ತಮಿಳು ನಾಡಿಗೆ ಕಾವೇರಿ : ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು:

           ಸರಣಿ ಟ್ವೀಟ್​ಗಳನ್ನು ಮಾಡಿರುವ ಕುಮಾರಸ್ವಾಮಿ.. ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಅಡಿ ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್, ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು, ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ. ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ. ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ನಮ್ಮ ಹೊಟ್ಟೆಗೇ ಹಿಟ್ಟಿಲ್ಲ. ಹೀಗಿದ್ದೂ ಕರ್ನಾಟ ಸರ್ಕಾರ ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೊರಟಿದೆ ಎಂದು ಗುಡುಗಿದ್ದಾರೆ.

    ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ನೀರು ಹರಿಸುವ ಮೂಲಕ ತಮಿಳುನಾಡು ಜತೆ ರಾಜಕೀಯ ಚೌಕ ಬಾರ ಆಡುತ್ತಿದೆ. ಇದೇನು ಇನ್ನೊಂದು ಗ್ಯಾರಂಟಿನಾ? 2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನು ನೆರೆರಾಜ್ಯಕ್ಕೆ ಅಡವಿಟ್ಟಿದೆ ಹಸ್ತಪಕ್ಷ ಸರ್ಕಾರ. ತಮಿಳುನಾಡಿಗೆ ಬೆದರಿ ಶರಣಾಗಿದೆ! ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಯಿಂದಲೇ ಹೊರ ನಡೆದ, ರಾಜ್ಯದ ವಿರುದ್ಧ ಸುಪ್ರೀಂ ಕೋರ್ಟ್​ಗೆ ಅರ್ಜಿ ಹಾಕಿದ ರಾಜ್ಯದೆದುರು ದೈನೇಸಿಯಾಗಿ ಮಂಡಿಯೂರಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ಕೊಟ್ಟ ಕೊಡಲಿಪೆಟ್ಟಾಗಿದೆ ಎಂದಿದ್ದಾರೆ.

    1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ದೇವೇಗೌಡ ಜೀವವನ್ನೇ ತೇದರು. ಕಾವೇರಿಗಾಗಿ ಹಿಂದಿನ ಪ್ರತೀ ಸರಕಾರವೂ ಕೇಂದ್ರಕ್ಕೆ ಸಡ್ಡು ಹೊಡೆದು ತಮಿಳುನಾಡು ಅಬ್ಬರಕ್ಕೆ ಅಂಕೆ ಹಾಕಿದ್ದವು. ಇಂಥ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲೇ ಈ ಸರ್ಕಾರವು ನೆರೆರಾಜ್ಯ ಸುಪ್ರೀಂ ಕೋರ್ಟ್​ಗೆ ಅರ್ಜಿ ಹಾಕಿದಾಕ್ಷಣ ಬೆದರಿ ಕೈಚೆಲ್ಲಿದೆ. ಸಂಕಷ್ಟ ಸ್ಥಿತಿಯ ಬಗ್ಗೆ ಕಾಂಗ್ರೆಸ್​ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮನವರಿಕೆ ಮಾಡಿಕೊಡಲಿಲ್ಲ ಯಾಕೆ? ಕಾನೂನು ತಜ್ಞರ ಜತೆ, ಪ್ರತಿಪಕ್ಷ ಮುಖಂಡರ ಜತೆ ಸಮಾಲೋಚನೆ ನಡೆಸದೇ ವಾಯುವೇಗದಲ್ಲಿ ತಮಿಳುನಾಡಿಗೆ ನೀರು ಹರಿಸಿದ ಒಳಗುಟ್ಟೇನು? ಜನತೆಗೆ ಗೊತ್ತಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಯವರು, ತಾವು ಮಂತ್ರಿ ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ? ಅವರು ಸ್ಪಷ್ಟಪಡಿಸಬೇಕಿದೆ. ಕಾವೇರಿ ಕೀಲಿ ಕೇಂದ್ರ ಬಳಿ ಇದೆ ಎಂದಾದರೆ ಇವರ ಹೊಣೆ ಏನು? ಆ ಕೀಲಿ ಈಗ ಸ್ಟಾಲಿನ್ ಅವರ ಕೈಯ್ಯಲ್ಲಿದೆಯೋ ಅಥವಾ ಸೋನಿಯಾ ಗಾಂಧಿ ಅವರ ಕೈಯ್ಯಲ್ಲಿದೆಯೋ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

    ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದು ರೈತರಿಗೆ ಉಪ ಮುಖ್ಯಮಂತ್ರಿಗಳು ಹೇಳಿರುವುದು ದರ್ಪ, ದುರಹಂಕಾರದ ಪರಾಕಾಷ್ಠೆ. ನಿತ್ಯವೂ ಸಾವಿರಾರು ಕ್ಯೂಸೆಕ್ ಕಾವೇರಿ ನೀರು ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ. ಇನ್ನೂ 10 ಟಿಎಂಸಿ ಬಿಡುತ್ತೇವೆ ಎಂದು ಅವರು ಹೇಳಿರುವುದು ಸರಿಯಲ್ಲ. ಕನ್ನಡಿಗರು ಕೊಟ್ಟ ಪೆನ್ ಈಗ ಗನ್ ರೂಪ ತಳೆದಿದೆಯಾ ಹೇಗೆ? ಕನ್ನಡಿಗರನ್ನು ಕೇಳಿಕೇಳಿ ಪಡೆದುಕೊಂಡ ಪೆನ್ ಈಗ ಪೆಚ್ಚಗೆ, ತೆಪ್ಪಗೆ ಮಲಗಿದೆಯಾ? ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವೇ ರಾಜ್ಯದ ಜಲ ಸಂಕಷ್ಟದ ಬಗ್ಗೆ ಸಭೆಯಲ್ಲೇ ಅಂಕಿ-ಅಂಶ ಸಮೇತ ಹೇಳಿದೆ. ಪಾಪ.. ಜಲ ಸಂಪನ್ಮೂಲ ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap