ಕೂಡ್ಲಿಗಿ:
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ನಿತೀಶ್ ಗುರುವಾರ ಪರಿಶೀಲಿಸಿದರು..ತಾಲ್ಲೂಕಿನ ಜರಿಮೆಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೆದ್ದಲಗಟ್ಟೆ, ಎ. ದಿಬ್ಬದಹಳ್ಳಿ ಗ್ರಾಮಗಳಲ್ಲಿ ರೈತರು ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡುತ್ತಿದ್ದ ಕೃಷಿಹೊಂಡ, ಬದು ನಿರ್ಮಾಣ ಹಾಗೂ ಭೂ ಅಭಿವೃದ್ಧಿ ಕೆಲಸಗಳ ಸ್ಥಳಕ್ಕೆ ಭೇಟಿ ನೀಡಿದ ನಿತೀಶ್, ಕಾಮಗಾರಿಗೆ ಸಂಬಂಧಿಸಿದ ಮಾನವ ದಿನಗಳು, ಕೂಲಿ ಕಾರ್ಮಿಕರ ವಿವರ, ಕೂಲಿ ಪಾವತಿ ಹಾಗೂ ಇತರೆ ವಿವರಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಗುಂಡುಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಡ್ಲಕನಹಳ್ಳಿಯಲಿ ಕೃಷಿ ಹೊಂಡ, ಕೆರೆ ಹೂಳೆತ್ತುವ ಕಾಮಗಾರಿ ನೋಡಿದರು. ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರ ಹೊಲದಲ್ಲಿ ಚಕ್ ಡ್ಯಾಂ ವೀಕ್ಷಣೆ ಮಾಡಿದರು.ನಂತರ ರೈತರೊಂದಿಗೆ ಸಂವಾದ ನಡೆಸಿದ ನಿತೀಶ್, ಉದ್ಯೋಗ ಖಾತ್ರಿಗೆ ಯೋಜನೆಗೆ ಸಂಬಂಧಿಸಿದಂತೆ ಉತ್ತಮ ಕೆಲಸವಾಗಿದೆ.
ಆದರೂ ತಾಲ್ಲೂಕಿನ ಕೂಲಿ ಕಾರ್ಮಿಕರು ಬೇರೆ ಕಡೆಗೆ ವಲಸೆ ಹೋಗದಂತೆ ಈ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದ್ದು, ಕೂಲಿ ಕಾರ್ಮಿಕರು ಮತ್ತು ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
