ತುಮಕೂರು
ಹೂವಿಗೆ ಬೇಡಿಕೆ ಇಲ್ಲದೆ, ಬೆಲೆ ಇಲ್ಲದೆ, ಕಿತ್ತು ಮಾರುಕಟ್ಟೆಗೆ ತರಲಾಗದೆ, ಹೂವುಗಳು ಗಿಡದಲ್ಲೇ ಬಾಡಿ ಉದುರುತ್ತಿವೆ. ಹೂ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಕೊರೊನಾ ಲಾಕ್‍ಡೌನ್.ಲಾಕ್‍ಡೌನ್ ಆರಂಭವಾಗಿ ತಿಂಗಳಾಗುತ್ತಾ ಬಂದಿದೆ. ಆಗಿನಿಂದಬಹುತೇಕ ಎಲ್ಲಾ ವ್ಯವಹಾರ, ವಹಿವಾಟು ಇಲ್ಲ, ಮದುವೆ, ಜಾತ್ರೆ, ಸಂತೆಗಳಿಲ್ಲ, ಶುಭ ಸಮಾರಂಭಗಳಿಲ್ಲ. ದೇವರಿಗೆ ಪೂಜೆ ಪುನಸ್ಕಾರ ನೆರವೇರಿಸಲು ದೇವಸ್ಥಾನಗಳ ಬಾಗಿಲು ತೆರೆದಿಲ್ಲ. ಮತ್ಯಾಕೆ ಹೂವು ಅನ್ನುವಂತಾಗಿದೆ.
ಗಿಡದಿಂದ ಹೂವು ಕಿತ್ತು ಮಾರಾಟ ಮಾಡೋಣವೆಂದರೆ ಕೊಳ್ಳುವವರೇ ಇಲ್ಲದಂತಾಗಿದೆ. ಕೀಳುವ ಕೂಲಿಯೂ ಹುಟ್ಟದ ಸಂದರ್ಭದಲ್ಲಿ, ಜಾತ್ರೆ, ಉತ್ಸವ, ಪೂಜೆ, ಸಮಾರಂಭಗಳಲ್ಲಿ ಅಲಂಕಾರಕ್ಕೆ ಬಳಕೆಯಾಗಬೇಕಾಗಿದ್ದ ಹೂಗಳು ಬೆಲೆ ಕಳೆದುಕೊಂಡಿವೆ, ಬೆಳೆದವರು ಬೆಲೆ ಸಿಗದೆ ಬದುಕು ಕಳೆದುಕೊಂಡಿದ್ದಾರೆ.
ಇದು ಜಾತ್ರೆಗಳ ಸಮಯ, ಊರೂರಲ್ಲೂ ಜಾತ್ರೆ ಸಡಗರವಿರಬೇಕಾಗಿತ್ತು. ಕಲ್ಯಾಣ ಮಂಟಪಗಳ ಭರ್ತಿಯಾಗಿ ಮದುವೆ ಸಮಾರಂಭಗಳು ಸಡಗರದಿಂದ ನಡೆಯಬೇಕಾಗಿತ್ತು. ಪದಾರ್ಥಗಳ ಮಾರುವ, ಕೊಳ್ಳುವ ಸಂತೆಗಳು ನಡೆದು ಜನರ ಆರ್ಥಿಕ ಚಟುವಟಿಕೆ ಸುಧಾರಿಸಬೇಕಾಗಿತ್ತು. ಈ ವರ್ಷ ಯಾವುದೂ ಇಲ್ಲ, ಎಲ್ಲವೂ ಸ್ತಬ್ಧ. ಕೊರೊನಾ ಸೋಂಕು ಹರಡುವ ಭೀತಿಯಿಂದ ಸರ್ಕಾರ ದೇಶವನ್ನೇ ಲಾಕ್‍ಡೌನ್ ಮಾಡಿರುವ ಕಾರಣ ಎಲ್ಲವೂ ಬಂದ್ ಆಗಿವೆ.
ತರಕಾರಿ, ಆಹಾರ ಪದಾರ್ಥಗಳ ವಹಿವಾಟು ನಿಯಮಿತವಾಗಿ ನಡೆದಿದೆಯಾದರೂ ಇನ್ನುಳಿದ ವ್ಯವಹಾರ ಸ್ಥಗಿತಗೊಂಡಿದೆ. ಅದರಲ್ಲೂ ಹೂವಿನ ವಹಿವಾಟು ಈ ವರ್ಷ ಇಲ್ಲವೇ ಇಲ್ಲ ಎನ್ನವಂತಾಗಿ ಹೂವು ಬೆಳೆದವರ ಬದುಕು ಬಾಡಿ ಹೋಗಿದೆ.
ತುಮಕೂರು ಸಮೀಪದ ಊರುಕೆರೆ ಬಳಿಯ ಕಟ್ಟಿಗೆನಹಳ್ಳಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಕಾರ್ನಿಷನ್ ಹೂ ಬೆಳೆದಿರುವ ವಚನ್ ಆದಿತ್ಯ ಎಂಬುವವರು ಹೂ ಮಾರಾಟ ಮಾಡಲು ಸಾಧ್ಯವಾಗದೆ ಸುಮಾರು ಒಂದು ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ.ಮದುವೆ, ಮತ್ತಿತರ ಸಮಾರಂಭಗಳಲ್ಲಿ ಅಲಂಕಾರಕ್ಕೆ ಹೆಚ್ಚು ಬಳಕೆಯಾಗುತ್ತದ್ದ ಕಾರ್ನಿಷನ್ ಹೂಗಳನ್ನು ಈ ವರ್ಷ ಕೇಳುವವರೇ ಇಲ್ಲ. ಪ್ರತಿ ವರ್ಷ ಸ್ಥಳೀಯವಾಗಿ ಅಲ್ಲದೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಗಳಿಂದ ಈ ಹೂವಿಗೆ ಬೇಡಿಕೆ ಬರುತ್ತಿತ್ತು. ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ವರ್ಷ ಖರೀದಿ ಮಾಡುವವರೂ ಇಲ್ಲ, ಬೇಡಿಕೆಯೂ ಇಲ್ಲದಂತಾಗಿದೆ.
ಹೀಗಾಗಿ ಹೂಗಳನ್ನು ಗಿಡದಿಂದ ಕೀಳುವ ಪ್ರಯತ್ನ ಮಾಡಿಲ್ಲ, ಗಿಡದಲ್ಲೇ ಬಾಡಿ ಒಣಗಿ ಉದುರುತ್ತಿವೆ ಎಂದು ಹೇಳಿದರು. ಕಾರ್ನಿಷನ್ ಅಪರೂಪದ, ಸುಂದರ ಹೂ. ಈ ಹೂವು ಬೆಳೆಸಲು ನಿರ್ವಹಣೆ ಖರ್ಚು ಹೆಚ್ಚು ಬರುತ್ತದೆ. ಈ ಗಿಡಗಳಿಗೆ ರೋಗಗಳ ಬಾಧೆಯೂ ಹೆಚ್ಚು, ಕಾಳಜಿಯಿಂದ ನಿರ್ವಹಣೆ ಮಾಡಬೇಕು. ಎಲ್ಲಾ ಮಾಡಿ ಮುಗಿಸಿ ಈಗ ಗಿಡದಲ್ಲಿ ಹೂವು ಅರಳಿವೆ, ಇತ್ತು ಮಾರಾಟ ಮಾಡಿ ಹಣ ಗಳಿಸಲು ಸಾಧವಾಗದಂತ ದುಸ್ಥಿತಿ ಬಂದಿದೆ ಎಂದು ವಚನ್ ಆದಿತ್ಯ ನೋವು ತೋಡಿಕೊಂಡರು.
ಗುಬ್ಬಿಯ ರೈತ ರಾಮಚಂದ್ರ ಎಂಬುವವರು ಸುಮಾರು 3 ಲಕ್ಷ ವ್ಯಯ ಮಾಡಿ ಮೂರು ಎಕರೆ ಜಮೀನಿನಲ್ಲಿ 40 ಸಾವಿರ ಚೆಂಡುಹೂವು ಗಿಡ ನೆಟ್ಟು ಚೆಂಡುಹೂವು ಬೆಳೆದು, ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದಾರೆ. ಲಾಕ್‍ಡೌನ್ ಇಲ್ಲದಿದ್ದರೆ ಬೆಳೆದ ಹೂಗಳನ್ನು ಶಿವಮೊಗ್ಗ, ಬೆಂಗಳೂರು, ಮೈಸೂರು ಮಾರುಕಟ್ಟೆಗೆ ಕಳುಹಿಸಬೇಕಾಗಿತ್ತು. ಜಾತ್ರೆ, ಮದುವೆ ಸಂದರ್ಭವಾದ ಕಾರಣ ಹೂವಿಗೆ ಬಹಳ ಬೇಡಿಕೆ ಇರುತ್ತಿತ್ತು, ಬೆಳೆದವರೂ ಲಾಭ ಕಾಣುತ್ತಿದ್ದರು.
