ತುಮಕೂರು:
ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸ ಮಾಡಿರುವ ವಿ.ರಾಮಮೂರ್ತಿ ಜಗತ್ತಿನ ಹೆಸರಾಂತ ತಂತ್ರಜ್ಞರಲ್ಲಿ ಒಬ್ಬರು. ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡುವುದು ಅತ್ಯಂತ ಕ್ಲಿಷ್ಟಕರವಾದ ಕೆಲಸ, ಅಂತಹ ಕೆಲಸಗಳಲ್ಲಿ ಸಿದ್ದಹಸ್ತರಾದ ವಿ.ರಾಮಮೂರ್ತಿಯವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿ ನಿರಂತರ ರಂಗ ಚಟುವಟಿಕೆ ಮಾಡುತ್ತಿರುವ ಡಮರುಗ ತಂಡಕ್ಕೆ ಕಲಾ ಕುಟುಂಬದವರಾದ ನಾವುಗಳೆಲ್ಲಾ ಆಭಾರಿಯಾಗಿರಬೇಕು ಎಂದು ಹಿರಿಯ ರಾಷ್ಟ್ರೀಯ ನಾಟಕ ಶಾಲಾ ಪದವೀಧರರಾದ ಸುರೇಶ್ ಆನಗಳ್ಳಿ ತಿಳಿಸಿದರು.
ಇವರು ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಡಮರುಗ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ರಂಗಾಯಣ ರಂಗತೇರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಹಂಪೆಯ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕತಿ ಯೋಜನಾ ನಿರ್ದೇಶಕರಾದ ಡಾ. ಎಸ್.ಪಿ.ಪದ್ಮಪ್ರಸಾದ್ ಮಾತನಾಡುತ್ತಾ ಒಂದು ಪುಟ್ಟ ಹಳ್ಳಿಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿ ನಿರಂತರ ರಂಗ ಚಟುವಟಿಕೆ ನೆಡೆಸುತ್ತಿರುವ ಡಮರುಗ ರಂಗ ತಂಡದ ಆಸರೆಗೆ ಪ್ರಜ್ಞಾವಂತ ನಾಗರೀಕರಾದ ನಾವುಗಳೆಲ್ಲಾ ನಿಲ್ಲಬೇಕಿದೆಯೆಂದರು. ಬೆಳಕಿನ ವ್ಯವಸ್ಥೆಗಾಗಿ ಹತ್ತು ಸಾವಿರ(10000)ರೂಗಳ ನೆರವು ನೀಡಿದರು.
ರಂಗಾಯಣದ ನಿರ್ದೇಶಕರಾದ ಡಾ.ಎಂ.ಗಣೇಶ್ ಮಾತನಾಡುತ್ತಾ ಒಂದು ಇಡೀ ಕುಟುಂಬ ರಂಗಕುಟುಂಬವಾಗಿರುವುದು ತುಮಕೂರಿನ ರಂಗಭೂಮಿಗೆ ದೊಡ್ಡ ಕೊಡುಗೆ ಎಂದರು. ಮೂರು ದಿನಗಳ ಕಾಲ ಊಟ, ವಸತಿ, ಸಂಯೋಜನೆ ನುರಿತ ರಂಗತಜ್ಞರನ್ನ ಆಹ್ವಾನಿಸಿ ನಮ್ಮ ತಂಡದ ಕಲಾವಿದರಿಗೂ ಕಲಿಕೆಯ ದೃಷ್ಟಿಯಿಂದ ನೆರವಾದ ಡಮರುಗ ರಂಗತಂಡದ ಎಲ್ಲಾ ಸದಸ್ಯರುಗಳಿಗೆ ಶಿವಮೊಗ್ಗ ರಂಗಾಯಣದ ಕಲಾವಿದರು, ತಂತ್ರಜ್ಞರು, ಆಡಳಿತಾಧಿಕಾರಿಗಳು ಎಲ್ಲರ ಪರವಾಗಿ ಅಭಿನಂದಿಸುತ್ತೇವೆಂದರು. ನಂತರ ರಾಷ್ಟ್ರೀಯ ನಾಟಕ ಶಾಲಾ ಪದವೀಧರರಾದ ಪಾಂಡಿಚೆರಿಯ ಸವಿತಾರಾಣಿ ನಿರ್ದೇಶನದಲ್ಲಿ “ಟ್ರಾನ್ಸ್‍ನೇಷನ್” ನಾಟಕ ಪ್ರಯೋಗಿಸಲಾಯಿತು. ಡಮರುಗ ನಿರ್ದೇಶಕರಾದ ಮೆಳೇಹಳ್ಳಿ ದೇವರಾಜ್ ಕಲಾವಿದರಿಗೆ, ಆಗಮಿಸಿದ ಅತಿಥಿಗಳಿಗೆ ಕಿರುಹೊತ್ತಿಗೆಗಳನ್ನು ನೀಡಿ ಗೌರವಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