ತಾಂಡ್ಯಗಳಿಗಿಲ್ಲ ರಸ್ತೆ ಭಾಗ್ಯ : ಸಂಚಾರಕ್ಕೆ ಪರದಾಟ

ಹುಳಿಯಾರು:

                        ಸಮಸ್ಯೆ ಆಲಿಸದ ಅಧಿಕಾರಿಗಳು-ಜನ ಪ್ರತಿನಿಧಿಗಳು : ಆರೋಪ

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ದೇಶದೆಲ್ಲೆಡೆ ಅದ್ಧೂರಿಯಾಗಿ ಅಮೃತ ಮಹೋತ್ಸವ ಆಚರಿಸಿದ್ದೂ ಆಯಿತು. ಆದರೇ ಭಾರತದ ಹಲವು ಗ್ರಾಮಗಳು ಇಂದಿಗೂ ಸೂಕ್ತ ರಸ್ತೆ ಸಂಪರ್ಕ ಕಾಣದೇ ಕುಗ್ರಾಮವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಪರದಾಡುತ್ತಿವೆ.

ಇದಕ್ಕೆ ಹೋಬಳಿಯ ತಾಂಡ್ಯ, ಹಟ್ಟಿ, ಮಜರೆ ಗ್ರಾಮ ಹಾಗೂ ಪಾಳ್ಯಗಳೂ ಹೊರತಲ್ಲ. ಇಂಡಿಯಾದ ನಗರಗಳನ್ನು ಸ್ಮಾರ್ಟ್ ಮಾಡಲು ಹೋದ ಅಧಿಕಾರಸ್ಥರಿಗೆ ಗ್ರಾಮೀಣ ಭಾರತದ ಹಳ್ಳಿಗಳ ಸಮಸ್ಯೆಗಳು ಕಾಣದೇ ಹೋದುದು ದುರಂತ.

ಹುಳಿಯಾರು ಹೋಬಳಿಯ ಅನೇಕ ತಾಂಡ್ಯಗಳ ರಸ್ತೆಗಳು ಇದುವರೆಗೂ ಡಾಂಬಾರ್ ಕಾಣದೆ ಸುಗಮ ಸಂಚಾರದ ತೊಂದರೆ ಅನುಭವಿಸುತ್ತಿವೆ. ಆದರೇ ಇಲ್ಲಿನ ಜನರ ಸಮಸ್ಯೆಗಳಿಗೆ ಯಾವೊಬ್ಬ ಅಧಿಕಾರಿಯಾಗಲಿ, ಜನ ಪ್ರತಿನಿಧಿಯಾಗಲಿ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗುಂಡಿ ಬಿದ್ದ ರಸ್ತೆಗಳು :

ಹುಳಿಯಾರು ಹೋಬಳಿಯ ಬರಕನಾಲ್ ಬಳಿಯ ಗೋಪಾಲನಾಯ್ಕನತಾಂಡ್ಯ ಮತ್ತು ಖಾನನಾಯಕನತಾಂಡ್ಯ, ಉಂಬಳನಾಯಕನ ತಾಂಡ್ಯ ಮತ್ತು ದೊಡ್ಡಹಟ್ಟಿಯ ಗ್ರಾಮಗಳು ಯರೇಹಳ್ಳಿಯನ್ನು ಸಂಪರ್ಕಿಸುತ್ತವೆ.

ಆದರೆ ಈ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಡಾಂಬರನ್ನೇ ಕಾಣದೆ ಬಹುತೇಕ ಗುಂಡಿಮಯವಾಗಿವೆ. ಕೆಲವು ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. 3-4 ಕಿ.ಮೀ. ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ.

ದೊಡ್ಡ ದೊಡ್ಡ ಹೊಂಡದ ಜೊತೆಗೆ ಜಲ್ಲಿ ಕಲ್ಲು ಮೇಲೆದ್ದು ಓಡಾಡಲು ಕಷ್ಟಕರವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.

ವಿದ್ಯಾರ್ಥಿ, ರೈತರಿಗೆ ತೊಂದರೆ :

ಈ ಗ್ರಾಮಗಳಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 1,500 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದ ಕಾರಣ ಇವರೆಲ್ಲರೂ ಈ ರಸ್ತೆಯ ಮೂಲಕ ಪಟ್ಟಣಕ್ಕೆ ತೆರಳಬೇಕು.

50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಿ ಬರಬೇಕಾದರೆ ಪ್ರತಿನಿತ್ಯ 7-8 ಕಿ.ಮೀ ನಡೆಯಬೇಕು. ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಇಲ್ಲಿನ ಕುಟುಂಬಗಳು ಮನೆಗೆ ಬೇಕಾಗುವ ಆಹಾರ ಸಾಮಗ್ರಿಗಳು, ತೋಟಗಳಿಗೆ ಬೇಕಾದ ಗೊಬ್ಬರ, ಸುಣ್ಣಗಳನ್ನು ತರಬೇಕಾದರೆ ಬಾಡಿಗೆ ವಾಹನ ಮತ್ತು ಸ್ವಂತ ವಾಹನಗಳಲ್ಲಿ ಈ ರಸ್ತೆಯಲ್ಲೇ ಸಾಗಬೇಕು.

ಜೀವ ಕೈಲಿಡಿದು ಸಂಚಾರ :

ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಬೇಸಿಗೆಯಲ್ಲಿ ಧೂಳಿನ ಸಂಕಟ ಎದುರಿಸುವಂತಾಗಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚರಿಸಿದ ನಂತರ ಧೂಳು ಆವೃತವಾಗುತ್ತದೆ.