ಕೊರೊನಾ ಲಾಕ್‍ಡೌನ್‍ನಿಂದ ಹೂ ಬೆಳೆಗಾರರ ಕನಸಿಗೆ ಮಣ್ಣು ಬಿತ್ತು ಎಂದು ರಾಮಚಂದ್ರ ಹೇಳಿದ್ದಾರೆ. ತರಕಾರಿ ಖರೀದಿ ಮಾಡುವಂತೆ ತೋಟಗಾರಿಕೆ ಇಲಾಖೆ ಹೂವನ್ನು ಖರೀದಿ ಮಾಡುತ್ತಿಲ್ಲ. ತರಕಾರಿ ದಿನಬಳಕೆ ಪದಾರ್ಥವಾಗಿದೆ. ಹೂವು ಹಾಗಲ್ಲ, ಸಮಾರಂಭ, ಪೂಜೆ, ಹಬ್ಬ, ಆಚರಣೆಗೆ ಮಾತ್ರ ಹೂಗಳ ಬಳಕೆಯಾಗುವ ಕಾರಣ ಹೂವು ದಿನಬಳಕೆ ಪದಾರ್ಥವಾಗದೆ, ಬೇಡಿಕೆ, ಮಾರುಕಟ್ಟೆ ಇಲ್ಲದೆ ಹೂ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.
ಬಂಡವಾಳ ಹಾಕಿ, ನೀರು, ಗೊಬ್ಬರ ಹಾಕಿ ಕಷ್ಟಪಟ್ಟು ಬೆಳೆದ ಹೂವು ತೋಟದಲ್ಲೇ ಕಣ್ಣ ಮುಂದೆಯೇ ಒಣಗುತ್ತಿರುವುದು ರೈತರಿಗೆ ನೋಡಲಾಗದ ಪರಿಸ್ಥಿತಿ. ಕೆಲವರು ಹೂ ಬೆಳೆದು ಬದುಕು ಕಂಡುಕೊಂಡಿದ್ದರು, ಈಗ ಅವರ ಬದುಕು ಮಣ್ಣುಪಾಲಾಗಿದೆ. ತುಮಕೂರಿನ ಅಂತರಸನಹಳ್ಳಿ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣದ ಹೂವಿನ ಮಾರುಕಟ್ಟೆ ಗ್ರಾಹಕರಿಂದ ತುಂಬಿರುತ್ತಿತ್ತು. ಕೊರೊನಾ ಕಾರಣದಿಂದ ಹೂವಿನ ಮಾರುಕಟ್ಟೆಯನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ.
ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಅಂಗಡಿಗಳ ನಡುವೆ ಅಂತರ ಉಳಿಸಲು ಜಾಗದ ಅಗತ್ಯತೆ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಹೂವಿನ ಮಾರುಕಟ್ಟೆಗೆ ಸಮೀಪದ ಕೆಎಸ್‍ಆರ್‍ಟಿಸಿ ಡಿಪೋ ಎದುರಿನ ಜಾಗದಲ್ಲಿ ಅವಕಾಶ ಮಾಡಲಾಗಿದೆ. ಇಲ್ಲಿ ಹೂವಿನ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ, ಖರೀದಿಗೆ ಬರುವವರ ಸಂಖ್ಯೆಯೂ ಕಮ್ಮಿ. ಇಲ್ಲಿ ನೆರಳಿನ ವ್ಯವಸ್ಥೆ ಇಲ್ಲ, ಹೂವುಗಳು ಬಿಸಿಲಿಗೆ ಬೇಗ ಬಾಡಿಹೋಗುತ್ತವೆ. ಗ್ರಾಹಕರು ಹೆಚ್ಚು ಜನ ಬರುವುದಿಲ್ಲ, ಹೂವಿಗೆ ಬೇಡಿಕೆ ಇಲ್ಲ, ವ್ಯಾಪಾರವೂ ಇಲ್ಲ ಎಂದು ವ್ಯಾಪಾರಿಗಳು ಹೇಳಿದರು.
ಹೂವಿನ ಬೆಲೆ, ಬೇಡಿಕೆ ಇಲ್ಲದಿರುವ ಕಾರಣ ರೈತರು ಹೂವನ್ನು ಮಾರುಕಟ್ಟೆಗೆ ತರುತ್ತಿಲ್ಲ. ಕೊರೊನಾ ಭಯ ಮುಗಿಯುವವರೆಗೂ ಹೂವು ಬೆಳೆಗಾರರಿಗೂ ಲಾಭವಿಲ್ಲ, ಮಾರಾಟ ಮಾಡುವ ನಮಗೂ ಆದಾಯವಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
