ಹಾನಗಲ್ಲ :
ಬರೀ ಸುಳ್ಳು ಹೇಳಿಕೊಂಡು ಜನರ ಭಾವನೆಗಳನ್ನು ಕೆಣಕಿ, ಧ್ವೇಷ ಹುಟ್ಟಿಸಿ ಸ್ವಾರ್ಥ ಸಾಧನೆಗೆ ಹಾತೊರೆಯುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಂತೆ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಕರೆ ನೀಡಿದರು.ಹಾನಗಲ್ಲ ತಾಲೂಕಿನ ಕೂಸನೂರು, ಹಾವಣಗಿ, ವೀರಾಪುರ, ಬಸಾಪುರ, ಸೋಮಾಪುರ, ಕನ್ನೇಶ್ವರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರ ಮತಯಾಚಿಸಿ ಅವರು ಮಾತನಾಡಿದರು.
ಹಾವೇರಿ ಕ್ಷೇತ್ರದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸುವ ಅವಕಾಶಗಳಿದ್ದರೂ ಕೂಡ ಪ್ರಯತ್ನ ಮಾಡುವಲ್ಲಿ ಸಂಸದ ಶಿವಕುಮಾರ ಉದಾಸಿ ಅವರ ವೈಫಲ್ಯತೆ ಎದ್ದು ಕಾಣುತ್ತಿದೆ. ಕ್ಷೇತ್ರದ ಜನರ ಜೊತೆಗಿದ್ದು, ಅವರ ಕಷ್ಟ-ಸುಖಗಳಲ್ಲಿ ಸಂಸದರು ಭಾಗಿಯಾಗಿದ್ದು ವಿರಳ. ಇಂಥ ಸಂಸದರ ಅಗತ್ಯ ಈ ಕ್ಷೇತ್ರಕ್ಕಿಲ್ಲ ಎಂದು ಹೇಳಿದ ಅವರು, ಕಳೆದ ಎರಡು ಅವಧಿಯಿಂದ ಸಂಸದರ ಕಾರ್ಯವೈಖರಿ ನೋಡಿ ಜನತೆ ಬೇಸತ್ತಿದ್ದಾರೆ. ಈ ಬಾರಿ ಬದಲಾವಣೆಗೆ ಬಯಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಗೆಲುವು ನಿಶ್ಚಿತ ಎಂದರು.
ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ ಮಾತನಾಡಿ, ಭಾರತದ ಬಹು ಸಂಸ್ಕತಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಅಳುವವರ ತಪ್ಪನ್ನು ಪ್ರಶ್ನಿಸುವ ನಮ್ಮೆಲ್ಲರ ಹಕ್ಕಿಗೆ ಬಿಜೆಪಿಯಿಂದಾಗಿ ಧಕ್ಕೆ ಉಂಟಾಗಿದೆ. ಲೋಕಸಭೆ ಚುನಾವಣೆ ಮೂಲಕ ನಾವೆಲ್ಲರೂ ಉತ್ತರ ನೀಡಬೇಕಾಗಿದ್ದು, ಬಿಜೆಪಿ ಸೋಲಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಾಸನ ಗ್ರಾಮದ ಹಿರಿಯ ಮುಖಂಡ ವೀರಪ್ಪ ಹಲಗಜ್ಜನವರ ಸೇರಿದಂತೆ ಹಲವರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುಟ್ಟಪ್ಪ ನರೇಗಲ್, ರಂಗನಗೌಡ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ವನಜಾಕ್ಷಿ ಪಾಟೀಲ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಸದಸ್ಯ ತಿಪ್ಪಣ್ಣ ದೊಡ್ಡಕೋವಿ, ಮುಖಂಡರಾದ ಅನಂತವಿಕಾಸ್ ನಿಂಗೋಜಿ, ಗೀತಾ ಪೂಜಾರ, ಬಸವರಾಜ್ ಹಾದಿಮನಿ, ದಾನಪ್ಪ ಗಂಟೇರ, ವಸಂತ ವೆಂಕಟಾಪೂರ, ಮಹೇಶ ಬಿದರಮಳಿ, ಪುಟ್ಟಪ್ಪ ವೆಂಕಟಾಪೂರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.