ಕಾಲ್ನಡಿಗೆಯಲ್ಲಿ ತೆರಳುವ ಸಾರ್ವಜನಿಕರಿಗೆ ಇದರಿಂದ ತೊಂದರೆಯುಂಟಾಗಿದೆ. ವಿಪರೀತ ಧೂಳಿನಿಂದ ಜನರು ಹೈರಾಣಾಗುವ ಜೊತೆಗೆ ಬೈಕ್ ಸವಾರರು ಜೀವ ಕೈಲಿಡಿದುಕೊಂಡು ಓಡಾಡಬೇಕಿದೆ. ಜಲ್ಲಿ ಕಲ್ಲಿನ ನಡುವೆಯೇ ಸವಾರರು ಸಂಚರಿಸುತ್ತಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುಂತಾಗಿದೆ.

ಪ್ರಯೋಜನವಾಗದ ಮನವಿ :

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಈ ರಸ್ತೆ ಸೇರಿಸಿದರೆ 6-7 ಗ್ರಾಮಗಳ ರಸ್ತೆಗಳು ಡಾಂಬರ್ ಕಾಣುತ್ತವೆ. ಅಲ್ಲದೆ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಲ್ಲಿ ರಸ್ತೆ ದುರಸ್ಥಿ ಮಾಡಬಹುದಾದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಅನೇಕ ಬಾರಿ ಡಾಂಬರೀಕರಣ ಮಾಡಲು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ರಾಜಕಾರಣಿಗಳ ಮೇಲೆ ಆರೋಪ :

ಪ್ರತಿ ಚುವಾಣೆಗೆ ಮತ ಕೇಳಲು ಬರುವ ರಾಜಕಾರಣಿಗಳು ಡಾಂಬರೀಕರಣ ಮಾಡುವ ಭರವಸೆ ನೀಡುತ್ತರಾದರೂ ಗೆದ್ದ ನಂತರ ಇತ್ತ ತಿರುಗಿಯೂ ಸಹ ನೋಡುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿವೆ. ರಾಜಕಾರಣಿಗಳು ಇನ್ನಾದರೂ ಇತ್ತ ಗಮನ ಹರಿಸಿ ರಸ್ತೆ ದುರಸ್ಥಿಗೆ ಮುಂದಾಗಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಬಾಕ್ಸ್ ಕೋಟ್ : 1

ಒಮ್ಮೆಲೆ ಎರಡು ವಾಹನ ಓಡಾಡಲ್ಲ :

ಈ ತಾಂಡ್ಯಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ, ಜಲ್ಲಿ ರಸ್ತೆಯಾಗಿರುವ ಜೊತೆಗೆ ಕಿರಿದಾಗಿವೆ. ಒಮ್ಮೆಲೆ ನಾಲ್ಕು ಚಕ್ರದ ವಾಹನಗಳು ಎದುರು ಬದರು ಬಂದರೆ ಪಾಸ್ ಮಾಡಲು ಹರಸಾಹಸ ಪಡಬೇಕಿದೆ.

ಈ ಹಿಂದೆ ಬಾಲದೇವರಹಟ್ಟಿಯಿಂದ ಡಾಂಬರೀಕರಣ ಮಾಡಲು ಮುಂದಾದರಾದರೂ ಅರೆಬರೆ ಕಾಮಗಾರಿ ಮಾಡಿ ಸುಮ್ಮನಾದರು. ಹಾಗಾಗಿ ಈ ರಸ್ತೆ ಇನ್ನೂ ಓಡಾಡಲು ಯೋಗ್ಯವಾಗಿಲ್ಲ. ಈ ಭಾಗದ ರಾಜಕೀಯ ಮುಖಂಡರು ರಸ್ತೆ ಈಗ ಆಗುತ್ತದೆ, ಆಗ ಆಗುತ್ತದೆ ಎನ್ನುತ್ತಾರಾದರೂ ಇದೂವರೆವಿಗೂ ಆಗುವ ಲಕ್ಷಣಗಳು ಕಾಣುತ್ತಿಲ್ಲ.

-ಲಕ್ಕನಾಯ್ಕ, ನಿವಾಸಿ, ಬರಕನಹಾಲ್ ತಾಂಡ್ಯ

 

ಗ್ರ್ಯಾಂಟ್ ನೋಡಿಕೊಂಡು ಡಾಂಬರ್ ಹಾಕುತ್ತೇವೆ :

ಈ ತಾಂಡ್ಯಗಳ ರಸ್ತೆಗಳು ಏಕೆ ಇನ್ನೂ ಡಾಂಬರೀಕರಣ ಆಗಿಲ್ಲವೊ ತಿಳಿಯದಾಗಿದೆ. ಪಿಡ್ಲ್ಯೂಡಿ, ಹೇಮಾವತಿ ಯೋಜನೆಯಿಂದಾದರೂ ಡಾಂಬರ್ ರಸ್ತೆಯನ್ನಾಗಿ ಪರಿವರ್ತಿಸಬಹುದಾಗಿದೆ. ಈಗ ಯಾವುದಾದರೂ ಗ್ರ್ಯಾಂಟ್ ಬಂದರೆ ಮೊದಲ ಆದ್ಯತೆಯ ಮೇರೆಗೆ ಇಲಾಖೆಯಿಂದಾದರೂ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ.

-ಸೋಮಶೇಖರ್, ಜಿಪಂ, ಎಇಇ, ಚಿಕ್ಕನಾಯಕನಹಳ್ಳಿ

-ಎಚ್.ಬಿ.ಕಿರಣ್‍ಕುಮಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link