ತಾಲೂಕಿನಲ್ಲಿ ಉಪ ವಿಭಾಗೀಯ ಕಚೇರಿಗಳು ಯಥಾವತ್ತಾಗಿ ಮುಂದುವರಿಯಲಿ: ಸಂಘಟನೆಗಳ ಆಗ್ರಹ

ಹರಪನಹಳ್ಳಿ,:

      1998 ರಿಂದ ಹರಪನಹಳ್ಳಿ ತಾಲ್ಲೂಕು ಉಪವಿಭಾಗಾಧಿಕಾರಿಗಳ ಕಛೇರಿಯನ್ನು ಹೊಂದಿದ್ದು ನಾಲ್ಕು ಹೋಬಳಿಗಳ ಅತ್ಯಂತ ದೊಡ್ಡ ಹಿಂದುಳಿದ ತಾಲ್ಲೂಕಾಗಿದ್ದು ಈಗ ಕಛೇರಿಯನ್ನು ಸ್ಥಳಾಂತರಿಸಿರುವುದು ಅಭಿವೃದ್ಧಿಗೆ ಮಾರಕವಾಗಲಿದೆ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಆಗ್ರಹಿಸಿದರು.  

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ ತಾಲ್ಲೂಕಿನ ಉಪವಿಭಾಗಾಧಿಕಾರಿಗಳ ಕಛೇರಿಯನ್ನು ಯಥಾರೀತಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಸರಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಈ ಬಗ್ಗೆ ಮುಖ್ಯಮಂತ್ರಿಗಳ ಬಳಿಗೆ ಪಕ್ಷಾತೀತವಾಗಿ ನಿಯೋಗ ಹೋಗಲು ಪ್ರಗತಿಪರಸಂಘಟನೆಗಳ ಪದಾಧಿಕಾರಿಗಳು ತಿರ್ಮಾನಿಸಿದರು.

         ಕೋಡಿಹಳ್ಳಿ ಭೀಮಪ್ಪ ಮಾತನಾಡಿ ಹರಪನಹಳ್ಳಿ ತಾಲೂಕು ನಂಜುಂಡಪ್ಪನವರ ವರದಿ ಪ್ರಕಾರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದೆ. ಪ.ಜಾತಿ, ಪ.ಪಂಗಡ ಹಾಗೂ ಕೃಷಿ ಕೂಲಿಕಾರರ ಜನಸಂಖ್ಯೆ ಹೆಚ್ಚಿದೆ. ಅದರಲ್ಲೂ ಗುಳೇಹೋಗುವವರ ಸಂಖ್ಯೆ ಹೆಚ್ಚಿದೆ. ತಾಲೂಕಿನ ಬಡಜನರು ಸಣ್ಣ ಪುಟ್ಟ ವ್ಯಾಜ್ಯಗಳಿಗೆ ಎಸಿ ಕಛೇರಿಗೆ ಹೊಸಪೇಟೆಗೆ ಹೋಗುವುದು ಅರ್ಥಿಕ ಹೊರೆಯಾಗಲಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಉಪವಿಭಾಗಾಧಿಕಾರಿಗಳ ಕಛೇರಿ ಸೇರಿದಂತೆ ಎಲ್ಲಾ ಕಛೇರಿಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು ಇವುಗಳನ್ನು ಸ್ಥಳಾಂತರಿಸದೇ ಹಾಗೆ ಮುಂದುವರೆಸಬೇಕು. ತಾಲ್ಲೂಕಿನ ಸಮಗ್ರ ಅಭಿವೃದ್ದಿ ಪಕ್ಷಾತೀತವಾಗಿ ಸಂಘ, ಸಂಸ್ಥೆಗಳು, ಮಠಾಧೀಶ್ವರರು, ಪತ್ರಕರ್ತರು ಒಳಗೊಂಡು ನಿಯೋಗ ಸಿಎಂ ರವರ ಬಳಿಗೆ ತೆರಳಲು ಸಂಘಟಿತರಾಗಬೇಕು ಎಂದು ಹೇಳಿದರು.

