ಹಾವೇರಿ
ತಂಬಾಕು ಸೇವನೆ, ಧೂಮಪಾನ ಕ್ಯಾನ್ಸರ್‍ನಂತಹ ಮಾರಣಾಂತಿಕವಾದ ಕಾಯಿಲೆಗೆ ಮನುಷ್ಯ ಬಲಿಯಾಗಬೇಕಾಗುತ್ತದೆ. ಇದರಿಂದ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಠಿಣವಾದ ಬದುಕನ್ನು ಎದುರಿಸಬೇಕಾಗುತ್ತದೆ. ಈ ಕುರಿತಂತೆ ಸಾರ್ವಜನಿರಕಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಚ್.ಎಸ್.ರೇಣುಕಾದೇವಿ ಅವರು ಹೇಳಿದರು.
ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆಸ್ಪತ್ರೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಆಯೋಜಿಸಿದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಡಿ, ಸಿಗರೇಟ್, ಗುಟ್ಕಾ ಮತ್ತು ಹೊಗೆಸೊಪ್ಪು ಸೇವನೆಯಿಂದ ಒಂದು ಹೆಜ್ಜೆ ಮುಂದುಹೋಗಿ ಇಂದಿನ ಯುವ ಜನಾಂಗ ಇ ಸಿಗರೇಟ್ ಸೇವನೆಗೆ ಮಾರುಹೋಗುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಂಬಾಕು, ಧೂಮಪಾನದ ದುಷ್ಪರಿಣಾಮ ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸಬೇಕು. ಒಳ್ಳೆಯದು ಹಾಗೂ ಕೆಡಕು ಕುರಿತು ಅರ್ಥಮಾಡಿಸಬೇಕು. ಪ್ರತಿ ಮನೆಯಿಂದಲೇ ಈ ಕೆಲಸವಾಗಬೇಕು. ಇಂತಹ ದುಶ್ಚಟಗಳಿಗೆ ಪೂರ್ಣ ವಿರಾಮ ಹಾಕಬೇಕು. ತಂಬಾಕು ರಹಿತ ದಿನದ ಬದಲು ತಂಬಾಕು ನಿಷೇಧ, ನಿಭರ್ಂಧ ದಿನ ಎಂದು ಆಚರಿಸುವುದು ಔಚಿತ್ಯಪೂರ್ಣವಾಗಿದೆ ಎಂದು ಹೇಳೀದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಅವರು ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ದಿನನಿತ್ಯ ಸಾವು-ನೋವು ನೋಡುತ್ತಿದ್ದೇವೆ. ವಿಶ್ವದಾದ್ಯಂತ ಪ್ರತಿ 6 ಸೆಕೆಂಡಿಗೆ ಒಬ್ಬರು ಮರಣಹೊಂದುತ್ತಿದ್ದಾರೆ. ಸಾಮೂಹಿಕ ಜಾಗೃತಿಯ ಮೂಲಕ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಕೆ.ವಿದ್ಯಾಶ್ರೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕುಮಾರಿ ರಾಜೇಶ್ವರಿ ಚಕ್ಕಲೇರ, ಜಿಲ್ಲಾ ಮಾನಸಿಕ ರೋಗ ತಜ್ಞ ಡಾ.ವಿಜಯಕುಮಾರ ಬಳಿಗಾರ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ಡಾ.ಸಂತೋಷ ದಡ್ಡಿ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ತಹಶೀಲ್ದಾರ ಶಿವಕುಮಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ಡಾ.ತಿಪ್ಪೇಶ ನಾಯಕ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಉಪಸ್ಥಿತರಿದ್ದರು.
ಜಾಗೃತಿ ಜಾಥಾ:
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತ ಜಾಗೃತಿ ಜಾಥಾಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.