ಬ್ಯಾಡಗಿ:
ಬೆಳೆವಿಮೆ ಬಾಕಿ ಹಣ ಬಿಡುಗಡೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ವಿಮೆ ಕಂಪನಿ ಪ್ರತಿನಿಧಿಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನೂರಾರು ರೈತರು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಎದುರು ಹಠಾತ್ ಪ್ರತಿಭಟನೆ ನಡೆಸಿದರು.
ಕಳೆದ ಆ.21 ರಂದು ಕರೆಯಲಾಗಿದ್ದ ಸಭೆಗೆ ಯುನಿವರ್ಸಲ್ ಸ್ಯಾಂಪೋ ವಿಮೆ ಕಂಪನಿ ಪ್ರತಿನಿಧಿಗಳು ಗೈರಾಗಿದ್ದು ಅನಿವಾರ್ಯವಾಗಿ ಆ.29ಕ್ಕೆ ಮುಂದೂಡಲಾಗಿತ್ತು ಆದರೆ ಇಂದೂ ಸಹ ಸಭೆಗೆ ಗೈರಾಗಿದ್ದು ಸಹಜವಾಗಿ ರೈತರನ್ನು ಆಕ್ರೋಶಗೊಳ್ಳುವಂತೆ ಮಾಡಿದ್ದು ಇಂದಿನ ಪ್ರತಿಭಟನೆಗೆ ಕಾರಣವೆನ್ನಲಾಗುತ್ತಿದೆ.
ಸಹಾಯಕ ಕೃಷಿ ಅಧಿಕಾರಿಗೆ ಘೇರಾವ್:ಸಭೆಯಲ್ಲಿ ಪಾಲ್ಗೊಳ್ಳಲು ಉದ್ದೇಶದಿಂದ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಮೊದಲು ಪಟ್ಟಣದ ಸ್ಟೇಶನ್ ರಸ್ತೆಯಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಬಳಿ ಜಮಾಯಿಸಿದ್ದರು, ಆದರೆ ಇಂದೂ ಸಹ ವಿಮೆ ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆ ಸಹನೆ ಕಳೆದುಕೊಂಡ ರೈತರು ಕೃಷಿ ಅಧಿಕಾರಿ ಅಮೃತೇಶ್ಗೆ ಘೇರಾವ್ ಹಾಕಿದರಲ್ಲದೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮೆರವಣಿಗೆ ನಡೆಸಿದ ರೈತರು: ಕೃಷಿ ಅಧಿಕಾರಿ ಅಮೃತೇಶ ಅವರ ಅಸಹಾಯಕತೆ ಹಾಗೂ ಬೇಜವಾಬ್ದಾರಿ ವರ್ತನೆಯಿಂದ ಆಕ್ರೋಶಗೊಂಡ ರೈತರು ಕೃಷಿ ಇಲಾಖೆಯಿಂದ ತಹ ಶೀಲ್ದಾರ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು, ಈ ಸಂದರ್ಭದಲ್ಲಿ ಸರ್ಕಾರ ಸೇರಿದಂತೆ ವಿಮೆ ಕಂಪನಿ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಹಾಕಿದರಲ್ಲದೇ ತಹಶೀಲ್ದಾರ ಕಛೇರಿ ಎದುರು ಧರಣಿ ನಡೆಸಲಾರಂಭಿಸಿದರು.
ಮನುಷ್ಯತ್ವ ಕಳೆದುಕೊಂಡಿದೆ ಜಿಲ್ಲಾಡಳಿತ: ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಅತೀವೃಷ್ಟಿ ಅನಾವೃಷ್ಟಿಗಳ ಕರಿನೆರಳು ಕೃಷಿ ಮೇಲೆ ಬಿದ್ದಿರುವ ಪರಿಣಾಮ ಮಾಡಿದ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ಇವುಗಳ ನಡುವೆಯೇ ಕಳೆದ 2015-16 2016-17, 2017-18 ಮೂರು ವರ್ಷಗಳ ಜಿಲ್ಲೆಯ ಅಷ್ಟೂ ರೈತರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾಗಿದ್ದ ಸುಮಾರು 11 ಕೋಟಿ ರೂ.ವಿಮೆ ಹಣ ಪಾವತಿಯಾಗಿಲ್ಲ, ಹೀಗಿದ್ದರೂ ಸಹ ರೈತರನ್ನು ತಾಲೂಕ ಕೇಂದ್ರಕ್ಕೆ ಕರೆಸುವುದು ಮತ್ತೆ ಬರಿಗೈಯಿಂದ ಕಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರೈತರಿಗೆ ಅವಮಾನ ದಿನದ ಕೂಲಿ ಕೊಡಿ:ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ವಿಮಾ ಕಂಪನಿಗಳು ಬಹುದೊಡ್ಡ ನಾಟಕ ಕಂಪನಿಗಳಂತೆ ವರ್ತಿಸುತ್ತಿವೆ, ಅದರ ಪ್ರತಿನಿಧಿಗಳು ಕಳೆದ ಜು.6 ರಂದು ವಿಮಾ ಅದಾಲತ್ ನಡೆಸಿದರೂ ಸಹ ಇಂದಿಗೂ ರೈತರ ಖಾತೆಗಳಿಗೆ ಬಿಡಿಗಾಸು ಬಂದಿಲ್ಲ ಇದಕ್ಕೆ ಉತ್ತರ ತಿಳಿಸಲಾಗದೇ ಉದ್ದೇಶಪೂರ್ವ ಕವಾಗಿಯೇ ಆ.21 ಮತ್ತು ಆ.29 ರಂದು ನಿಗದಿಯಾಗಿದ್ದ ಎರಡೂ ಸಭೆಗಳಿಗೆ ವಿಮೆ ಕಂಪನಿ ಪ್ರತಿನಿಧಿಗಳು ಗೈರಾಗಿದ್ದಾರೆ ಇದರಿಂದ ರೈತರಿಗೆ ಅವಮಾನ ಮಾಡಿದಂತಾಗಿದ್ದು ದಿನದ ಕೂಲಿ ಕೊಟ್ಟು ನಮ್ಮನ್ನು ಇಲ್ಲಿಂದ ಕಳುಹಿಸಿ ಇಲ್ಲವೇ ಬೆಳೆವಿಮೆ ಹಣ ಬಿಡುಗಡೆ ಮಾಡುವಂತೆ ಬಿಗಿಪಟ್ಟು ಹಿಡಿದರು.
ನಿಮ್ಮ ಕಂಪ್ಯೂಟರ್ ಸರಿಯಾಗಿಲ್ಲ: ಗಂಗಣ್ಣ ಎಲಿ ಮಾತನಾಡಿ, ರೈತರ ಬ್ಯಾಂಕ್ ವಿವರ ಸರಿಯಾಗಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಧಿಕಾರಿಗಳು ತಮ್ಮ ಅಸಹಾಯ ಕತೆ ತೋರುತ್ತಿದ್ದು ವಿಮೆ ಕಂಪನಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ, ಒಂದು ವೇಳೆ ಬ್ಯಾಂಕ್ ವಿವರ ಸರಿಯಾಗಿಲ್ಲದಿದ್ದರೇ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲವೇ, ನಿಮ್ಮಂತಹವರ ಕುಮ್ಮಕ್ಕಿನಿಂದಲೇ ವಿಮೆ ಕಂಪನಿಗಳು ರೈತರಿಗೆ ಮೋಸ ಮಾಡಲು ಮುಂದಾಗಿದ್ದಾರೆ, ಇದಕ್ಕೆಲ್ಲಾ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಕೃಷಿ ಇಲಾಖೆಗಳೇ ಹೊಣೆಯಾಗಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಮಧ್ಯಸ್ಥಿಕೆ: ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಮದ್ಯಪ್ರವೇಶಿಸಿದ ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮದ್ಯ ಪ್ರವೇಶಿಸಿದರಲ್ಲದೇ, ಪ್ರತಿಭಟನಾಕಾರರ ಜೊತೆ ದೂರವಾಣಿ ಮೂಲಕ ಮಾತನಾಡಿ, ಇನ್ನೆರಡು ದಿನಗಳಲ್ಲಿ ವಿಮೆ ಪ್ರತಿನಿಧಿಗಳನ್ನು ತಮ್ಮೆದರು ತಂದು ನಿಲ್ಲಿಸಲಾಗುವುದು ಮತ್ತು ತಮ್ಮೆಲ್ಲಾ ಪ್ರಶ್ನೆಗಳಿಗೆ ಅವರಿಂದಲೇ ಉತ್ತರ ಕೊಡಿಸಲಾಗುವುದು ಆದರೆ ಅಲ್ಲಿಯವರೆಗೂ ತಾಳ್ಮೆ ಕಳೆದುಕೊಳ್ಳದೇ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು… ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ರೈತರು ತಹಶೀಲ್ಧಾರ ಕಛೇರಿಯಿಂದ ನಿರ್ಗಮಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜೆ.ಎಚ್.ತಳವಾರ, ಕಿರಣ ಗಡಿಗೋಳ, ಡಾ.ಕೆ.ವಿ.ದೊಡ್ಡಗೌಡ್ರ, ಮೌನೇಶ ಬಡಿಗೇರ, ನಿಂಗಪ್ಪ ಹೆಗ್ಗಪ್ಪನವರ, ಶೇಖಪ್ಪ ಕಾಶಿ, ಮಂಜುನಾಥ ಹಿರೇಮಠ. ಈರಪ್ಪ ವತ್ಲಳ್ಳಿ ಹನುಮಂತಪ್ಪ, ವಿ.ಸಿ.ಹಾವೇರಿಮಠ, ಗಿರೀಶ್ ಮುದ್ದಶೆಟ್ಟಿ, ಅಶೋಕ ಮಾಳೇನಹಳ್ಳಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