು ಸಾಧ್ಯವಾಗುತ್ತಿಲ್ಲ. ಸಾಂಪ್ರಾದಾಯಿಕ ಮತಗಳು ವಿಭಜನೆಯಾಗುತ್ತಿರುವ ಲಕ್ಷಣಗಳನ್ನು ಕಳೆದ ಚುನಾವಣೆಯಿಂದೀಚೆಗೆ ಗಮನಿಸಬಹುದು. ಪಕ್ಷಗಳು ಈಗ ಯಾವುದೇ ಒಂದು ಜನಾಂಗ ಮತ್ತು ವರ್ಗಕ್ಕೆ ಸೀಮಿತಗೊಂಡಿಲ್ಲ. ಎಲ್ಲಾ ವರ್ಗದ ಮತದಾರರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಆಂತರಿಕ ಒಳಸುಳಿ ಹಿಂದಿನ ಚುನಾವಣೆಗಳಂತೆ ಈಗ ಬಹಿರಂಗಗೊಳ್ಳುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಾನಾಕಾರಣಗಳಿಂದ ಕೆಲವರು ಬಿಜೆಪಿಯತ್ತಾ ವಾಲುತ್ತಿರುವುದು ಕಂಡುಬರುತ್ತಿದೆ.

      ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳು ಗಣನೀಯ ಸಂಖ್ಯೆಯಲ್ಲಿ ಇದೆ. ಲಿಂಗಾಯಿತ ಸಮುದಾಯ ಹೆಚ್ಚು ಬಿಜೆಪಿಯನ್ನು ಬೆಂಬಲಿಸುತ್ತಿದೆ. ಈ ಸಮುದಾಯದಂತೆಯೇ ಒಕ್ಕಲಿಗರ ಸಮೂಹ ಜೆಡಿಎಸ್ ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರಗಳು ಇನ್ನೂ ಸಿಗುತ್ತಿಲ್ಲ. ಅಂದರೆ ಲಿಂಗಾಯತ ಸಮೂಹದಲ್ಲಿರುವ ಉತ್ಸಾಹ ಈ ಸಮುದಾಯದಲ್ಲಿ ಕಾಣದಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಒಕ್ಕಲಿಗರು ಹೆಚ್ಚಾಗಿ ಜೆಡಿಎಸ್ ಬೆಂಬಲಿಸುವವರಾದರೂ ಈ ಸಮುದಾಯದ ಹಲವರು ಕಾಂಗ್ರೆಸ್‍ನಲ್ಲಿ, ಬಿಜೆಪಿಯಲ್ಲೂ ಇದ್ದಾರೆ.

        ಮೈತ್ರಿಯಲ್ಲಿ ಸಮರ್ಪಕ ಹೊಂದಾಣಿಕೆ ಇಲ್ಲದಿರುವುದರಿಂದ ಬಲಿಷ್ಠ ಒಕ್ಕಲಿಗ ಸಮುದಾಯದ ಮತಗಳು ಹರಿದು ಹಂಚಿ ಹೋಗುವುವೆ ಎಂಬ ಕೂಗು ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಎರಡು ಪ್ರಬಲ ಜಾತಿಗಳ ಕಾಳಗ ಗಮನಿಸುತ್ತಿರುವ ಅಹಿಂದ ವರ್ಗ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹ. ಅಹಿಂದ ವರ್ಗದವರೂ ಸಹ ಮೂರೂ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ.

         ತುಮಕೂರು ಲೋಕಸಭಾ ಕ್ಷೇತ್ರ ಆರಂಭದಿಂದಲೂ ಗೊಂದಲದ ಗೂಡಾಗಿಯೇ ಹೊರಹೊಮ್ಮಿತು. ನಾಮಪತ್ರ ಸಲ್ಲಿಕೆಯ ಕೊನೆಯ ಅವಧಿಯಲ್ಲಿ ಜೆಡಿಎಸ್ ಪಕ್ಷದಿಂದ ದೇವೆಗೌಡರು ಉಮೇದುವಾರಿಕೆ ಸಲ್ಲಿಸಿದ್ದರು. ಇಲ್ಲಿ ದೇವೆಗೌಡರ ಸ್ಪರ್ಧೆ ಅನಿವಾರ್ಯವಾದ ಕಾರಣ ಚುನಾವಣೆ ನಿಗತ (ಟೇಕಾಫ್) ತಡವಾಯಿತೆಂದೆನಿಸುತ್ತದೆ. ಜಿಲ್ಲೆಯಲ್ಲಿ ಜೆಡಿಎಸ್ ಹಿಡಿತವಿದೆ ಎಂಬುದೇನೋ ಸತ್ಯ. ಆದರೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೊರಗೊರಗೇ ಹೋರಾಡುತ್ತಿರುವುದರಿಂದ ಪಕ್ಷ ಸಂಘಟನೆ, ಪ್ರಚಾರ ವ್ಯವಸ್ಥೆ ಮತದಾರರ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ.

         ಬಿಜೆಪಿ ಅಭ್ಯರ್ಥಿಯಾಗಿರುವ ಜಿ.ಎಸ್.ಬಸವರಾಜು ಮೂರು ಬಾರಿ ಕಾಂಗ್ರೆಸ್‍ನಿಂದಲೇ ತುಮಕೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರು. ಇವರಿಗೆ ಕ್ಷೇತ್ರದ ಒಳ ಅರಿವು ಚೆನ್ನಾಗಿ ಗೊತ್ತು. ಇವರ ಒಡನಾಟ ಪಕ್ಷಕ್ಕೆ ಸೀಮಿತವಾಗಿಲ್ಲ. ಪಕ್ಷದಾಚೆಯೂ ಜಿಎಸ್‍ಬಿ ಗುರುತಿಸಿಕೊಂಡಿದ್ದಾರೆ. ಎದುರು ಪಕ್ಷಗಳಲ್ಲಿನ ಮುಖಂಡರು, ಕಾರ್ಯಕರ್ತರೇ ಇದನ್ನು ಹೇಳುತ್ತಾರೆ. ಇವೆಲ್ಲವೂ ಧನಾತ್ಮಕ ಅಂಶಗಳಾಗಿದ್ದು ತನ್ನ ಪ್ರಚಾರ ವೈಖರಿಯನ್ನು ಇದೇ ನಿಟ್ಟಿನಲ್ಲಿ ಮುಂದುವರೆಸಿದ್ದಾರೆ ಮತ್ತು ಕಾರ್ಯಪ್ರವೃತ್ತರಾಗಿದ್ದಾರೆ. ಜಿಎಸ್‍ಬಿ ಅವರಿಗೆ ನೀರಿನ ವಿಷಯ ಮತ್ತೊಂದು ಧನಾತ್ಮಕ ಅಂಶವಾಗಿ ಪರಿಣಮಿಸಿದೆ.

        ರಾಜ್ಯದಲ್ಲಿ ಲಿಂಗಾಯಿತರ ನಾಯಕರಾಗಿ ಬಿ.ಎಸ್.ಯಡಿಯೂರಪ್ಪ, ಒಕ್ಕಲಿಗರ ನಾಯಕರಾಗಿ ಎಚ್.ಡಿ.ದೇವೆಗೌಡರು, ಕಾಂಗ್ರೆಸ್ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಗುರುತಿಸಲಾಗುತ್ತಿದೆ. ಲಿಂಗಾಯಿತರ ಮತಗಳನ್ನು ಬಿ.ಎಸ್.ಯಡಿಯೂರಪ್ಪ ಹೇಗೆ ಸೆಳೆಯುತ್ತಾರೋ ಹಾಗೆಯೇ ಒಕ್ಕಲಿಗರ ಮತಗಳನ್ನು ದೇವೆಗೌಡರು ಸೆಳೆಯುತ್ತಾರೆ. ಜೆಡಿಎಸ್ ಪಾಲಿಗೆ ಇದೊಂದು ಪ್ಲಸ್ ಪಾಯಿಂಟ್. ದೇವೆಗೌಡರು ನಮ್ಮ ಸಮುದಾಯದ ಪರಮೋಚ್ಛ ನಾಯಕ, ಅವರನ್ನು ಕೈಬಿಡಬಾರದು ಎಂಬ ಮನಸ್ಥಿತಿಯೇನಾದರೂ ಆ ಸಮುದಾಯದಲ್ಲಿ ಮೂಡಬಹುದೇ? ಕೊನೆ ಅವಧಿಯಲ್ಲಿ ಸಮರೋಪಾದಿಯಲ್ಲಿ ಈ ಕಾರ್ಯ ನಡೆಯಲಿದೆಯೇ ಎಂಬುದು ಕುತೂಹಲಕಾರಿ.

ನೋಟಾ (ನನ್ ಆಫ್ ದಿ ಅಬೊವ್)

          ಕಳೆದ ಬಾರಿ 12,934 ನೋಟಾ ಬಳಕೆಯಾಗಿತ್ತು. ಈ ಬಾರಿ ನೋಟಾ ಮತದಾನದ ಸಂಖ್ಯೆ ದುಪ್ಪಟ್ಟಾಗುವ ಲಕ್ಷಣಗಳು ಕಾಣುತ್ತಿವೆ. ಏನೆಲ್ಲಾ ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆದರೂ ಈ ಜಾಗೃತಿ ಎಲ್ಲಾ ಮತದಾರರ ವರ್ಗವನ್ನು ತಲುಪಲು ಸಾಧ್ಯವಾಗಿಲ್ಲ. ಇದಕ್ಕಿಂತ ಹೆಚ್ಚಾಗಿ ಈ ಬಾರಿಯ ಚುನಾವಣೆಯ ಬಗ್ಗೆಯೇ ಒಂದಷ್ಟು ಮತದಾರ ವರ್ಗ ಬೇಸರಿಸಿಕೊಂಡಂತೆ ಕಂಡುಬರುತ್ತಿದೆ. ಯಾರಿಗೂ ಮತದಾನ ಮಾಡಲು ಇಷ್ಟವಿಲ್ಲ ಎನ್ನುವವರಿಗೆ ಚುನಾವಣಾ ಆಯೋಗ ನೋಟಾ ಬಟನ್ ನೀಡಿರುವುದರಿಂದ ತಮ್ಮ ಅಸಮಾಧಾನವನ್ನು ಅಲ್ಲಿ ತೋರ್ಪಡಿಸಲೂಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link