       ಲೆಕ್ಕಪರಿಶೋದಕ ಜಿ.ನಂಜನಗೌಡ ಮಾತನಾಡಿ ಪಕ್ಷತೀತವಾಗಿ 371ಜೆ ಸೌಲಭ್ಯ ಸಲುವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದರ ಫಲ ಇಂದು ಬಳ್ಳಾರಿ ಜಿಲ್ಲೆಗೆ ತಾಲೂಕು ಸೇರ್ಪಡೆಗೊಂಡಿದೆ. ಸರಕಾರ ತಾಲ್ಲೂಕುನ್ನು ಹೊಸಪೇಟೆ ಉಪವಿಭಾಗಕ್ಕೆ ಸೇರಿಸಿರುವುದು ಸೂಕ್ತವಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಒಂದು ತಾಲ್ಲೂಕಿಗಿಂತ ಹೆಚ್ಚು ಕಾರ್ಯಭಾರ ಮಾಡುವ ಎಲ್ಲಾ ಕಚೇರಿಗಳು ಕೈ ತಪ್ಪುವ ಸಾಧ್ಯ ಹೆಚ್ಚಿದೆ. ಆದ್ದರಿಂದ ತಾಲೂಕಿನ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೊಟ್ಟೂರು, ಹಡಗಲಿ ಹಾಗೂ ಹರಪನಹಳ್ಳಿಯ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡು ನಿಯೋಗ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಮಾಡಬೇಕು. ಸಕಾರತ್ಮಕ ಸ್ಪಂದನೆ ಸಿಗದಿದ್ದರೆ ಬೃಹತ್ ಹೋರಾಟವನ್ನು ಮಾಡಬೇಕು 371 ಜೆ ಕಲಂ ಸೌಲಭ್ಯ ಪಡೆಯುವಲ್ಲೂ ಇನ್ನೂ ಸಂದೇಹವಿದ್ದು 371ಜೆ ಹೋರಾಟ ವ್ಯರ್ಥ ಪ್ರಯತ್ನವಾಗಲಿದೆ ಎಂದು ತಿಳಿಸಿದರು.

       ಹೆಚ್.ಎಂ.ಸಂತೋಷ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಧಿಕ 11 ತಾಲ್ಲೂಕುಗಳಿದ್ದು ಆಡಳಿತ್ಮಾಕ ದೃಷ್ಠಿಯಿಂದ ತಾಲ್ಲೂಕುಗಳಿಗೆ ಉಪವಿಭಾಗ ಕಛೇರಿಗಳು ಹತ್ತಿರವಿದ್ದರೆ ಸೂಕ್ತ. ಹರಪನಹಳ್ಳಿಯಲ್ಲಿ ಈಗಿರುವ ಉಪವಿಭಾಗಕ್ಕೆ ಕಟ್ಟಡ ಹಾಗೂ ಸಿಬ್ಬಂದಿಯ ಕೊರತೆಯಿಲ್ಲ ಅದನ್ನು ಮುಂದುವರಿಸಲು ಯಾವುದೇ ಅರ್ಥಿಕ ಹೊರೆ ಸರ್ಕಾರಕ್ಕೆ ತಟ್ಟುವುದಿಲ್ಲ ಎಂದರು.

       ತಾಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ರಾಜಪ್ಪ, ಕಬ್ಬಳ್ಳಿ ಬಸವರಾಜ, ನಾಗರಾಜ ಪಾಟೀಲ್, ಸಂದೇರ ಪರಶುರಾಮ, ಗುಡಿಹಳ್ಳಿ ಹಾಲೇಶ್, ಎಚ್.ಎಂ.ಸಂತೋಷ್, ಬಸವರಾಜ, ಪುಣಭಗಟ್ಟಿ ನಿಂಗಪ್ಪ, ನಿಯೋಗ ಹೋಗವುದರ ಕುರಿತು ಮತ್ತು ಹೋರಾಟದ ರೂಪು ರೇಷೆ ಬಗ್ಗೆ ಮಾತನಾಡಿದರು.ನೀಲಗುಂದ ವಾಗೀಶ್, ಮಂಜುನಾಥ, ಓಂಕಾರಗೌಡ, ಬಾಣದ ಅಂಜಿನಪ್ಪ ಹಾಗೂ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link