ಜಿ.ಪಂ ಸಿಇಓಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಸಿಎಂ…!

ಬೆಂಗಳೂರು

    ರಾಜ್ಯದ ಯಾವುದೇ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಭುಗಿಲೆದ್ದರೆ ಸಂಬಂಧಪಟ್ಟ ಜಿಲ್ಲಾಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಈ ಬಾರಿ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ ಎಂದವರು ಹೇಳಿದ್ದಾರೆ.

    ಇಂದಿಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಿದ್ಧರಾಮಯ್ಯ:ಮಳೆಯ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಿ ಎಂದು ನುಡಿದರು.

    ನೀರು ಪೂರೈಕೆಗೆ ಸಮಸ್ಯೆ ಆಗಬಾರದು.ಇದಕ್ಕಾಗಿ ಬೇರೆ ನೆಪ ಕೊಡಬಾರದು ಎಂದ ಅವರು,ಉಳಿದದ್ದೆಲ್ಲ ಏನೇ ಇರಲಿ,ಆದರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಹೇಳಿದರು.

    ರಾಜ್ಯದ ಯಾವುದೇ ಭಾಗಗಳಿಂದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೇಳಿ ಬಂದರೆ ನಿಮ್ಮನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.

   ಕುಡಿಯವ ನೀರಿನ ಸಮಸ್ಯೆ ಎದುರಾಗಿದೆ ಎಂಬ ಕುರಿತು ಮಾಹಿತಿ ಸಿಕ್ಕಿದರೆ,ಇಪ್ಪತ್ನಾಲ್ಕು ಗಂಟೆಯಲ್ಲಿ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಿ.ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕ್ಷೇತ್ರದಲ್ಲಿ ತಿರುಗಿ ಕುಡಿಯುವ ನೀರಿನ ಸಮಸ್ಯೆ ಎಲ್ಲಿದೆ ಎಂಬುದನ್ನು ಗಮನಿಸಿ.

   ಜಲಜೀವನ್ ಮಿಷನ್ ಯೋಜನೆಯಲ್ಲಿ ಅಳವಡಿಸಲಾದ ನೀರಿನ ಪೈಪ್ ಲೈನ್ ಗಳ ಗುಣಮಟ್ಟವನ್ನು ಪರೀಕ್ಷಿಸಿ ಎಂದು ಸೂಚನೆ ನೀಡಿದ ಅವರು,ಕಳೆದ ಕೆಲ ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಇದಕ್ಕೆ ಪೂರ್ವಮುಂಗಾರಿನಲ್ಲಾದ ಕೊರತೆಯೇ ಕಾರಣ.

     ಕರ್ನಾಟಕದಲ್ಲಿ ಜೂನ್ ಹತ್ತರಂದು ಮುಂಗಾರು ಆರಂಭವಾಗಿದೆ.ಆದರೆ ಇಲ್ಲಿಯವರೆಗೆ ನಮಗೆ ಶೇಕಡಾ 67 ರಷ್ಟು ಮಳೆಯ ಕೊರತೆಯಾಗಿದೆ.ಮುಂದೆ ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ.ಆದರೆ ನೀವು ಸದಾ ಕಾಲ ಜಾಗರೂಕರಾಗಿರಿ ಎಂದು ಸೂಚನೆ ನೀಡಿದರು.

    ಕೊಪ್ಪಳ ಜಿಲ್ಲೆಯಲ್ಲಿದ್ದಾಗ ಕಲುಷಿತ ನೀರಿನ ಸಮಸ್ಯೆ ಸರಿಪಡಿಸುವ ಬಗ್ಗೆ ಆದೇಶ ಮಾಡಿದ್ದೇನೆ.ಜಲಜೀವನ್ ಮಿಷನ್ ಅಡಿ ಸುಸ್ಥಿರ ನೀರಿನ ಮೂಲ ಇರುವ ಯೋಜನೆಗಳನ್ನು ಗುರುತಿಸಿ ಅವುಗಳನ್ನು ಆದ್ಯತೆಯ ಮೇಲೆ ಅನುಷ್ಟಾನಗೊಳಿಸುವಂತೆ ಸಿದ್ಧರಾಮಯ್ಯ ಸೂಚಿಸಿದರು.

    ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮತ್ತು ರಾಜ್ಯದಲ್ಲಿ ಅಳವಡಿಸಿರುವ ಪ್ಲಾಂಟುಗಳ ಕುರಿತು ಆಡಿಟ್ ಮಾಡಿಸುವಂತೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಆದೇಶ ನೀಡಿದರು.

   ಉಸ್ತುವಾರಿ ಸಚಿವರೊಂದಿಗೆ ಸಂಬಂಧಪಟ್ಟ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿದ್ದು,ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ವಿವರ ನೀಡುತ್ತಿರಬೇಕು,ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರ ನಿಮಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap