ಬೆಂಗಳೂರು ನಗರ ಜಿಲ್ಲೆ : ರಾಜ್ಯಾದ್ಯಂತ ಮಳೆ ಹೆಚ್ಚಾಗಿದೆ, ಮಳೆಗಾಲ ಆರಂಭವಾಗಿದೆ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಆನೆಕಾಲು ರೋಗಗಳು ಹರಡದಂತೆ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂಗತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ನಿಯಂತ್ರಣಾ ಚಟುವಟಿಕೆಗಳ ಜಿಲ್ಲಾ ಮಟ್ಟದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗಳು ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ನಗರದಲ್ಲಿರುವ ಗುಂಡಿ ಮತ್ತು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಟೈರ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿದ್ದು, ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಜಾಗೃತಿವಹಿಸಬೇಕು, ನೀರು ಸಂಗ್ರಹವಾಗುವ ಗುಂಡಿಗಳನ್ನು ಮುಚ್ಚಬೇಕು. ಖಾಲಿ ನಿವೇಶನ ಗಳಲ್ಲಿಯೂ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೋಗಗಳು ಉಲ್ಪಣವಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಭುಜಬಲಿ ಮಾತನಾಡಿ ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 16 ಡೆಂಗ್ಯೂ, 25 ಚಿಕುನ್ ಗುನ್ಯಾ, 28 ಮಲೇರಿಯಾ ಪ್ರಕರಣಗಳು ಕಂಡು ಬಂದಿದ್ದು ಇಲಾಖೆಯ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕರಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಂತೆ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ, ಉತ್ತಮ ಚರಂಡಿ ವ್ಯವಸ್ಥೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಿ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಣೆ, ಹದಿನೈದು ದಿನಗಳಿಗೊಮ್ಮೆ ಆರೋಗ್ಯ ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ, ನೀರಿನ ಶೇಖರಣಾ ಪಾತ್ರೆ ತಾಣಗಳನ್ನು ಸೊಳ್ಳೆಗಳು ನುಸುಳದಂತೆ ಮುಚ್ಚಿಡುವುದು, ಹೆಚ್ಚು ದಿನಗಳ ಕಾಲ ನೀರು ಶೇಖರಿಸಿದಂತೆ ನೋಡಿಕೊಳ್ಳುವುದು, ಅನಿವಾರ್ಯವೆನಿಸಿದರೆ ನೀರನ್ನು ಶೋಧಿಸಿ ಮುಚ್ಚಳ ಮುಚ್ಚಿ ಬಳಸುವುದು, ತ್ಯಾಜ್ಯ ವಸ್ತುಗಳ ವಿಲೇವಾರಿ, ವಾರಕ್ಕೊಮ್ಮೆ ಒಣ ದಿನಾಚರಣೆ, ಸ್ವಯಂ ವೈದ್ಯಕೀಯದ ಬದಲು ಆರೋಗ್ಯ ಕಾರ್ಯಕರ್ತರ ಸಲಹೆ ಚಿಕಿತ್ಸೆ ಸೇರಿದಂತೆ ರೋಗ ನಿಯಂತ್ರಣಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ಇತರೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
